ನನಗೇನು ರೆಕ್ಕೆಗಳಿವೆಯೇ ಕತ್ತರಿಸಲು?: ಉದ್ಧವ್ ಆಪರೇಷನ್ ದೇವೇಂದ್ರ ಟೀಕೆಗೆ ಸಿಎಂ ಫಡ್ನವೀಸ್ ಖಡಕ್ ಕೌಂಟರ್! Devendra Fadnavis

ನನಗೇನು ರೆಕ್ಕೆಗಳಿವೆಯೇ ಕತ್ತರಿಸಲು?: ಉದ್ಧವ್ ಆಪರೇಷನ್ ದೇವೇಂದ್ರ ಟೀಕೆಗೆ ಸಿಎಂ ಫಡ್ನವೀಸ್ ಖಡಕ್ ಕೌಂಟರ್!
ನನಗೇನು ರೆಕ್ಕೆಗಳಿವೆಯೇ ಕತ್ತರಿಸಲು?: ಉದ್ಧವ್ ಆಪರೇಷನ್ ದೇವೇಂದ್ರ ಟೀಕೆಗೆ ಸಿಎಂ ಫಡ್ನವೀಸ್ ಖಡಕ್ ಕೌಂಟರ್!
Published on
ಮುಂಬೈ: ತಮ್ಮನ್ನು ಪ್ರಧಾನಿ ರೇಸ್‌ನಿಂದ ಹೊರದಬ್ಬಲು ಅಮಿತ್ ಷಾ ಅವರೇ ಆಪರೇಷನ್ ಟೈಗರ್ ನಡೆಸಿದ್ದಾರೆ ಎಂಬ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ನಗುತ್ತಲೇ ತಳ್ಳಿಹಾಕಿದ್ದಾರೆ. ನಾನೊಬ್ಬ ಸಾಮಾನ್ಯ ಮನುಷ್ಯ, ನನಗೇನು ಹಾರಾಡಲು ರೆಕ್ಕೆಗಳಿವೆಯೇ ಕತ್ತರಿಸಲು ಎಂದು ವ್ಯಂಗ್ಯವಾಡಿರುವ ಫಡ್ನವೀಸ್, ತಮಗೆ ರಾಜ್ಯದ 14 ಕೋಟಿ ಜನರ ಆಶೀರ್ವಾದ ಹಾಗೂ ಪಕ್ಷದ ಹಿರಿಯ ನಾಯಕರ ಬೆಂಬಲ ಇರುವಾಗ ಯಾರೂ ತಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪಾಲ್ಘರ್ ಜಿಲ್ಲೆಯ ವಧಾವನ್ ಬಂದರು ಮತ್ತು ಇತರೆ ಮೂಲಸೌಕರ್ಯ ಯೋಜನೆಗಳ ಪರಿಶೀಲನೆ ನಡೆಸಿದ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾ ಸಿಎಂ, ಸದ್ಯ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗಳನ್ನು ಹುಚ್ಚರ ಸಂತೆ ಎಂದು ಕರೆದಿದ್ದಾರೆ.

ನನ್ನ ಗಮನ ಕೇವಲ ಅಭಿವೃದ್ಧಿಯ ಮೇಲಿದೆ: ಸಿಎಂ ಸ್ಪಷ್ಟನೆ

ಶನಿವಾರ ಹಿಂಗೋಲಿ ರ‍್ಯಾಲಿಯಲ್ಲಿ ಉದ್ಧವ್ ಠಾಕ್ರೆ ಮಾಡಿದ್ದ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ, ನನಗೆ ರಾಜಕೀಯ ವಿಷಯಗಳು ಯಾವಾಗಲೂ ದ್ವಿತೀಯ. ನನ್ನ ಸಂಪೂರ್ಣ ಗಮನ ಈಗ ಮಹಾರಾಷ್ಟ್ರದ ಅಭಿವೃದ್ಧಿಯ ಮೇಲಷ್ಟೇ ಇದೆ. ಉದ್ಧವ್ ಅವರ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ನನಗಿಲ್ಲ. ರಾಜ್ಯದ ಕೋಟ್ಯಂತರ ಜನರ ಹರಸೇ ನನಗಿರುವ ರಕ್ಷಾಕವಚ ಎಂದರು. ಅಲ್ಲದೆ, ಕೊನೆಯಲ್ಲಿ ಒಂದು ರಾಜಕೀಯ ಟಾಂಗ್ ನೀಡಿದ ಫಡ್ನವೀಸ್, ಉದ್ಧವ್ ಅವರು ಭವಿಷ್ಯದ ಪ್ರಧಾನಿ ರೇಸ್ ಬಗ್ಗೆ ನನಗೆ ನೀಡಿರುವ ಶುಭ ಹಾರೈಕೆಯನ್ನು ನಾನು ಸ್ವೀಕರಿಸುತ್ತೇನೆ. ಆದರೆ, ಇದೇ ಒಳ್ಳೆಯ ಬುದ್ಧಿ ಅವರಿಗೆ 2019 ರಲ್ಲೇ ಇದ್ದಿದ್ದರೆ ಇವತ್ತು ಪರಿಸ್ಥಿತಿಯೇ ಬೇರೆ ಇರುತ್ತಿತ್ತು ಎಂದು ನೆನಪಿಸಿದ್ದಾರೆ.
ಒಂದೇ ವಿಮಾನದಲ್ಲಿ ಪ್ರಯಾಣ: ಹುಚ್ಚರ ಸಂತೆಯಾದ ರಾಜಕಾರಣ!
ಕಳೆದ ಶುಕ್ರವಾರ ಮುಂಬೈನಿಂದ ನಾಗಪುರಕ್ಕೆ ತೆರಳುವಾಗ ಸಿಎಂ ಫಡ್ನವೀಸ್ ಮತ್ತು ಉದ್ಧವ್ ಠಾಕ್ರೆ ಇಬ್ಬರೂ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಮಾತನಾಡಿದ ಫಡ್ನವೀಸ್, ಅದೊಂದು ಕಾಕತಾಳೀಯ ಘಟನೆ ಅಷ್ಟೇ. ಇಬ್ಬರು ರಾಜಕೀಯ ನಾಯಕರು ಒಂದೇ ವಿಮಾನದಲ್ಲಿ ಪ್ರಯಾಣಿಸುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕೆಲವೊಮ್ಮೆ ನಾವಿರುವುದು ರಾಜಕಾರಣದಲ್ಲೋ ಅಥವಾ ಹುಚ್ಚರ ಸಂತೆಯಲ್ಲೋ ಎಂದು ನನಗೇ ಅನುಮಾನ ಬರುತ್ತದೆ. ವಿಮಾನದಲ್ಲಿ ಉದ್ಧವ್ ಒಂದು ಮೂಲೆಯಲ್ಲಿ ಕುಳಿತಿದ್ದರು, ನಾನು ಇನ್ನೊಂದು ಮೂಲೆಯಲ್ಲಿದ್ದೆ. ಒಂದು ವೇಳೆ ಪಕ್ಕಪಕ್ಕದಲ್ಲೇ ಸೀಟು ಸಿಕ್ಕಿದ್ದರೆ ಖಂಡಿತಾ ಮಾತನಾಡುತ್ತಿದ್ದೆವು, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ನಾನು ಮೊಬೈಲ್‌ನಲ್ಲಿ ಸಿನಿಮಾ ನೋಡ್ತಾ ಇದ್ದೆ, ಅಸಹಾಯಕತೆ ಎಲ್ಲಿಂದ ಬಂತು?

ವಿಮಾನ ಪ್ರಯಾಣದ ವೇಳೆ ಫಡ್ನವೀಸ್ ಮುಖದಲ್ಲಿ ಅಸಹಾಯಕತೆ ಎದ್ದುಕಾಣುತ್ತಿತ್ತು ಎಂಬ ಉದ್ಧವ್ ಠಾಕ್ರೆ ಅವರ ಲೇವಡಿಗೆ ಉತ್ತರಿಸಿದ ಸಿಎಂ, ವಿಮಾನ ಟೇಕ್ ಆಫ್ ಆದಾಗಿನಿಂದ ಲ್ಯಾಂಡ್ ಆಗುವವರೆಗೂ ನಾನು ನನ್ನ ಮೊಬೈಲ್‌ನಲ್ಲಿ ಸಿನಿಮಾ ಅಥವಾ ವೆಬ್ ಸೀರೀಸ್ ನೋಡುವುದರಲ್ಲಿ ಬ್ಯುಸಿಯಾಗಿದ್ದೆ. ಹಾಗಿರುವಾಗ ನನ್ನ ಮುಖದಲ್ಲಿ ಅವರಿಗೆ ಅಸಹಾಯಕತೆ ಎಲ್ಲಿ ಕಾಣಿಸಿತು ಎಂದು ನಗುತ್ತಲೇ ಕೇಳಿದ್ದಾರೆ. ಈ ಮೂಲಕ ಗಡಿಬಿಡಿಯ ಮಹಾರಾಷ್ಟ್ರ ರಾಜಕೀಯದಲ್ಲಿ ಉದ್ಧವ್ ಠಾಕ್ರೆ ಎಬ್ಬಿಸಿದ್ದ ಬಿರುಗಾಳಿಯ ತೀವ್ರತೆಯನ್ನು ಫಡ್ನವೀಸ್ ಒಮ್ಮೆಗೆ ತಣ್ಣಗಾಗಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net