ನಾಯಿ ಮುಖವಾಡ ಧರಿಸಿ ಪ್ರಶ್ನೆಗಳ ಸುರಿಮಳೆ! ಪಾಲಿಕೆಯ ಸ್ಕ್ಯಾಮ್​ ಬಯಲಿಗೆಳೆದ ವ್ಯಕ್ತಿಯ ವಿಚಿತ್ರ ಪ್ರತಿಭಟನೆ | Dog Mask

ಘಟನೆಯ ದೃಶ್ಯ
ಘಟನೆಯ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರದೇಶದ ಖಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಆಲಿಕೆ ಸಭೆಯಲ್ಲಿ ನಡೆದ ವಿಚಿತ್ರ ಪ್ರತಿಭಟನೆ
  • ಬೀದಿ ನಾಯಿಗಳ ಸಂತಾನಶಕ್ತಿ ಹರಣ ಪ್ರಕ್ರಿಯೆಯ ಹೆಸರಿನಲ್ಲಿ ಸಾರ್ವಜನಿಕರ ಲಕ್ಷಾಂತರ ರೂಪಾಯಿ ಗುಳುಂ
  • ಶ್ವಾನದ ಮುಖವಾಡ ಧರಿಸಿಯೇ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಅಕ್ರಮದ ಬಗ್ಗೆ ಪ್ರಶ್ನೆಗಳ ಸುರಿಮಳೆ
ಭೋಪಾಲ್: ನಗರಸಭೆ ಅಥವಾ ಮಹಾನಗರ ಪಾಲಿಕೆಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಶ್ನಿಸಲು ರಸ್ತೆಗಿಳಿದು, ಟೈರ್​ ಅಥವಾ ಇನ್ನಿತರ ವಸ್ತುಗಳಿಗೆ ಬೆಂಕಿಯಿಟ್ಟು, ಕಚೇರಿ ಧ್ವಂಸ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ಮಾಡುವುದನ್ನು ನೋಡಿರುತ್ತೀರಿ. ಆದರೆ, ಮಧ್ಯಪ್ರದೇಶದ ಖಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಆಲಿಕೆ ಸಭೆಯಲ್ಲಿ ನಡೆದ ವಿಚಿತ್ರ ಪ್ರತಿಭಟನೆಯೊಂದು (Dog Mask ) ಮಾತ್ರ ಅಧಿಕಾರಿಗಳ ವರ್ಗವನ್ನೇ ದಂಗಾಗಿಸಿದೆ.
ಮಹಾನಗರ ಪಾಲಿಕೆಯು, ಬೀದಿ ನಾಯಿಗಳ ಸಂತಾನಶಕ್ತಿ ಹರಣ (Sterilisation) ಪ್ರಕ್ರಿಯೆಯ ಹೆಸರಿನಲ್ಲಿ ಸಾರ್ವಜನಿಕರ ಲಕ್ಷಾಂತರ ರೂಪಾಯಿ ಹಣವನ್ನು ಗುಳುಂ ಮಾಡಿದೆ ಎಂದು ಆರೋಪಿಸಿದ ವ್ಯಕ್ತಿಯೊಬ್ಬರು, ಇದು ಬೀದಿ ನಾಯಿಗಳ ವಿಚಾರವಾದ ಹಿನ್ನಲೆ, ಅದಕ್ಕೆ ತಕ್ಕಂತೆ ತಮ್ಮ ಮುಖಕ್ಕೆ ಶ್ವಾನದ ಮುಖವಾಡ ಧರಿಸಿಯೇ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಅಕ್ರಮದ ಬಗ್ಗೆ ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.
ಖಂಡ್ವಾ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ದೀಪಕ್ ಮುಲ್ಲು ರಾಥೋಡ್ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ವ್ಯಕ್ತಿಯೊಬ್ಬರಿಗೆ ನಾಯಿಯಂತೆ ಮುಖವಾಡ ಹಾಕಿಸಿ, ಪಾಲಿಕೆಯು ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸರ್ಕಾರದಿಂದ ಬಿಡುಗಡೆಯಾದ ಲಕ್ಷಾಂತರ ರೂಪಾಯಿ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ವಾದಿಸಿದರು. ನಾಯಿಗಳ ಸಂತಾನಶಕ್ತಿ ಹರಣ ಅಭಿಯಾನವು ಕೇವಲ ಪೇಪರ್​ಗಷ್ಟೇ ಸೀಮಿತವಾಗಿದೆ. ವಾಸ್ತವ ನೋಡಿದರೆ, ನಗರಗಳಲ್ಲಿ ಬೀದಿ ನಾಯಿಗಳ ಕಾಟ ಎಂದಿನಂತೆ ಮುಂದುವರಿದಿದೆ ಎಂದು ದೂರಿದ್ದಾರೆ.

ಆಡಳಿತಸೌಧದಲ್ಲಿ ಕುತೂಹಲ

ಆರಂಭದಲ್ಲಿ ಯಾರು ಈ ರೀತಿ ನಾಯಿಯ ಮುಖವಾಡ ಧರಿಸಿ, ಅಕ್ರಮವನ್ನು ಪ್ರಶ್ನಿಸುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯಲಿಲ್ಲ. ಹಲವರು ಪ್ರತಿಭಟನೆಯನ್ನು ಬಹಳ ಕುತೂಹಲದಿಂದಲೇ ನೋಡಿದರು. ಬಳಿಕ ಅದು ವಿಪಕ್ಷ ನಾಯಕ ರಾಥೋಡ್​ ಎನ್ನುವುದು ಸ್ಪಷ್ಟವಾಯಿತು. ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ಈ ವಿಚಿತ್ರ ಹೋರಾಟವನ್ನು ವೀಕ್ಷಿಸಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಫಲಿಸಿತು ವಿಭಿನ್ನ ಹೋರಾಟ!

ಈ ವಿಚಿತ್ರ ಪ್ರತಿಭಟನೆಯಲ್ಲಿ ಕೇಳಿಬಂದ ಹಗರಣದ ಆರೋಪಗಳನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ. ದೂರು ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಕಲೆಕ್ಟರ್ ಕಾಶಿ ರಾಮ್ ಬಡೋಲೆ, "ನಾಯಿಗಳ ಸಂತಾನಶಕ್ತಿ ಹರಣ ಕೇಂದ್ರದ ಕಾರ್ಯವೈಖರಿ ಮತ್ತು ಭ್ರಷ್ಟಾಚಾರದ ಕುರಿತು ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೂರು ಬಂದಿದೆ. ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ಅಕ್ರಮ ಅಥವಾ ಹಣ ದುರುಪಯೋಗ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು" ಎಂದು ಭರವಸೆ ನೀಡಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net