ಟೀಕೆಗೊಂದು ಪಕ್ಷ ಸ್ಥಾಪನೆಯಾ..? 24 ಗಂಟೆಯಲ್ಲಿ 1.6 ಲಕ್ಷ ಫಾಲೋವರ್ಸ್!: ಬಂದಷ್ಟೇ ವೇಗವಾಗಿ ಮಾಯವಾಯ್ತು ದಿಮಾಗಿ ನಕ್ಸಲ್ ಪಾರ್ಟಿ ಪೇಜ್! | Dimagi Naxal Party

Dimagi Naxal Party > 24 ಗಂಟೆಯಲ್ಲಿ 1.6 ಲಕ್ಷ ಫಾಲೋವರ್ಸ್!: ಬಂದಷ್ಟೇ ವೇಗವಾಗಿ ಮಾಯವಾಯ್ತು ದಿಮಾಗಿ ನಕ್ಸಲ್ ಪಾರ್ಟಿ ಪೇಜ್
Dimagi Naxal Party > 24 ಗಂಟೆಯಲ್ಲಿ 1.6 ಲಕ್ಷ ಫಾಲೋವರ್ಸ್!: ಬಂದಷ್ಟೇ ವೇಗವಾಗಿ ಮಾಯವಾಯ್ತು ದಿಮಾಗಿ ನಕ್ಸಲ್ ಪಾರ್ಟಿ ಪೇಜ್
Published on

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ನೀಡಿದ್ದ ದಿಮಾಗಿ ನಕ್ಸಲ್ ಎಂಬ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ದಿಮಾಗಿ ನಕ್ಸಲ್ ಪಾರ್ಟಿ (Dimagi Naxal Party) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯೊಂದು ರಾತ್ರೋರಾತ್ರಿ ಪ್ರತ್ಯಕ್ಷಗೊಂಡಿದ್ದು, ಕೇವಲ ಒಂದೇ ದಿನದಲ್ಲಿ 1.6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಗಳಿಸಿಕೊಂಡಿತ್ತು. ಆದರೆ, ಪ್ರತ್ಯಕ್ಷವಾದಷ್ಟೇ ವೇಗವಾಗಿ ಆ ಖಾತೆ ಕಣ್ಮರೆಯಾಗಿದೆ.

ಈ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 62 ಪೋಸ್ಟ್‌ಗಳಿದ್ದವು ಹಾಗೂ ಅದು ಸುಮಾರು 35 ಜನರನ್ನು ಫಾಲೋ ಮಾಡುತ್ತಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿದ್ದ ಮಾಹಿತಿಯ ಪ್ರಕಾರ, ಈ ಅಕೌಂಟ್‌ ಅನ್ನು ಇದೇ ತಿಂಗಳು ತೆರೆಯಲಾಗಿತ್ತು. ಲಾಗ್‌ಗಳ ಪ್ರಕಾರ ಇದರ ಯೂಸರ್ ನೇಮ್ ಅನ್ನು ಒಮ್ಮೆ ಬದಲಾಯಿಸಲಾಗಿತ್ತು. ಆದರೆ, ಈ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದರು ಎಂಬ ವಿಷಯದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಮಾವೋವಾದಿಗಳ ವಿರುದ್ಧ ಸರ್ಕಾರ ಸಾಧಿಸಿದ ಯಶಸ್ಸು ಹಾಗೂ ಕತ್ತಲೆಯಲ್ಲಿ ಅಡಗಿರುವ ಅಪಾಯಗಳ ಬಗ್ಗೆ ಉಲ್ಲೇಖಿಸುವಾಗ ಈ ದಿಮಾಗಿ ನಕ್ಸಲ್ ಎಂಬ ಪದಗಳನ್ನು ಬಳಸಿದ್ದರು. ನಾವು ಕಾಡುಗಳಿಂದ ಶಸ್ತ್ರಸಜ್ಜಿತ ನಕ್ಸಲರನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ದೇಶವನ್ನು ಆ ಸಂಕ್ಷೋಭೆಯಿಂದ ಮುಕ್ತಿಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ಶಸ್ತ್ರಸಜ್ಜಿತ ನಕ್ಸಲರು ಹೊರಟುಹೋಗಿದ್ದರೂ, ದಿಮಾಗಿ (ಬೌದ್ಧಿಕ) ನಕ್ಸಲರು ಇನ್ನೂ ಸುತ್ತಮುತ್ತಲೂ ಅಡಗಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದರು.

ದಿಮಾಗಿ ನಕ್ಸಲ್ ಪಟ್ಟಿ ಬಿಡುಗಡೆ ಮಾಡಿದ ರಿಜಿಜು!

ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದಿಮಾಗಿ ನಕ್ಸಲರು ಎಂದು ಹೇಳಿರುವುದು ವಿರೋಧ ಪಕ್ಷದ ನಾಯಕರನ್ನಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಿರಣ್ ರಿಜಿಜು, ಪ್ರಧಾನಿ ಮೋದಿ ಅವರು ದಿಮಾಗಿ ನಕ್ಸಲರು ಎಂದು ಕರೆದಿರುವುದು ಕೇವಲ ಮಾವೋವಾದಿಗಳನ್ನು ಬೆಂಬಲಿಸುವ ಮತ್ತು ಭಾರತದ ಸಂವಿಧಾನವನ್ನು ನಿರಾಕರಿಸುವವರನ್ನು, ಪ್ರತ್ಯೇಕತಾವಾದಿಗಳ ಪರ ನಿಂತು ಸಂವಿಧಾನದ 370ನೇ ವಿಧಿಯನ್ನು ಬೆಂಬಲಿಸುವವರನ್ನು ಹಾಗೂ ಭಾರತದ ಈಶಾನ್ಯ ರಾಜ್ಯಗಳನ್ನು ಉಳಿದ ಭಾಗದಿಂದ ಪ್ರತ್ಯೇಕಿಸಲು ಚಿಕನ್ಸ್ ನೆಕ್ ಅನ್ನು ಕತ್ತರಿಸಲು ಕರೆ ನೀಡುವವರನ್ನು ಮಾತ್ರ ಎಂದು ವಿವರಿಸಿದ್ದಾರೆ. ಇಲ್ಲಿ ಚಿಕನ್ಸ್ ನೆಕ್ ಎಂಬುದು ಪಶ್ಚಿಮ ಬಂಗಾಳದಲ್ಲಿರುವ 22 ಕಿಲೋಮೀಟರ್ ಅಗಲದ ಕಿರಿದಾದ ಭೂಪ್ರದೇಶವಾಗಿದ್ದು, ಇದು ಭಾರತದ ಮೂಲಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ.
ಪ್ರಧಾನಿ ಮೋದಿ ಅವರ ದಿಮಾಗಿ ನಕ್ಸಲ್ ಹೇಳಿಕೆಗೆ ತಿರುಗೇಟು ನೀಡಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದರು. ತಾವು ದಿಮಾಗಿ ನಕ್ಸಲ್ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿಕೊಂಡಿದ್ದರು(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net