ಭಾರತದಲ್ಲಿ EMI ಟ್ರೆಂಡ್ ಶುರುವಾಗಿದ್ದೇ ಇವರಿಂದ! ಕಂತಿನ ಕ್ರಾಂತಿ ಹಿಂದಿದೆ ಸಖತ್ ಇಂಟ್ರೆಸ್ಟಿಂಗ್​ ಸ್ಟೋರಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬಹುಪಾಲು ಭಾರತೀಯರ ಜೀವನದಲ್ಲಿ ಅತ್ಯಂತ ಸಾಮಾನ್ಯ ಪದ ಈ EMI
  • ಭಾರತಕ್ಕೆ ಈ ಇಎಂಐ ಎಂಬ ಸಂಸ್ಕೃತಿಯನ್ನು ಪರಿಚಯಿಸಿದವರು ಯಾರು?
  • ಅನೇಕ ಮಂದಿಗೆ ಗೊತ್ತೇ ಇಲ್ಲದ ವ್ಯಕ್ತಿಯೇ ಕೆ.ವಿ. ಕಾಮತ್
ನವದೆಹಲಿ: ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತು ನಮ್ಮಲ್ಲಿ ಚೆನ್ನಾಗಿ ರೂಢಿಯಾಗಿದೆ. ಹೀಗೆ ತುಪ್ಪ ಸವಿಯಲು ಬಡವರು, ಮಧ್ಯಮ ವರ್ಗದ ಜನರಿಗೆ ಮೂಲ ಆಧಾರವಾಗಿರುವುದೇ ಇಎಂಐ. ಈ ಪದ ಯಾರು ಕೇಳಿಲ್ಲ ಹೇಳಿ? ಬಹುಪಾಲು ಭಾರತೀಯರ ಜೀವನದಲ್ಲಿ ಅತ್ಯಂತ ಸಾಮಾನ್ಯ ಪದವಾಗಿ ಮಾರ್ಪಟ್ಟಿದೆ. ಬೈಕ್​, ಕಾರು, ಮನೆ, ಮೊಬೈಲ್, ಟಿವಿ ಮತ್ತು ಫ್ರಿಡ್ಜ್​ನಂತಹ ಗೃಹೋಪಯೋಗಿ ವಸ್ತುಗಳನ್ನು ಇದೇ ಕಂತಿನ ಮೂಲಕ ಜನರು ಕೊಳ್ಳುವ ಪ್ರವೃತ್ತಿ ಕ್ರಮೇಣವಾಗಿ ಹೆಚ್ಚಾಗಿದೆ. 
ಅಷ್ಟಕ್ಕೂ ಭಾರತಕ್ಕೆ ಈ ಇಎಂಐ ಎಂಬ ಸಂಸ್ಕೃತಿಯನ್ನು ಪರಿಚಯಿಸಿದವರು ಯಾರು? ಇದು ಹೇಗೆ ಬಂತು? ಚಿಲ್ಲರೆ ಬ್ಯಾಂಕಿಂಗ್‌ನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಆ ವ್ಯಕ್ತಿ ಯಾರು ಎಂಬ ಹತ್ತು ಹಲವು ಕುತೂಹಲಕಾರಿ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ. ವಾಸ್ತವವಾಗಿ, ಅನೇಕ ಮಂದಿಗೆ ಗೊತ್ತೇ ಇಲ್ಲದ ವ್ಯಕ್ತಿಯೇ ಕನ್ನಡಿಗ ಕೆ.ವಿ. ಕಾಮತ್. ದೇಶದಲ್ಲಿ ಇಎಂಐ ವ್ಯವಸ್ಥೆಯನ್ನು ಭಾರತಕ್ಕೆ ತಂದುಕೊಟ್ಟ ಇವರು, ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಶಾಕಿರಣವಾಗಿದ್ದೇ ರೋಚಕ.
ಕೆ.ವಿ. ಕಾಮತ್ ಅವರು ಮೂಲತಃ ಮಂಗಳೂರಿನ ಕುಂದಾಪುರದವರು. ಐಸಿಐಸಿಐ ಬ್ಯಾಂಕ್ ಅನ್ನು ದೇಶದ ಅತ್ಯಂತ ಶಕ್ತಿಶಾಲಿ ಚಿಲ್ಲರೆ ಬ್ಯಾಂಕಿಂಗ್ ಸಂಸ್ಥೆಯನ್ನಾಗಿ ಮಾಡಿದ ಗಣ್ಯ ವ್ಯಕ್ತಿ. ವಾಸ್ತವವಾಗಿ, ಅವರು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಹೊಸ ಕಳೆ ತಂದುಕೊಟ್ಟವರು. ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಲಗಳ ಮೇಲೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದ್ದ ಸಮಯದಲ್ಲಿ,  ಇವರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸುಲಭವಾಗಿ ಸಾಲಗಳು ಲಭಿಸುವ ವ್ಯವಸ್ಥೆಯನ್ನು ಮುಂದಿಟ್ಟರು. 
ಇದರೊಂದಿಗೆ, ನಮ್ಮ ದೇಶದಲ್ಲಿ ಮನೆಗಳು, ಕಾರು, ಬೈಕ್​ ಮತ್ತು ಗೃಹೋಪಯೋಗಿ ಉಪಕರಣಗಳ ಖರೀದಿ ಕ್ರಮೇಣವಾಗಿ ಹೆಚ್ಚಾಗಿದೆ. ಹೀಗಾಗಿಯೇ, ಇಂದು ಹಲವರ ಮನೆಯಲ್ಲಿ ಇಎಂಐ ಸಹಾಯದಿಂದ ಸಾಕಷ್ಟು ವಸ್ತುಗಳು ಫುಲ್​ ಕ್ಯಾಶ್​ ಸೆಟಲ್​ಮೆಂಟ್​ ಇಲ್ಲದೆಯೇ ಎಂಟ್ರಿಕೊಟ್ಟಿವೆ. ಕಾಮತ್​ ಅವರ ಈ ಐಡಿಯಾದಿಂದ ಇಎಂಐ ಸಂಸ್ಕೃತಿ ದೇಶದಲ್ಲಿ ವೇಗವಾಗಿ ಹಬ್ಬಿತು. ಚಿಲ್ಲರೆ ಹಣಕಾಸು ವಲಯಕ್ಕೆ ಪ್ರವೇಶಿಸಿದ ಅಲ್ಪಾವಧಿಯಲ್ಲಿಯೇ ಐಸಿಐಸಿಐ ಬ್ಯಾಂಕ್ ಅನ್ನು ಮಾರುಕಟ್ಟೆ ನಾಯಕನನ್ನಾಗಿ ಸ್ಥಾಪಿಸಿದ ಕಾಮತ್, ಬ್ಯಾಂಕಿಂಗ್‌ ವಲಯದಲ್ಲಿಯೂ ಟೆಕ್ನಾಲಜಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು.
ಭಾರತದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಟೆಲಿಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳ ವಿಸ್ತರಣೆಯಲ್ಲಿ ಅವರ ಕೊಡುಗೆ ಹೆಚ್ಚಿದೆ. ಎಲ್ಲಾ ಶಾಖೆಗಳಲ್ಲಿ ಶೇ.100ರಷ್ಟು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದರು ಮತ್ತು ಬೆಳಗ್ಗೆ 8ರಿಂದ ರಾತ್ರಿ 8 ರವರೆಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಪರಿಚಯಿಸಿದರು. ಸುಮಾರು 29 ವರ್ಷಗಳ ಕಾಲ ಐಸಿಐಸಿಐಗೆ ಸೇವೆ ಸಲ್ಲಿಸಿದ ಕೆ.ವಿ. ಕಾಮತ್ ಅವರ ಹಲವು ಮಹತ್ವದ ಸೇವೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರವು 2008ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು.
ಇದರೊಂದಿಗೆ, ಫೋರ್ಬ್ಸ್ ಏಷ್ಯಾದಿಂದ ವರ್ಷದ ಉದ್ಯಮಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಭಾರತೀಯರ ಖರೀದಿ ಅಭ್ಯಾಸವನ್ನು ಬದಲಾಯಿಸಿದ ಮತ್ತು ಪ್ರತಿ ಮನೆಗೆ ಇಎಂಐ ಸಂಸ್ಕೃತಿಯನ್ನು ತಂದ ಕೆ.ವಿ. ಕಾಮತ್ ಅವರ ಹೆಸರು ಇಂದಿಗೂ ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿಯಲಿದೆ. 
ವಾಸ್ತವವಾಗಿ, ಜಗತ್ತಿನಲ್ಲಿ ಯಾರೂ ಕಂತುಗಳಲ್ಲಿ ವಸ್ತುಗಳನ್ನು ಕೊಳ್ಳುವುದು ಅಥವಾ ಸಾಲಗಳನ್ನು ಪಾವತಿಸುವ ವಿಧಾನವನ್ನು ಕಂಡುಹಿಡಿದಿಲ್ಲ. ಜನರು ತಮ್ಮ ಅಗತ್ಯಗಳನ್ನು ಪಡೆಯಲು ಬಳಸುತ್ತಿದ್ದ ಮಾರ್ಗವೊಂದು ಗೊತ್ತಿರದ ರೀತಿಯಲ್ಲಿ ಜನಪ್ರಿಯವಾಯಿತು. ಕೌಪರ್ತ್‌ವೈಟ್ ಮತ್ತು ಸನ್ಸ್ 1807ರಲ್ಲಿ ನ್ಯೂಯಾರ್ಕ್‌ನಲ್ಲಿ ಮೊದಲ ಕಂತು ವ್ಯವಸ್ಥೆಯನ್ನು ಪರಿಚಯಿಸಿತು. ಎಡ್ವರ್ಡ್ ಕ್ಲಾರ್ಕ್‌ನಂತಹ ಕಂಪನಿ ನಾಯಕರ ನೇತೃತ್ವದಲ್ಲಿ ಸಿಂಗರ್ ಹೊಲಿಗೆ ಯಂತ್ರ ಕಂಪನಿಯು 1850ರ ಸುಮಾರಿಗೆ ವಿಶ್ವಾದ್ಯಂತ ಗ್ರಾಹಕ ಸಾಲ ಮತ್ತು ನಿಯಮಿತ ಪಾವತಿ ಯೋಜನೆಗಳನ್ನು ಜನಪ್ರಿಯಗೊಳಿಸಿತು.
ಜನರಲ್ ಮೋಟಾರ್ಸ್ ಅಕ್ಸೆಪ್ಟೆನ್ಸ್ ಕಾರ್ಪೊರೇಷನ್ (GMAC) 1919ರಲ್ಲಿ ನಿಯಮಿತ ಮಾಸಿಕ ಆಟೋ ಸಾಲ ಹಣಕಾಸು ಸ್ಥಾಪಿಸಿತು. ಈ ರೀತಿಯಲ್ಲಿ, ಇಂದು ಇಎಂಐ ಸಂಸ್ಕೃತಿ ಕ್ರಮೇಣವಾಗಿ ವಿಶ್ವದಾದ್ಯಂತ ಹಬ್ಬಿತು ಮತ್ತು ಇಂದು ಬಹುತೇಕ ಜನರ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net