ಹರಿದುಹೋಗಲ್ಲ, ನೀರಿನಲ್ಲಿ ನೆನೆಯಲ್ಲ! ಕೈ ಸೇರಲು ಸಜ್ಜಾಗುತ್ತಿದೆ RBIನ ಈ ಹೊಸ ಮ್ಯಾಜಿಕ್ ಕರೆನ್ಸಿ!

RBI
RBI
Published on
ಮುಂಬೈ: ದೇಶದಲ್ಲಿ ಡಿಜಿಟಲ್ ಪಾವತಿಗಳು ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ, ನಗದು ಹಣದ ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕರೆನ್ಸಿ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದ್ದು, ದಶಕದಷ್ಟು ಹಳೆಯದಾದ 'ಪ್ಲಾಸ್ಟಿಕ್ (ಪಾಲಿಮರ್) ಬ್ಯಾಂಕ್ ನೋಟುಗಳ' ಯೋಜನೆಯನ್ನು ಪುನರುಜ್ಜೀವನಗೊಳಿಸುತ್ತಿದೆ.
ಹೌದು, ಮುಂಬೈ ಮತ್ತು ಪಾಟ್ನಾಗಳಲ್ಲಿ ನಡೆದ ಆರ್‌ಬಿಐನ ಇತ್ತೀಚಿನ ಬೋರ್ಡ್ ಸಭೆಗಳಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಸಾರ್ವಜನಿಕ ಬಳಕೆಗೆ ಶೀಘ್ರದಲ್ಲೇ ಪೈಲಟ್ ಪ್ರಾಜೆಕ್ಟ್ (ಪ್ರಾಯೋಗಿಕ ಯೋಜನೆ) ಘೋಷಣೆಯಾಗುವ ಸಾಧ್ಯತೆಯಿದೆ.

ಏನಿದು ಪ್ಲಾಸ್ಟಿಕ್ ನೋಟು?

ನಾವು ಪ್ರಸ್ತುತ ಬಳಸುತ್ತಿರುವ ನೋಟುಗಳನ್ನು ಹತ್ತಿ ಆಧಾರಿತ ಕಾಗದದಿಂದ ತಯಾರಿಸಲಾಗುತ್ತದೆ. ಆದರೆ ಪಾಲಿಸರ್ ನೋಟುಗಳನ್ನು 'ಬಯೋ-ಆಕ್ಸಿಯಲಿ ಓರಿಯಂಟೆಡ್ ಪಾಲಿಪ್ರೊಪಿಲೀನ್' (BOPP) ಎಂಬ ವಿಶೇಷ ಪ್ಲಾಸ್ಟಿಕ್ ವಸ್ತುವಿನಿಂದ ತಯಾರಿಸಲಾಗುತ್ತದೆ. ಇವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಂತೆ ಗಟ್ಟಿಯಾಗಿರದೆ, ಸಾಮಾನ್ಯ ಕಾಗದದ ನೋಟುಗಳಂತೆಯೇ ಹಗುರವಾಗಿರುತ್ತವೆ ಮತ್ತು ಸುಲಭವಾಗಿ ಮಡಚಬಹುದಾಗಿದೆ.

ಬದಲಾವಣೆಗೆ ಕಾರಣವೇನು?

ಆರ್‌ಬಿಐ ಇಂತಹದ್ದೊಂದು ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಕಾಗದದ ನೋಟುಗಳ ಮುದ್ರಣ ವೆಚ್ಚ ಮತ್ತು ಅವು ಬೇಗನೆ ಹಾಳಾಗುತ್ತಿರುವುದು. ಆರ್‌ಬಿಐನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ನೋಟುಗಳ ಮುದ್ರಣ ವೆಚ್ಚವು ಕಳೆದ ಹಣಕಾಸು ವರ್ಷದಲ್ಲಿದ್ದ 5,101.4 ಕೋಟಿಯಿಂದ ಪ್ರಸಕ್ತ ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, 6,372.8 ಕೋಟಿಗೆ ತಲುಪಿದೆ. ಇದರೊಂದಿಗೆ, ಮಾರುಕಟ್ಟೆಯಲ್ಲಿ ಕೊಳಕಾದ ಹಾಗೂ ಹರಿದುಹೋದ ನೋಟುಗಳ ಸಂಖ್ಯೆಯೂ ಹೆಚ್ಚಾಗಿದೆ. ಕೇವಲ ಒಂದೇ ವರ್ಷದಲ್ಲಿ ಆರ್‌ಬಿಐ ಬರೋಬ್ಬರಿ 23.8 ಬಿಲಿಯನ್ ಹಾನಿಗೊಳಗಾದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಇದರಲ್ಲಿ 500 ಮತ್ತು 100 ಮುಖಬೆಲೆಯ ನೋಟುಗಳೇ ಹೆಚ್ಚಾಗಿವೆ.

ಪ್ಲಾಸ್ಟಿಕ್ ನೋಟುಗಳ ಲಾಭಗಳೇನು?

ಹೆಚ್ಚಿನ ಬಾಳಿಕೆ: ಈ ನೋಟುಗಳು ಕಾಗದದ ನೋಟುಗಳಿಗಿಂತ 3 ರಿಂದ 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಇದರಿಂದಾಗಿ ಪದೇ ಪದೇ ಹೊಸ ನೋಟು ಮುದ್ರಿಸುವ ವೆಚ್ಚ ತಗ್ಗುತ್ತದೆ.
ವಾಟರ್‌ಪ್ರೂಫ್ ಮತ್ತು ಸ್ವಚ್ಛತೆ: ಇವು ನೀರಿನಲ್ಲಿ ನೆನೆಯುವುದಿಲ್ಲ ಮತ್ತು ಸುಲಭವಾಗಿ ಹರಿಯುವುದೂ ಇಲ್ಲ. ಕಾಗದದ ನೋಟುಗಳಿಗೆ ಹೋಲಿಸಿದರೆ ಇವುಗಳಲ್ಲಿ ಬ್ಯಾಕ್ಟೀರಿಯಾ ಅಥವಾ ಕೊಳಕು ಅಂಟಿಕೊಳ್ಳುವುದು ತುಂಬಾ ಕಡಿಮೆ.
ನಕಲಿ ನೋಟುಗಳಿಗೆ ಬ್ರೇಕ್: ಪಾಲಿಸರ್ ನೋಟುಗಳಲ್ಲಿ ಅತ್ಯಾಧುನಿಕ ಭದ್ರತಾ ಫೀಚರ್‌ಗಳು, ಪಾರದರ್ಶಕ ವಿಂಡೋಗಳು ಹಾಗೂ ಹೊಲೊಗ್ರಾಮ್‌ಗಳನ್ನು ಬಳಸುವುದರಿಂದ ಇವುಗಳ ನಕಲಿ (ಖೋಟಾ) ನೋಟುಗಳನ್ನು ತಯಾರಿಸುವುದು ಅಸಾಧ್ಯ.
ಈ ಹಿಂದೆ 2012ರಲ್ಲಿ ಮೈಸೂರು ಸೇರಿದಂತೆ ದೇಶದ ಐದು ನಗರಗಳಲ್ಲಿ 10 ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿತ್ತು. ಆದರೆ ಆಗ ತಾಂತ್ರಿಕ ಮತ್ತು ಎಟಿಎಂ ಯಂತ್ರಗಳ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಯೋಜನೆ ತಡವಾಗಿತ್ತು. ಈಗ ತಾಂತ್ರಿಕ ಸವಾಲುಗಳು ದೂರವಾಗಿದ್ದು, ಎಟಿಎಂ ಯಂತ್ರಗಳು ಕೂಡ ಪ್ಲಾಸ್ಟಿಕ್ ನೋಟುಗಳನ್ನು ಸುಲಭವಾಗಿ ಸ್ವೀಕರಿಸಲು ಮತ್ತು ವಿತರಿಸಲು ಸಜ್ಜಾಗಿವೆ. ಜಗತ್ತಿನಾದ್ಯಂತ ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ ಮತ್ತು ಸಿಂಗಾಪುರ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳು ಈಗಾಗಲೇ ಪ್ಲಾಸ್ಟಿಕ್ ಕರೆನ್ಸಿಯನ್ನು ಯಶಸ್ವಿಯಾಗಿ ಬಳಸುತ್ತಿವೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net