ವಿಜಯ್ ಸಿಎಂ ಆಗಿದ್ದಕ್ಕೆ ಡಿಎಂಕೆ ಹತಾಶೆಗೊಂಡಿದೆ; ಉದಯನಿಧಿ ಸ್ಟಾಲಿನ್ ಟೀಕೆಗೆ ಕಾಂಗ್ರೆಸ್ ಖಡಕ್ ತಿರುಗೇಟು | Congress

ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್ ಮತ್ತು ಉದಯನಿಧಿ ಸ್ಟಾಲಿನ್
ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್ ಮತ್ತು ಉದಯನಿಧಿ ಸ್ಟಾಲಿನ್
Published on
ಚೆನ್ನೈ: ಟಿವಿಕೆ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಇಲ್ಲ, ಬೆನ್ನಿಗೆ ಚೂರಿ ಹಾಕಿದ್ದು, ಅವರನ್ನು ಮುಂದೆ ನಂಬಬಾರದು ಎಂದು ಟೀಕಿಸಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್(Congress), ವಿಜಯ್ ಸಿಎಂ ಆಗುವುದನ್ನು ತಡೆಯಲಾಗದ್ದಕ್ಕೆ ಡಿಎಂಕೆ ಹತಾಶೆಗೊಂಡಿದೆ ಎಂದು ತಿರುಗೇಟು ನೀಡಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್, ಕಾಂಗ್ರೆಸ್ ವಿರುದ್ಧದ ಡಿಎಂಕೆ ಹೇಳಿಕೆಯನ್ನು ಟೀಕಿಸಿದ್ದು, ಇದೊಂದು ನಾಟಕ. ಡಿಎಂಕೆ ಯುವ ಘಟಕವು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡಿದೆ ಏಕೆಂದರೆ ಅವರ ಯೋಜನೆ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಬಯಸಿದಂತೆ ವಿಜಯ್ ಮುಖ್ಯಮಂತ್ರಿಯಾಗುವುದನ್ನು ತಡೆಯುವುದು ಅವರ ಯೋಜನೆಯಾಗಿತ್ತು. ವಿಫಲವಾದ ಬಳಿಕ ಪಕ್ಷವು ಹತಾಶೆಯಿಂದ ವರ್ತಿಸುತ್ತಿದೆ. ಎಡ ಪಕ್ಷಗಳು (ಸಿಪಿಎಂ), ವಿಸಿಕೆ ಹಾಗೂ ಐಯುಎಂಎಲ್ ನಾಯಕರು ಡಿಎಂಕೆಯ ಹಿನ್ನಲೆ ರಾಜಕೀಯ ವ್ಯವಹಾರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದ್ರಾವಿಡ ಪಕ್ಷವು ಜಾತ್ಯತೀತ ಮುಖವಾಡ ಧರಿಸಿ ಕೇಸರಿ ಪಕ್ಷದೊಂದಿಗೆ ಭೂಗತ ವ್ಯವಹಾರಗಳಲ್ಲಿ ತೊಡಗಿಕೊಂಡಿದೆ. ಏಪ್ರಿಲ್ 23ರ ಚುನಾವಣೆಯ ಫಲಿತಾಂಶಗಳು ಇನ್ನೂ ಬರುತ್ತಿರುವಾಗಲೇ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ರಹಸ್ಯ ಮಾತುಕತೆಗಳು ಆರಂಭವಾಗಿದ್ದವು. ಬಿಜೆಪಿ ನಾಯಕರೊಬ್ಬರು ಅದನ್ನು ಸುಗಮಗೊಳಿಸಿದ್ದರು. ಅದು ಈಗ ನಿಧಾನವಾಗಿ ಬಹಿರಂಗಗೊಳ್ಳುತ್ತಿದೆ ಎಂದಿದ್ದಾರೆ.
ಡಿಎಂಕೆ ಮೈತ್ರಿಕೂಟದಿಂದ ಹೊರ ಬಂದು ಟಿವಿಕೆಯನ್ನು ಬೆಂಬಲಿಸುವ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡ ಟ್ಯಾಗೋರ್, ತಮ್ಮ ಪಕ್ಷವು ಬಿಜೆಪಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಮೇ 5ರ ವೇಳೆಗೆ ಸ್ಪಷ್ಟವಾಗಿದ್ದೇವು. ಬಿಜೆಪಿಯೊಂದಿಗೆ ಹಿಂಬಾಗಿಲಿನ ರಾಜಕೀಯ ಮಾಡುವವರೊಂದಿಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ನಿರ್ಧಾರ ಸರಳವಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.

ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ಶನಿವಾರ(ಮೇ 23) ಚೆನ್ನೈನ ಡಿಎಂಕೆ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಯುವ ಘಟಕದ ಸಭೆಯಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಚುನಾವಣೆಯಲ್ಲಿ ಐವರು ಕಾಂಗ್ರೆಸ್ ಶಾಸಕರ ಗೆಲುವಿಗೆ ಡಿಎಂಕೆ ಕಾರ್ಯಕರ್ತರೇ ಕಾರಣ. ಮತ್ತು ಎಂ.ಕೆ. ಸ್ಟಾಲಿನ್ ಅವರನ್ನು ಜನ ಮತ್ತೆ ಸಿಎಂ ಮಾಡಲು ಬಯಸಿದ್ದರಿಂದ ಅವರ ನಾಯಕತ್ವದಲ್ಲಿ ಐದು ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಹೇಳಿದ್ದರು.
ಮುಂದುವರೆದು, ಇಂದು ಕೆಲವು ಸ್ಥಾನಗಳಿಗಾಗಿ ಅವರು ನಮಗೆ ತಿಳಿಸದೆ ಟಿವಿಕೆ ಜೊತೆ ಓಡಿಹೋದರು. ಕೃತಜ್ಞತೆ ಮತ್ತು ಸಭ್ಯತೆಯ ಕೊರತೆಯಿರುವ ಕಾಂಗ್ರೆಸ್ ಅನ್ನು ನಾವು ಎಂದಿಗೂ ನಂಬಬಾರದು. ನಾವು ಅವರನ್ನು ನಮ್ಮ ಹತ್ತಿರಕ್ಕೆ ಬಿಡಬಾರದು. ತಮಿಳುನಾಡಿನ ಜನರು ಶೀಘ್ರದಲ್ಲೇ ಅವರಿಗೆ ಪರಿಪೂರ್ಣ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net