ಕೇತನ್ ಅಗರ್ವಾಲ್ ಕೊಲೆಯನ್ನು ಸಮರ್ಥಿಸಿಕೊಂಡು ವಿಕೃತಿ ಮೆರೆದ ದಂತ ವೈದ್ಯೆಗೆ ಬಿಗ್​ ಶಾಕ್​! Ketan Agarwal

ಕೇತನ್ ಅಗರ್ವಾಲ್ ಕೊಲೆಯನ್ನು ಸಮರ್ಥಿಸಿಕೊಂಡು ವಿಕೃತಿ ಮೆರೆದ ದಂತ ವೈದ್ಯೆಗೆ ಬಿಗ್​ ಶಾಕ್​! Ketan Agarwal
ಕೇತನ್ ಅಗರ್ವಾಲ್ ಕೊಲೆಯನ್ನು ಸಮರ್ಥಿಸಿಕೊಂಡು ವಿಕೃತಿ ಮೆರೆದ ದಂತ ವೈದ್ಯೆಗೆ ಬಿಗ್​ ಶಾಕ್​! Ketan Agarwal
Published on

ಪ್ರಮುಖ ಮುಖ್ಯಾಂಶಗಳು

  • ಕೇತನ್​ ಅಗರ್ವಾಲ್​ ಕೊಲೆಯಾದ್ದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವಿಕೃತ ಸಂತೋಷ ಪಟ್ಟ ವೈದ್ಯೆಗೆ ಬಿಗ್ ಶಾಕ್!
  • ಹತ್ಯೆ ಸಮರ್ಥಿಸಿ "ಐ ಹೇಟ್ ಮೆನ್" ಎಂದಿದ್ದ ಮಹಿಳಾ ಡೆಂಟಿಸ್ಟ್ 5 ವರ್ಷ ಅಮಾನತು!
  • ಹತ್ಯೆ ವಿಡಿಯೋ ಹಾಕಿ ಪುರುಷರ ವಿರುದ್ಧ ವಿಷ ಕಾರಿದ್ದ ಲೇಡಿ ಡಾಕ್ಟರ್‌ಗೆ ಸಂಘಟನೆಯಿಂದ ಕಠಿಣ ಶಿಕ್ಷೆ
Ketan Agarwal : ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಅವರ ಭೀಕರ ಹತ್ಯೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಈ ಕ್ರೂರ ಕೊಲೆಯನ್ನು ಸಮರ್ಥಿಸಿಕೊಂಡು ವಿಕೃತ ಸಂತೋಷ ಪಟ್ಟಿದ್ದ ದಂತ ವೈದ್ಯೆಗೆ ಈಗ ಕಾನೂನಿನ ಹಾಗೂ ವೃತ್ತಿಪರ ಸಂಘಟನೆಯಿಂದ ಬಿಗ್ ಶಾಕ್ ಎದುರಾಗಿದೆ.
ಕೇತನ್​ ಸಾವನ್ನು ಅಪಹಾಸ್ಯ ಮಾಡಿ, ಕೊಲೆಯನ್ನು ಸಮರ್ಥಿಸಿಕೊಂಡಿದ್ದ ಮಧ್ಯಪ್ರದೇಶದ ಭೋಪಾಲ್ ಮೂಲದ ವೈದ್ಯೆ ಡಾ. ಮುಸ್ಕಾನ್ ಸೋನಿ ಅವರನ್ನು 'ಆಲ್ ಇಂಡಿಯಾ ಡೆಂಟಲ್ ಸ್ಟೂಡೆಂಟ್ಸ್ ಅಂಡ್ ಸರ್ಜನ್ಸ್ ಅಸೋಸಿಯೇಷನ್' ಐದು ವರ್ಷಗಳ ಅವಧಿಗೆ ಅಮಾನತುಗೊಳಿಸಿ ಕಠಿಣ ಆದೇಶ ಹೊರಡಿಸಿದೆ.
ಅಮಾನತುಗೊಂಡ ಡಾ. ಮುಸ್ಕಾನ್ ಸೋನಿ ಅವರು ಈ ಸಂಘಟನೆಯ ಮಧ್ಯಪ್ರದೇಶ ಘಟಕದ ಕೋಶಾಧಿಕಾರಿಯಾಗಿದ್ದರು. ಇವರ ಈ ಬೇಜವಾಬ್ದಾರಿ ಮತ್ತು ಅಮಾನವೀಯ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಸಂಘಟನೆಯ ರಾಷ್ಟ್ರೀಯ ನಾಯಕತ್ವವು, ಮುಸ್ಕಾನ್ ಅವರ ಇಂತಹ ಕೃತ್ಯಗಳು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ 5 ವರ್ಷಗಳ ಅಮಾನತು ಅವಧಿಯಲ್ಲಿ ಅವರು ಸಂಘಟನೆಯ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಹಾಗೂ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತೆಯೂ ಇಲ್ಲ ಎಂದು ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ನಿಶ್ಚಿತ ವರನಾಗಿದ್ದ ಕೇತನ್‌ನನ್ನು ಕಣಿವೆಗೆ ತಳ್ಳಿ ಕೊಂದ ಭೀಕರ ವಿಡಿಯೋವನ್ನು ಮುಸ್ಕಾನ್ ಸೋನಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ, ಆ ವಿಡಿಯೋ ಜೊತೆಗೆ "ಐ ಹೇಟ್ ಮೆನ್" ಎಂಬ ಹ್ಯಾಶ್‌ಟ್ಯಾಗ್ ಬಳಸುವ ಮೂಲಕ ಕೊಲೆಯನ್ನು ಪರೋಕ್ಷವಾಗಿ ಸಂಭ್ರಮಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿ, ನೆಟ್ಟಿಗರು ಮುಸ್ಕಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವಿವಾದ ದೊಡ್ಡದಾಗಿ ಕಾನೂನಿನ ಉರುಳು ಬಿಗಿಯುವುದು ಖಚಿತವಾಗುತ್ತಿದ್ದಂತೆಯೇ ಎಚ್ಚೆತ್ತ ಸೋನಿ, ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರಾದರೂ ಸಂಘಟನೆಯ ಕಠಿಣ ಕ್ರಮದಿಂದ ಪಾರಾಗಲು ಸಾಧ್ಯವಾಗಿಲ್ಲ.

ಏನಿದು ಪ್ರಕರಣ?

ಮಹಾರಾಷ್ಟ್ರದ ಖ್ಯಾತ ಉದ್ಯಮಿಯ ಪುತ್ರನಾದ ಕೇತನ್​ ಅಗರವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರಮನೆಯೊಂದರಲ್ಲಿ ನವೆಂಬರ್​ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಲಾಗಿತ್ತು. ಆದರೆ ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಕೇತನ್​ನನ್ನು ಕಣಿವೆಗೆ ತಳ್ಳಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತನಿಖೆ ಬಹಿರಂಗಪಡಿಸಿದೆ. 22 ವರ್ಷದ ಚೇತನ್ ಬಬುಲಾಲ್ ಚೌಧರಿ ಎಂಬಾತನೊಂದಿಗೆ ಸಿಯಾ ಕಳೆದ ವರ್ಷ ಸಭೆಯೊಂದರಲ್ಲಿ ಪರಿಚಯವಾಗಿದ್ದಳು. ಸಿಯಾ ಬೇಕರಿ ವ್ಯವಹಾರ ನಡೆಸುತ್ತಿದ್ದರೆ, ಚೇತನ್ ಡ್ರೈ ಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದನು. ಇವರಿಬ್ಬರ ಸಂಬಂಧ 2025ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಅದೇ ವೇಳೆಗೆ ಸಿಯಾ ಮತ್ತು ಕೇತನ್​ ಅವರ ಕುಟುಂಬಗಳು ಮದುವೆ ಸಿದ್ಧತೆಯಲ್ಲಿ ತೊಡಗಿದ್ದವು.
ಪೊಲೀಸರ ಪ್ರಕಾರ, ಸಿಯಾ ಮತ್ತು ಕೇತನ್​ ನಡುವಿನ ಸಂಬಂಧದಿಂದ ಚೇತನ್ ಅಸಮಾಧಾನಗೊಂಡಿದ್ದನು. ಕೇತನ್​ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು. ಸಿಯಾ, ಪ್ರವಾಸದ ನೆಪದಲ್ಲಿ ಕೇತನ್​ನನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಬಳಿಕ ಚೇತನ್ ಸ್ಥಳಕ್ಕೆ ಆಗಮಿಸಿದ್ದಾನೆ. ಇಬ್ಬರೂ ಸೇರಿ ಕೇತನ್​ನನ್ನು ಹಿಂಬದಿಯಿಂದ ತಳ್ಳಿದ ಪರಿಣಾಮ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net