

WhatsApp Username: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ಆದ ವಾಟ್ಸ್ಆಪ್, ಈ ವರ್ಷದ ಕೊನೆಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಯೂಸರ್ನೇಮ್ ಫೀಚರ್ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಬಳಕೆದಾರರು ತಮ್ಮ ಫೋನ್ ನಂಬರ್ ಹಂಚಿಕೊಳ್ಳದೆಯೇ ಇತರರೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ ಈ ಹೊಸ ತಂತ್ರಜ್ಞಾನವು, ಗೌಪ್ಯತೆಯನ್ನು ಹೆಚ್ಚಿಸುತ್ತದೆ ಎಂದು ಮೆಟಾ ಮಾಲೀಕತ್ವದ ವಾಟ್ಸ್ಆಪ್ ಹೇಳಿಕೊಂಡಿದೆ. ಆದರೆ ಸೈಬರ್ ಭದ್ರತಾ ತಜ್ಞರು ಮತ್ತು ಸ್ವತಃ ಕೇಂದ್ರ ಸರ್ಕಾರವೇ ಈ ಫೀಚರ್ನ ದುರುಪಯೋಗದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿವೆ.
ಪ್ರಸ್ತುತ ವಾಟ್ಸ್ಆಪ್ನಲ್ಲಿ ಯಾರನ್ನಾದರೂ ಸಂರ್ಪಸಬೇಕಾದರೆ ಫೋನ್ ನಂಬರ್ ಅತ್ಯಗತ್ಯ. ಆದರೆ ಹೊಸ ವ್ಯವಸ್ಥೆಯಲ್ಲಿ, ಇನ್ಸ್ಟಾಗ್ರಾಮ್ ಅಥವಾ ಎಕ್ಸ್ ಮಾದರಿಯಲ್ಲಿ ಪ್ರತ್ಯೇಕ ಯೂಸರ್ನೇಮ್ ಹೊಂದುವ ಆಯ್ಕೆ ಇರಲಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಅಥವಾ ಗ್ರೂಪ್ ಚಾಟ್ಗಳಲ್ಲಿ ಭಾಗವಹಿಸುವಾಗ ವೈಯಕ್ತಿಕ ಫೋನ್ ನಂಬರ್ ಬಹಿರಂಗವಾಗದಂತೆ ತಡೆಯಲು ಇದು ಸಹಕಾರಿ ಎಂಬುದು ವಾಟ್ಸ್ಆಪ್ ವಾದ. ಇದು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಪ್ರಮುಖ ವ್ಯಕ್ತಿಗಳ ಯೂಸರ್ನೇಮ್ ಕಾಯ್ದಿರಿಸುವ ಪ್ರಕ್ರಿಯೆಯನ್ನೂ ಸಂಸ್ಥೆ ಆರಂಭಿಸಿದೆ.
ಈ ಫೀಚರ್ ಜಾರಿಗೆ ಬಂದರೆ ಆನ್ಲೈನ್ ವಂಚನೆ, ಗುರುತು ಮರೆಮಾಚುವಿಕೆ ಮತ್ತು ನಕಲಿ ಖಾತೆಗಳ ಹಾವಳಿ ಹೆಚ್ಚಾಗಬಹುದು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ. ಪ್ರಮುಖ ವ್ಯಕ್ತಿಗಳ ಹೆಸರನ್ನು ಹೋಲುವ ಯೂಸರ್ನೇಮ್ ಸೃಷ್ಟಿಸಿ ಜನರನ್ನು ವಂಚಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮೊಬಿಕ್ವಿಕ್ ಸಿಇಒ ಬಿಪಿನ್ ಪ್ರೀತ್ ಸಿಂಗ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಂತಹ ಸಾರ್ವಜನಿಕ ವ್ಯಕ್ತಿಗಳ ಹೆಸರನ್ನು ಹೋಲುವ ಯೂಸರ್ನೇಮ್ಳನ್ನು ಯಾರೋ ಕಾಯ್ದಿರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿರುವುದು ಈ ಆತಂಕಕ್ಕೆ ಪುಷ್ಟಿ ನೀಡಿದೆ.
ಹೊಸ ಫೀಚರ್ನ ಅಪಾಯವನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಇದು ಆನ್ಲೈನ್ ವಂಚನೆ, ಫಿಶಿಂಗ್ ಮತ್ತು ಡಿಜಿಟಲ್ ಅರೆಸ್ಟ್ ಪ್ರಕರಣಗಳಿಗೆ ಮತ್ತಷ್ಟು ದಾರಿ ಮಾಡಿಕೊಡಬಹುದು ಎಂದು ಸರ್ಕಾರ ಹೇಳಿದೆ. 3 ದಿನಗಳಲ್ಲಿ ಸವಿಸ್ತಾರವಾದ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಿದೆ. ಸರ್ಕಾರದ ಪೂರ್ಣ ಸಮ್ಮತಿ ಸಿಗುವವರೆಗೂ ಇದನ್ನು ಜಾರಿ ಮಾಡಬಾರದೆಂದು ನಿರ್ದೇಶನ ನೀಡಿದೆ.
ವಾಟ್ಸ್ಆಪ್ಗೆ ನೋಟಿಸ್ ನೀಡಿದ ಬೆನ್ನಲ್ಲೇ ಕೇಂದ್ರ ಐಟಿ ಸಚಿವಾಲಯ ಈಗ ಟೆಲಿಗ್ರಾಂ ಮತ್ತು ಸಿಗ್ನಲ್ ಮೆಸೇಜಿಂಗ್ ಆಪ್ಗಳಿಗೂ ನೋಟಿಸ್ ಜಾರಿ ಮಾಡಿದೆ. ಈ ವೇದಿಕೆಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಯೂಸರ್ನೇಮ್ ಫೀಚರ್ ಮೂಲಕ ನಡೆಯುತ್ತಿರುವ ಆನ್ಲೈನ್ ವಂಚನೆ, ಡಿಜಿಟಲ್ ಅರೆಸ್ಟ್ ಮುಂತಾದವುಗಳನ್ನು ತಡೆಯಲು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ವಿವರಣೆ ಕೇಳಲಾಗಿದೆ. ಈ ಫೀಚರ್ ಮುಂದುವರಿಸಲು ಏಕೆ ಅವಕಾಶ ನೀಡಬೇಕು ಎಂದು ಈ ಸಂಸ್ಥೆಗಳನ್ನು ಸರ್ಕಾರ ಪ್ರಶ್ನಿಸಿದೆ.