ನಟಿ ತ್ರಿಷಾ ಬಗ್ಗೆ ಕೊಳಕು ಮಾತು; ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ವಶಕ್ಕೆ..Udhayanidhi Stalin

DMK’s Udhayanidhi Stalin arrested
DMK’s Udhayanidhi Stalin arrested
Published on

ಚೆನ್ನೈ:  ನಟಿ ತ್ರಿಷಾ ಅವರನ್ನು  ಉದ್ದೇಶಿಸಿ ಆಕ್ಷೇಪಾರ್ಹ ಹಾಗೂ ಅಸಭ್ಯ ಹೇಳಿಕೆ ನೀಡಿರುವ ಆರೋಪದ ಮೇರೆಗೆ ತಮಿಳುನಾಡಿನ ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್​ ಅವರನ್ನು ಅವರ ನಿವಾಸದಿಂದಲೇ ತಂಜಾವೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿರೋಧ ಪಕ್ಷದ ನಾಯಕನನ್ನು ವಶಕ್ಕೆ ಪಡೆದರು. ಅವರ ಬಂಧನದ ನಂತರ, ಉದಯನಿಧಿ ಅವರನ್ನು ತಂಜಾವೂರಿಗೆ ಕರೆದೊಯ್ಯಲಾಯಿತು.  ಕಾವೇರಿ ಪ್ರತಿಭಟನಾ ಸಭೆಯಲ್ಲಿ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಚೆನ್ನೈನ ನೀಲಂಕರೈನಲ್ಲಿರುವ ತಮ್ಮ ನಿವಾಸದಿಂದ ಪೊಲೀಸರು ತಮ್ಮನ್ನು ಕರೆತರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಉದಯನಿಧಿ, ನಾನು ಹೇಳದ ವಿಷಯಗಳಿಗಾಗಿ ನನ್ನನ್ನು ಬಂಧಿಸಲಾಗುತ್ತಿದೆ. ಮುಖ್ಯಮಂತ್ರಿಯಿಂದ ಮಂತ್ರಿಗಳವರೆಗೆ ಸರ್ಕಾರದಲ್ಲಿರುವ ಎಲ್ಲರೂ ರೀಲ್ಸ್​​ ಮಾಡುತ್ತಾ ಬದುಕುತ್ತಿದ್ದಾರೆ. ನನ್ನ ವಿರುದ್ಧ ಪೊಲೀಸರು ಕೈಗೊಂಡಿರುವ ಕ್ರಮ ಹಾಸ್ಯಮಯವಾಗಿದೆ. ಕಾನೂನುಬದ್ಧವಾಗಿ ಹೋರಾಡುತ್ತೇನೆ ಎಂದು ಹೇಳಿದರು

.

ಉದಯನಿಧಿ ಹೇಳಿದ್ದೇನು?

ನಮಗೆ ನಲ್ವತ್ತೈದು ಟಿಎಂಸಿ ಕಾವೇರಿ ನೀರು  ಬರಬೇಕಿತ್ತು. ಆದರೆ ಒಂದು ಹನಿ ಇನ್ನು ಸಿಕ್ಕಿಲ್ಲ. ನಮ್ಮ ಮುಖ್ಯಮಂತ್ರಿಯವರೊಬ್ಬರು ಬಾಯಿಬಿಡುತ್ತಿಲ್ಲ. ಅವರ ಏಕೈಕ ಕಾಳಜಿ ಡಿಎಂಕೆ ನಾಯಕರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೇಗೆ ಹೊರಿಸುವುದು ಎಂಬುದು ಮಾತ್ರ 
ಆ ಸಂದರ್ಭದಲ್ಲಿ ಸಭೆಯಲ್ಲಿದ್ದ ಕೆಲವರು ವಿಜಯ್ ಅವರ ಆಪ್ತೆ ತ್ರಿಷಾ ಅವರ ಹೆಸರನ್ನು ಕೂಗಲು ಆರಂಭಿಸಿದರು. ತಕ್ಷಣ ಮಾತನ್ನು ಸ್ಥಗಿತಗೊಳಿಸಿ ಗುಂಪಿನತ್ತ ನಗುತ್ತಾ ನೋಡಿದ ಉದಯನಿಧಿ, 'ಎಲ್ಲಿ ನೀರು ಬರಬೇಕೋ, ಅಲ್ಲಿಗೆ ಬರಬೇಕು.. ನಾನು ಕಾವೇರಿ ಬಗ್ಗೆ ಹೇಳಿದೆ' ಇದಕ್ಕೆ ಸಭಿಕರು ಜೋರಾದ ಚಪ್ಪಾಳೆ ಮತ್ತು ನಗುವಿನೊಂದಿಗೆ ಪ್ರತಿಕ್ರಿಯಿಸಿದರು. 

ಉದಯನಿಧಿ ವಿರುದ್ಧ ದೂರು

ಈ ವಿದ್ಯಾಮಾನಗಳ ನಂತರ  ಟಿವಿಕೆ ಮಹಿಳಾ ವಿಭಾಗದ ಪದಾಧಿಕಾರಿಗಳು ತಂಜಾವೂರು ಪೂರ್ವ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಷ್ಟೇ ಅಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ  ದೂರು ಸಲ್ಲಿಸಿ, ಉದಯನಿಧಿ ಸ್ಟಾಲಿನ್​ ಅವರ ವಿರುದ್ಧ  ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಹೇಳಿಕೆಯು ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತದ್ದು. ರಾಜಕೀಯ ನಾಯಕರು ಇಂತಹ ಮಾತುಗಳನ್ನು ಮಾತನಾಡಬಾರು ಎಂದು ಕಿಡಿಕಾರಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಈ ಹೇಳಿಕೆಯನ್ನು ಅಸಹ್ಯಕರ, ಅಸಭ್ಯ, ವಲ್ಗರ್ ಮತ್ತು ನಾಚಿಕೆಗೇಡಿನ ಸಂಗತಿ. ಡಿಎಂಕೆ ನಾಯಕನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು. 

ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ ಹೇಳಿದ್ದಿಷ್ಟು

ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್ ಮಾತನಾಡಿ, "ನಾನು ಅವರ ಸಂಪೂರ್ಣ ಭಾಷಣವನ್ನು ಕೇಳಿದ್ದೇನೆ. ಜನರು ಹೇಳುತ್ತಿರುವಂತೆ ಯಾವುದನ್ನೂ ಹೇಳಲಾಗಿಲ್ಲ. ಅವರು ಕೇವಲ ಮುಖ್ಯಮಂತ್ರಿಯ ವೈಫಲ್ಯಗಳನ್ನು ಪಟ್ಟಿ ಮಾಡಿದ್ದಾರೆ. ಅವರ ಭಾಷಣದಲ್ಲಿ ಯಾವುದೇ ಅವಮಾನಕರ ಸಂಗತಿ ಇರಲಿಲ್ಲ. ಅವರು ಆ ನಟನ ಹೆಸರನ್ನೇ ಪ್ರಸ್ತಾಪಿಸಿಲ್ಲ. ಅವರು ಕೇವಲ ಸರ್ಕಾರವನ್ನು ಮಾತ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸರ್ಕಾರದ ಸಮಸ್ಯೆಯೆಂದರೆ ಅವರಿಗೆ ತಮಿಳುನಾಡು ಜನರ ಬಗ್ಗೆ ಕಾಳಜಿಯಿಲ್ಲ. ಡಿಎಂಕೆ ಮೇಲೆ ದಾಳಿ ಮಾಡಲು ಯಾರೋ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಮೇಲೆ ದಾಳಿ ಮಾಡಲು ಮಾತ್ರ ಅವರ ಪಕ್ಷ ಆರಂಭವಾಗಿದೆ" ಎಂದಿದ್ದಾರೆ. 

ಯಾರು ಏನಂದ್ರು?

ಸಚಿವ ಆಧವ್ ಅರ್ಜುನ್  ಮಾತನಾಡಿ ಈ ಭಾಷಣ ಅಸಭ್ಯ ಮತ್ತು ನಾಚಿಕೆಗೇಡಿನದ್ದು. ಮೂಲಭೂತ ಮಾನವ ಘನತೆಯನ್ನು  ಹೊಂದಿಲ್ಲ. ಈ ಹೇಳಿಕೆ  ವಿರೋಧ ಪಕ್ಷದ ನಾಯಕನಿಗೆ ತಕ್ಕದಲ್ಲ ಎಂದರು

 ಆರೋಗ್ಯ ಸಚಿವ ಕೆ.ಜಿ. ಅರುಣ್‌ರಾಜ್ ಅವರು ಈ ಹೇಳಿಕೆಯು ಮಹಿಳೆಯರಿಗೆ ಹಾಗೂ ಕಾವೇರಿಯನ್ನು ನಂಬಿರುವ ರೈತ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net