ಪಂಜಾಬ್ ಕಾಂಗ್ರೆಸ್‌ನಲ್ಲಿ ಭಿನ್ನಮತವಿಲ್ಲ: ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ: ಅಮರಿಂದರ್ ಸಿಂಗ್ ರಾಜಾ ವಾರಿಂಗ್ | Amarinder Singh Raja
ಅಮರಿಂದರ್ ಸಿಂಗ್ ರಾಜಾ ವಾರಿಂಗ್
Published on:
Copied
Follow Us
ಚಂಡೀಗಢ: ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿರುಕು ಉಂಟಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್(Amarinder Singh Raja), ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರ ಬೆಂಬಲಿಗರು ಶನಿವಾರ ಮೊರಿಂಡಾದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದು, ಈ ಮೂಲಕ ಪಕ್ಷದಲ್ಲಿದ್ದ ಭಿನ್ನಮತ ಬಹಿರಂಗವಾಗಿದೆ.
ಚಂಡೀಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಾರಿಂಗ್, ಪಕ್ಷದ ರಾಜ್ಯ ಘಟಕವು ಒಗ್ಗಟ್ಟಿನಿಂದ ಇದೆ. 2027ರಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಚನ್ನಿ ಸಿಎಂ ಆಗಬಹುದು. ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಿಎಂ ಅಭ್ಯರ್ಥಿಯನ್ನಾಗಿ ಮಾಡುವ ಯಾರನ್ನಾದರೂ ತಾವು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ನನಗೆ ಒಂದೇ ಒಂದು ಗುರಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವುದು. ನಾನು ಸಿಎಂ ಆಗುವ ಕನಸು ಕಾಣುವುದಿಲ್ಲ. ಚನ್ನಿ ಸಾಹಬ್ ಅಥವಾ ಯಾವುದೇ ಹಿರಿಯ ನಾಯಕರು ಹಾಗೆ ಏನನ್ನೂ ಹೇಳಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗೆ ಹೇಳಿದ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಆದರೆ ಯಾರಿಗೂ ಅಶಿಸ್ತು ತೋರುವ ಹಕ್ಕಿಲ್ಲ ಎಂದಿದ್ದಾರೆ.
2017ರಿಂದ 2022ರವರೆಗೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2021 ರವರೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್‌ನೊಳಗಿನ ದೀರ್ಘಕಾಲದ ಅಧಿಕಾರ ಹೋರಾಟದ ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ, ಚನ್ನಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸಿಎಂ ಆಗಿ ನೇಮಕ ಮಾಡಿತು.
ಮುಂದೆ 2022ರ ಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ನಿಂದ ಅಧಿಕಾರವನ್ನು ಕಿತ್ತುಕೊಂಡಿತು. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತು (ಏಜೆನ್ಸೀಸ್).