ಮಮತಾ ದೀದಿ ಹೆಸರಲ್ಲಿ ಬದುಕಿದ ಇವರೆಲ್ಲಾ ಸಂಪೂರ್ಣ ನಿರುಪಯುಕ್ತರು!...ರೆಬೆಲ್ಸ್ ವಿರುದ್ಧ ಸಂಸದೆ ಮೊಯಿತ್ರಾ ವಾಗ್ದಾಳಿ | Mahua Moitra

Mahua Moitra | ಸಂಸದೆ ಮಹುವಾ ಮೊಯಿತ್ರಾ
Mahua Moitra | ಸಂಸದೆ ಮಹುವಾ ಮೊಯಿತ್ರಾ
Published on
ಕೋಲ್ಕತ್ತಾ: ಸುಮಾರು ಮೂರು ದಶಕಗಳ ಇತಿಹಾಸವಿರುವ ತೃಣಮೂಲ ಕಾಂಗ್ರೆಸ್ (TMC) ಸದ್ಯ ಅತಿ ದೊಡ್ಡ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಈ ನಡುವೆ ಪಕ್ಷದ ಸಂಸದೆ ಮಹುವಾ ಮೊಯಿತ್ರಾ( Mahua Moitra) ಬಂಡಾಯ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಾಸಕಾಂಗ ಪಕ್ಷವನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಬಂಡಾಯಗಾರರನ್ನು ಸಂಪೂರ್ಣ ನಿರುಪಯುಕ್ತ ನಾಯಕರು ಎಂದು ಕರೆದಿರುವ ಮೊಯಿತ್ರಾ, ಇವರೆಲ್ಲಾ ಮಮತಾ ಬ್ಯಾನರ್ಜಿ ಅವರ ವರ್ಚಸ್ಸಿನಿಂದ ಅಸ್ತಿತ್ವ ಕಾಯ್ದುಕೊಂಡಿದ್ದು, ವಿರೋಧ ಪಕ್ಷದ ಸಾಲಿನಲ್ಲಿ ನಿಂತು ಬಿಜೆಪಿಯನ್ನು ಎದುರಿಸುವ ಧೈರ್ಯ ಇವರಿಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಇಂಡಿಯಾ ಟುಡೇ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಮೊಯಿತ್ರಾ, ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ಮತ್ತು ಬಂಧನದ ಭೀತಿ ಒಡ್ಡಿ ಬಿಜೆಪಿ ಈ ಒಡಕನ್ನು ಸೃಷ್ಟಿಸಿದೆ ಎಂದು ಆರೋಪಿಸಿದರು. ಉಚ್ಚಾಟಿತ ಶಾಸಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯಗಾರರು ವರ್ಷಗಳ ಕಾಲ ಅಧಿಕಾರ ಅನುಭವಿಸಿ ಈಗ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧರಿಲ್ಲ, ಅದಕ್ಕಾಗಿಯೇ ಅವರು ಈ ಸುರಕ್ಷಿತ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಾಯಕರು ಸಂಪೂರ್ಣ ನಿರುಪಯುಕ್ತರು, ಅವರಿಗೆಲ್ಲಾ ಧೈರ್ಯವಿದ್ದರೆ ನಿಮ್ಮದೇ ಆದ ರಿತಬ್ರತಾ ಕಾಂಗ್ರೆಸ್ ಮಾಡಿಕೊಳ್ಳಿ, ಏನಾದರೂ ಮಾಡಿಕೊಳ್ಳಿ. ಆದರೆ ನಿಮ್ಮನ್ನು ತೃಣಮೂಲ ಕಾಂಗ್ರೆಸ್ ಎಂದು ಕರೆದುಕೊಳ್ಳಬೇಡಿ ಎಂದು ಮಹುವಾ ಮೊಯಿತ್ರಾ ಗುಡುಗಿದ್ದಾರೆ.

ಸಿಎಂಗೆ ಪ್ರತಿ ಶಾಸಕರ ಬಲಹೀನತೆ ಗೊತ್ತು

ಈಗ ದೇಶದ ಕಣ್ಣೆದುರು ನಡೆಯುತ್ತಿರುವುದನ್ನು ಗಮನಿಸಿ, ಬಿಜೆಪಿ ವಿರೋಧ ಪಕ್ಷದ ನಾಯಕರು ಯಾರೆಂಬುದನ್ನು ತಾನೇ ನಿರ್ಧರಿಸಲು ಹೊರಟಿದೆ. ಕೇವಲ ಪಕ್ಷಗಳನ್ನು ಒಡೆಯುವುದಷ್ಟೇ ಅಲ್ಲ, ತಾವು ಗೆದ್ದ ರಾಜ್ಯಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ತಾವೇ ಆಯ್ಕೆ ಮಾಡಲು ಬಿಜೆಪಿ ಸಂಚು ರೂಪಿಸುತ್ತಿದೆ. ಟಿಎಂಸಿಯ ಮಾಜಿ ನಾಯಕ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ಪ್ರತಿ ಶಾಸಕರ ಬಲಹೀನತೆ ಏನೆಂಬುದು ಗೊತ್ತು. ಹೀಗಾಗಿ ಅವರೇ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಶಾಸಕರನ್ನು ಸೆಳೆದಿದ್ದಾರೆ ಎಂದು ಮಹುವಾ ಹೇಳಿದ್ದಾರೆ.
ಯಾವ ಶಾಸಕರ ದೌರ್ಬಲ್ಯ ಏನು ಎಂಬುದು ಮುಖ್ಯಮಂತ್ರಿಗಳಿಗೆ ಚೆನ್ನಾಗಿ ಗೊತ್ತು. ಉದಾಹರಣೆಗೆ, ಮೊತಾಬರಿಯ ಶಾಸಕಿ ಸಬಿನಾ ಯಾಸ್ಮಿನ್ ಅವರಿಗೆ ಮೊತಾಬರಿ ಹಿಂಸಾಚಾರ ಪ್ರಕರಣದಲ್ಲಿ ಎನ್‌ಐಎ (NIA) ನಿಮ್ಮನ್ನು ವಶಕ್ಕೆ ಪಡೆಯಲಿದೆ ಎಂದು ಹೆದರಿಸಲಾಗಿದೆ. ಜಾವೇದ್ ಖಾನ್ ಎಂಬುವವರಿಗೆ ಅಕ್ರಮ ಕಟ್ಟಡ ನಿರ್ಮಾಣದ ಆರೋಪದಡಿ ನಿಮ್ಮನ್ನು ಮತ್ತು ನಿಮ್ಮ ಮಗನನ್ನು ಬಂಧಿಸಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಹೀಗೆ ಪ್ರತಿಯೊಬ್ಬರ ಮೇಲೂ ಒಂದೊಂದು ರೀತಿಯ ಒತ್ತಡ ಹೇರಲಾಗಿದೆ ಎಂದು ಟಿಎಂಸಿ ಸಂಸದೆ ವಿವರಿಸಿದ್ದಾರೆ.

ಕೇವಲ ಸೇಫ್ ಗೇಮ್ ಆಡುತ್ತಿದ್ದಾರೆ

ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮೊಯಿತ್ರಾ, 15 ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಇವರಿಗೆ ಈಗ ವಿರೋಧ ಪಕ್ಷದಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಇವರೆಲ್ಲಾ ಹೋರಾಟದ ಗುಣವನ್ನೇ ಮರೆತಿದ್ದಾರೆ. ಇವರಿಗೆ ಬಿಜೆಪಿ, ಪೊಲೀಸ್, ಇಡಿ (ED) ಅಥವಾ ಸಿಬಿಐ (CBI) ಎದುರಿಸುವ ಧೈರ್ಯವಿಲ್ಲ. ಕೇವಲ ಸೇಫ್ ಗೇಮ್ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ತೊರೆದಾಗ ಕೇವಲ ಒಂದು ಪೆನ್ ಮತ್ತು ಪೇಪರ್ ಹಿಡಿದು ಈ ಪಕ್ಷದ ಗುರುತನ್ನು ತಾವೇ ಬರೆದು ಗೆದ್ದವರು. ಮೂರು ಬಾರಿ ಮುಖ್ಯಮಂತ್ರಿಯಾದ ಸಾಧಕಿ, ಬೇಕಿದ್ದರೆ ಮತ್ತೊಂದು ಹೊಸ ಗುರುತನ್ನು ಸೃಷ್ಟಿಸಿ ಹೋರಾಡಬಲ್ಲರು. ಅವರು ನಮ್ಮ ಯಾವುದೇ ಚಿಹ್ನೆ ಅಥವಾ ಫೋಟೋವನ್ನು ತೆಗೆದುಕೊಳ್ಳಲಿ, ಆದರೆ ಅವರು ಎಂದಿಗೂ ನಿಜವಾದ ತೃಣಮೂಲ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net