ಬಿಜೆಪಿ ಹೈಕಮಾಂಡ್ ಮೇಲೆ ಅಸಮಾಧಾನ; ಕೊಯಮತ್ತೂರಿಗೆ ಪ್ರಧಾನಿ ಮೋದಿ ಬಂದ್ರೂ ಸ್ವಾಗತಿಸಲು ಬಾರದ ಕೆ.ಅಣ್ಣಾಮಲೈ | K Annamalai

ಕೆ.ಅಣ್ಣಾಮಲೈ
ಕೆ.ಅಣ್ಣಾಮಲೈ
Published on
ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಬಿಜೆಪಿಯಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದ್ದು, ನಿನ್ನೆ(ಮಾ. 29) ಕೊಯಮತ್ತೂರು ಏರ್ಪೋರ್ಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದ್ರೂ ಸ್ವಾಗತಿಸಲು ಬರದೇ ಇದ್ದದ್ದು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಕೇರಳದಲ್ಲಿ ಪ್ರಚಾರದಲ್ಲಿ ಭಾಗವಹಿಸಲು ಕೊಯಮತ್ತೂರು ಏರ್ಪೋರ್ಟ್​ಗೆ ಆಗಮಿಸಿದ್ದ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಬಿಜೆಪಿ ಮತ್ತು ಎಐಎಡಿಎಂಕೆ ನಾಯಕರು ಸಾಲುಗಟ್ಟಿ ನಿಂತಿದ್ದರು, ಸ್ವಾಗತ ಕೋರುವವರ ಪಟ್ಟಿಯಲ್ಲಿ ಅಣ್ಣಾಮಲೈಯವರ ಹೆಸರು ಇದ್ದರು ಅವರು ಅತ್ತ ಸುಳಿದಿಲ್ಲ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ತಮಿಳುನಾಡಿನ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಪುನಃ ಮೈತ್ರಿ ಮತ್ತು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಣ್ಣಾಮಲೈ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರಿಗೆ ಉಸ್ತುವಾರಿ ವಹಿಸಿದ್ದ ಹಲವು ಕ್ಷೇತ್ರಗಳಿಗೆ ತಂದೆಯ ಅನಾರೋಗ್ಯದ ನೆಪ ಹೇಳಿ ರಾಜೀನಾಮೆ ನೀಡಿದ್ದರು.
ಇನ್ನೂ ಪ್ರಧಾನಿ ಮೋದಿ ಸ್ವಾಗತಿಸಲು ಅಣ್ಣಾಮಲೈ ಬಾರದ ವಿಚಾರದ ಬಗ್ಗೆ ಮಾತನಾಡಿರುವ ಶಾಸಕಿ ವನತಿ ಶ್ರೀನಿವಾಸನ್, ನಾನು ಬಂದ ತಕ್ಷಣ, ಅಣ್ಣಾಮಲೈ ಯಾವಾಗ ಬರುತ್ತಿದ್ದಾರೆ ಎಂದು ಕೇಳಿದೆ. ಪಟ್ಟಿಯಲ್ಲಿ ಅವರ ಹೆಸರಿತ್ತು ಆದರೆ ಅವರು ಬರಲಿಲ್ಲ. ನಾನು ಕಾರಣವನ್ನು ವಿಚಾರಿಸುತ್ತಿದ್ದೇನೆ. ಬಿಜೆಪಿಯಲ್ಲಿ ಯಾವುದೇ ವೈಯಕ್ತಿಕ ಬೆಂಬಲಿಗರಿಲ್ಲ. ಅಣ್ಣಾಮಲೈ ನಮ್ಮ ಪ್ರೀತಿಯ ಕಿರಿಯ ಸಹೋದರ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂದು ಪಕ್ಷದ ನಾಯಕತ್ವಕ್ಕೆ ತಿಳಿದಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net