ಸೀಟು ಬೇಕೋ ಅಥವಾ ಮೈತ್ರಿ ಬೇಕೋ..? ಸ್ಟಾಲಿನ್ ಕೊಟ್ಟ ಆಫರ್‌ಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್..! MK Stalin and Congress
ಸೀಟು ಬೇಕೋ ಅಥವಾ ಮೈತ್ರಿ ಬೇಕೋ..? ಸ್ಟಾಲಿನ್ ಕೊಟ್ಟ ಕೇವಲ 27 ಸೀಟಿನ ಆಫರ್‌ಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್..!
Published on:
Copied
Follow Us
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತಾರೂಢ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ(MK Stalin and Congress) ಪ್ರಕ್ರಿಯೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಮೈತ್ರಿಕೂಟದ ದೊಡ್ಡ ಪಕ್ಷವಾದ ಡಿಎಂಕೆ ಮೇಲೆ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಗಾಗಿ ಒತ್ತಡ ಹೇರುತ್ತಿದ್ದು, ಇದು ಮೈತ್ರಿಕೂಟದ ಒಳಗಿನ ಭಿನ್ನಮತವನ್ನು ಸ್ಫೋಟಿಸಿದೆ.
35 ಸೀಟುಗಳಿಗಾಗಿ ಕಾಂಗ್ರೆಸ್ ಚೌಕಾಸಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಮತ್ತು ಟಿಎನ್‌ಸಿಸಿ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಅವರು ಡಿಎಂಕೆ ಸಂಸದೆ ಕನಿಮೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಆರಂಭದಲ್ಲಿ 41 ಸ್ಥಾನಗಳ ಬೇಡಿಕೆ ಇಟ್ಟಿತ್ತು, ನಂತರ ಅದನ್ನು 35 ಸ್ಥಾನಗಳಿಗೆ ಇಳಿಸಿದೆ. ಆದರೆ, 2021ರ ಚುನಾವಣೆಯಲ್ಲಿ ನೀಡಿದ್ದ 25 ಸ್ಥಾನಗಳಿಗಿಂತ ಕೇವಲ ಎರಡರಿಂದ ಮೂರು ಸ್ಥಾನಗಳನ್ನು ಮಾತ್ರ ಹೆಚ್ಚಿಸಲು ಡಿಎಂಕೆ ಸಿದ್ಧವಿದೆ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರು ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಸದ್ಯದ ಸೀಟು ಹಂಚಿಕೆ ಮಾತುಕತೆಯಲ್ಲಿ ಈ ಬೇಡಿಕೆಯನ್ನು ಕಾಂಗ್ರೆಸ್ ಕೈಬಿಟ್ಟಿದೆ ಎಂದು ತಿಳಿದುಬಂದಿದೆ. ಇದಕ್ಕೆ ಬದಲಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಮೇಯರ್ ಹುದ್ದೆಗಳ ಬೇಡಿಕೆ ಇಟ್ಟಿದೆ. ಅಲ್ಲದೆ, ರಾಜ್ಯಸಭೆಯ ಸ್ಥಾನಗಳಿಗಾಗಿ ಒತ್ತಾಯ ಮಾಡುತ್ತಿದೆ. ವಿವಿಧ ಕಲ್ಯಾಣ ಮಂಡಳಿಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯದ ಬೇಡಿಕೆ ಇಡಲಾಗಿದೆ.
ಡಿಎಂಕೆ ವಾದವೇನು..?
ಈ ಬಾರಿ ಮೈತ್ರಿಕೂಟದಲ್ಲಿ 10ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಸೇರಿಕೊಂಡಿರುವುದರಿಂದ, ಪ್ರತಿಯೊಂದು ಪಕ್ಷವೂ ತಮ್ಮ ಸ್ಥಾನಗಳನ್ನು ಸ್ವಲ್ಪ ಮಟ್ಟಿಗೆ ಬಿಟ್ಟುಕೊಡಬೇಕು ಎಂದು ಡಿಎಂಕೆ ನಾಯಕ ಟಿ.ಆರ್. ಬಾಲು ನೇತೃತ್ವದ ಸಮಿತಿ ವಾದಿಸುತ್ತಿದೆ. ಹಳೆಯ ಮಿತ್ರಪಕ್ಷಗಳಾದ ಐಯುಎಂಎಲ್ (IUML) ಕೂಡ ಹೆಚ್ಚಿನ ಸ್ಥಾನಗಳನ್ನು ಕೇಳುತ್ತಿರುವುದು ಡಿಎಂಕೆಗೆ ತಲೆನೋವಾಗಿ ಪರಿಣಮಿಸಿದೆ.
ನಟ ವಿಜಯ್ ಅವರ TVK ಪಕ್ಷದ ಎಂಟ್ರಿಯಿಂದಾಗಿ ಈ ಬಾರಿ ಚುನಾವಣೆ ತ್ರಿಕೋನ ಸ್ಪರ್ಧೆಯಾಗುವ ಸಾಧ್ಯತೆಯಿದ್ದು, ಪ್ರತಿಯೊಂದು ಸೀಟಿನ ಹಂಚಿಕೆಯೂ ಮೈತ್ರಿಕೂಟದ ಭವಿಷ್ಯಕ್ಕೆ ನಿರ್ಣಾಯಕವಾಗಿದೆ,(ಏಜೆನ್ಸೀಸ್).