ಡಾನ್ 3 ಚಿತ್ರ ವಿವಾದ; ಬಾಲಿವುಡ್​ನಿಂದ ಬಹಿಷ್ಕಾರ; ನಟ ರಣವೀರ್ ಸಿಂಗ್ ಹೇಳಿದ್ದೇನು? | Ranveer Singh

ನಟ ರಣವೀರ್ ಸಿಂಗ್
ನಟ ರಣವೀರ್ ಸಿಂಗ್
Published on
ಮುಂಬೈ: ಡಾನ್ 3 ಚಿತ್ರದಿಂದ ಕೊನೆ ಕ್ಷಣದಲ್ಲಿ ಸಿನಿಮಾದಿಂದ ಹೊರನಡೆದ ವಿವಾದದ ಮಧ್ಯೆ ನಟ ರಣವೀರ್ ಸಿಂಗ್(Ranveer Singh) ವಿರುದ್ಧ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್(FWICE) ಸೋಮವಾರ ನಟನನ್ನು ಬಾಲಿವುಡ್​ನಿಂದ ಬಹಿಷ್ಕರಿಸುವ ಘೋಷಣೆ ಮಾಡಿದ್ದು, ಈ ಕುರಿತು ನಟ ಮೊದಲ ಪ್ರತಿಕ್ರಿಯೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಿವಾದದ ಬಗ್ಗೆ ರಣವೀರ್ ಸಿಂಗ್ ಅವರ ವಕ್ತಾರರು ಮೊದಲ ಪ್ರಕಟಣೆ ಬಿಡುಗಡೆ ಮಾಡಿದ್ದು, ಚಲನಚಿತ್ರರಂಗ ಮತ್ತು ಡಾನ್ ಫ್ರಾಂಚೈಸಿಗೆ ಸಂಬಂಧಿಸಿದ ಪ್ರತಿಯೊಬ್ಬರ ಬಗ್ಗೆ ರಣವೀರ್ ಸಿಂಗ್ ಅವರಿಗೆ ಅತ್ಯುನ್ನತ ಗೌರವವಿದೆ. ಇತ್ತೀಚಿನ ಬೆಳವಣಿಗೆಗಳ ಉದ್ದಕ್ಕೂ, ವೃತ್ತಿಪರ ಚರ್ಚೆಗಳು ಮತ್ತು ವೈಯಕ್ತಿಕ ಘಟನೆಗಳನ್ನು ಘನತೆ, ಪ್ರಬುದ್ಧತೆ ಮತ್ತು ಪರಸ್ಪರ ಗೌರವದಿಂದ ನಿರ್ವಹಿಸಲಾಗುತ್ತದೆ ಎಂದು ನಂಬಿ ಪ್ರಜ್ಞಾಪೂರ್ವಕವಾಗಿ ನಟ ಮೌನವನ್ನು ಕಾಯ್ದುಕೊಳ್ಳಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಾನ್ ಫ್ರಾಂಚೈಸಿ ತಂಡಕ್ಕೆ ಶುಭ ಹಾರೈಸಿರುವ ಅವರು, ಮಾಧ್ಯಮಗಳಲ್ಲಿ ಈ ವಿಷಯವನ್ನು ಚರ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಲವಾರು ನಿರೂಪಣೆ, ಊಹಾಪೋಹಗಳು ಕಾಲಾನಂತರದಲ್ಲಿ ಹೊರಹೊಮ್ಮಿದ್ದರೂ, ರಣವೀರ್ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವುದು ಅಥವಾ ಊಹೆಗೆ ಕೊಡುಗೆ ನೀಡುವುದು ಅಗತ್ಯವೆಂದು ಎಂದಿಗೂ ಪರಿಗಣಿಸಿಲ್ಲ. 
ರಣವೀರ್ ಅವರ ಗಮನವು ಕೆಲಸ ಮತ್ತು ಮುಂದಿನ ಬದ್ಧತೆಗಳ ಮೇಲೆ ದೃಢವಾಗಿ ಉಳಿದಿದೆ. ಅವರು ಭಾಗಿಯಾಗಿರುವ ಎಲ್ಲರಿಗೂ ಆಳವಾದ ಗೌರವ ಮತ್ತು ಸದ್ಭಾವನೆಯನ್ನು ಹೊಂದಿದ್ದಾರೆ. ಮತ್ತು ಫ್ರಾಂಚೈಸಿ ನಿರಂತರ ಯಶಸ್ಸನ್ನು ಪ್ರಾಮಾಣಿಕವಾಗಿ ಬಯಸುತ್ತಾರೆ. ಇಂತಹ ಕ್ಷಣಗಳಲ್ಲಿ ಸಂಯಮ ಮತ್ತು ಅನುಗ್ರಹವನ್ನು ಆರಿಸಿಕೊಳ್ಳುವುದು ಯಾವಾಗಲೂ ಅವರ ಕಡೆಯಿಂದ ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ. ಮತ್ತು ಅವರು ಅದೇ ನಿಲುವನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದೆ. 

ಬಾಲಿವುಡ್​ನಿಂದ ಬಹಿಷ್ಕಾರ

ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಡಾನ್ 3 ಸಿನಿಮಾ ನಿರ್ಮಾಣವಾಗುತ್ತಿದ್ದು, ಅನೌನ್ಸ್ ಆದಾಗಿನಿಂದಲೂ ಭಾರಿ ಕುತೂಹಲ ಇತ್ತು. ಆದರೆ, ಶೂಟಿಂಗ್ ತಂಡ ವಿದೇಶಕ್ಕೆ ಹೊರಡಲು ಕೇವಲ 3 ವಾರಗಳು ಬಾಕಿ ಇರುವಾಗ ರಣವೀರ್ ಸಿಂಗ್ ದಿಢೀರನೆ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದರಿಂದ ನಿರ್ಮಾಪಕರಿಗೆ ಕೋಟಿ-ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ. 
ಇದರಿಂದ ಬೇಸತ್ತ ಫರ್ಹಾನ್ ಅಖ್ತರ್, ಕಳೆದ ಏಪ್ರಿಲ್ 11ರಂದು ಫೆಡರೇಶನ್‌ಗೆ (FWICE) ರಣವೀರ್ ಸಿಂಗ್ ವಿರುದ್ಧ ಲಿಖಿತ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ರಣವೀರ್​ ಸಿಂಗ್​ನ್ನು ಈಗ ಬಹಿಷ್ಕಾರ ಹಾಕಲಾಗಿದೆ. ಇನ್ಮುಂದೆ ರಣವೀರ್​ ನಟಿಸುವ ಸಿನಿಮಾಗಳಲ್ಲಿ ಒಕ್ಕೂಟದ ಯಾವುದೇ ಸದಸ್ಯ ಕೆಲಸ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net