ಬಹುನಿರೀಕ್ಷಿತ ಡಿಜಿಟಲ್ ಜನಗಣತಿಯ ಮೊದಲ ಹಂತ ಏಪ್ರಿಲ್ 1ರಿಂದ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿಯ ಗಣತಿ ಸಂಪೂರ್ಣ ಕಾಗದರಹಿತವಾಗಿದ್ದು, ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೊದಲ ಹಂತದಲ್ಲಿ (ಏಪ್ರಿಲ್-ಸೆಪ್ಟೆಂಬರ್) ಮನೆಗಳ ಪಟ್ಟಿ ಹಾಗೂ ಆಸ್ತಿ ವಿವರಗಳನ್ನು ಕಲೆ ಹಾಕಲಾಗುತ್ತದೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತೆ? ನಾವು ಏನು ಮಾಡಬೇಕು? ಯಾವ್ಯಾವ ಪ್ರಶ್ನೆಗಳಿಗೆ ಉತ್ತರಿಸಬೇಕು? ಜನಗಣತಿಯ ಮುಂದಿನ ಹಂತ ಏನು? ಈ ಕುರಿತು ಇಲ್ಲಿದೆ ವಿವರ.
ಭಾರತದಲ್ಲಿ ಜನಗಣತಿ ಎಂಬುದು ಕೇವಲ ಅಂಕಿಅಂಶಗಳ ಸಂಗ್ರಹವಲ್ಲ, ಇದು ದೇಶದ ಭವಿಷ್ಯದ ಯೋಜನೆಗಳನ್ನು ರೂಪಿಸುವ ಮಹತ್ವದ ಪ್ರಕ್ರಿಯೆ. 2011ರಿಂದ 2026ರವರೆಗೆ ಅಂದರೆ ಸುಮಾರು 15 ವರ್ಷಗಳ ಸುದೀರ್ಘ ಅವಧಿ ನಂತರ ಈಗ ಗಣತಿ ನಡೆಯುತ್ತಿದೆ. ಈ ಅವಧಿಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿ ಹೊರಹೊಮ್ಮಿದೆ. ಡಿಜಿಟಲ್ ಕ್ರಾಂತಿಯಿಂದಾಗಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಅಗಾಧವಾಗಿ ಹೆಚ್ಚಿದೆ. ಜನರ ಜೀವನಮಟ್ಟ ಮತ್ತು ವಲಸೆಯ ಮಾದರಿಗಳಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಹಾಗಾಗಿ, ಈಗ ನಡೆಯುತ್ತಿರುವ ಜನಗಣತಿಯ ವರದಿ ಭಾರತದ ಬದಲಾದ ಸಾಮಾಜಿಕ ಮತ್ತು ಆರ್ಥಿಕ ಚಿತ್ರಣವನ್ನು ಜಗತ್ತಿನ ಮುಂದೆ ತೆರೆದಿಡಲಿದೆ.
ಜನಗಣತಿ ಎಂಬುದು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಾಂಖ್ಯಿಕ ಕಸರತ್ತಾಗಿದೆ. ಈ ಬಾರಿಯ ಡಿಜಿಟಲ್ ಜನಗಣತಿಗಾಗಿ ಕೇಂದ್ರ ಸರ್ಕಾರವು -ಠಿ;11,718.24 ಕೋಟಿ ರೂಪಾಯಿಗಳನ್ನು ಅನುಮೋದಿಸಿದೆ. ಈ ಬೃಹತ್ ಕಾರ್ಯಕ್ಕಾಗಿ 32ರಿಂದ 35 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಹೆಚ್ಚಿನವರು ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಕಂದಾಯ ಇಲಾಖೆಯ ನೌಕರರಾಗಿರುತ್ತಾರೆ. ಎರಡನೇ ಹಂತದ ಎಣಿಕೆ ಮುಗಿದ ನಂತರ, ಅಂದರೆ 2027ರ ದ್ವಿತೀಯಾರ್ಧದಲ್ಲಿ ದೇಶದ ಒಟ್ಟು ಜನಸಂಖ್ಯೆಯ ತಾತ್ಕಾಲಿಕ ವರದಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಜಾತಿವಾರು ಗಣತಿ ಮತ್ತು ಇತರ ಆಳವಾದ ಸಾಮಾಜಿಕ-ಆರ್ಥಿಕ ದತ್ತಾಂಶಗಳನ್ನೊಳಗೊಂಡ ಪೂರ್ಣ ಪ್ರಮಾಣದ ವರದಿಗಳು 2028ರ ವೇಳೆಗೆ ಹಂತ-ಹಂತವಾಗಿ ಲಭ್ಯವಾಗಲಿವೆ.
ಏಪ್ರಿಲ್ 1ರಿಂದ ಆರಂಭವಾಗಿರುವ ಈ ಪ್ರಕ್ರಿಯೆಗೆ ಜನಸಾಮಾನ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬಾರಿ ಜನಗಣತಿಯನ್ನು ಎರಡು ಪ್ರಮುಖ ಹಂತಗಳಲ್ಲಿ ನಡೆಸಲಾಗುತ್ತದೆ.
ಮನೆ ಪಟ್ಟಿ ಮತ್ತು ಮನೆಗಳ ಗಣತಿ: ಮೊದಲ ಹಂತದಲ್ಲಿ ದೇಶದಾದ್ಯಂತ ಇರುವ ಮನೆಗಳನ್ನು ಪಟ್ಟಿ ಮಾಡಲಾಗುತ್ತದೆ. ಮನೆಯ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳ (ಕುಡಿಯುವ ನೀರು, ಶೌಚಗೃಹ, ವಾಹನ, ಇಂಟರ್ನೆಟ್ ಸಂಪರ್ಕ ಇತ್ಯಾದಿ) ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.
ಜನಸಂಖ್ಯೆ ಎಣಿಕೆ: ಇದು ಎರಡನೇ ಹಂತವಾಗಿದ್ದು, ಇದರಲ್ಲಿ ವ್ಯಕ್ತಿಗತ ಮಾಹಿತಿಗಳನ್ನು ಪಡೆಯಲಾಗುತ್ತದೆ. ಹೆಸರು, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಧರ್ಮ ಮತ್ತು ಭಾಷೆಯಂತಹ ವಿವರಗಳನ್ನು ದಾಖಲಿಸಲಾಗುತ್ತದೆ.
ವಿಶೇಷಗಳು
ತಂತ್ರಜ್ಞಾನದ ಸಾಥ್: ಇದೇ ಮೊದಲ ಬಾರಿಗೆ ಜನಗಣತಿಯನ್ನು ಪೂರ್ಣಪ್ರಮಾಣದಲ್ಲಿ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ. ಗಣತಿದಾರರು ಕಾಗದದ ಫಾಮರ್್ಗಳ ಬದಲಿಗೆ ಮೊಬೈಲ್ ಫೋನ್ ಆಪ್ ಬಳಸುತ್ತಾರೆ. ಇದರಿಂದ ದತ್ತಾಂಶ ಸಂಗ್ರಹಣೆ ವೇಗವಾಗಿ ಮತ್ತು ನಿಖರವಾಗಿ ನಡೆಯುತ್ತದೆ.
ಸ್ವಯಂ ಗಣತಿ: ನಾಗರಿಕರಿಗೆ ತಮ್ಮ ವಿವರಗಳನ್ನು ತಾವೇ ಆನ್ಲೈನ್ ಪೋರ್ಟಲ್ ಮೂಲಕ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಇದು ಜನಸಾಮಾನ್ಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಸರ್ಕಾರದ ಅಧಿಕೃತ ಜಾಲತಾಣ ದಲ್ಲಿ (https://se.census.gov.in) ಜನರು ತಮ್ಮ ಮಾಹಿತಿಯನ್ನು ಸಲ್ಲಿಸಬೇಕು. ಬಳಿಕ ಸ್ವಯಂ ಗಣತಿಯ ಐಡಿ ದೊರೆಯುತ್ತದೆ. ಗಣತಿದಾರರು ಮನೆಗೆ ಬಂದಾಗ ಈ ಐಡಿಯನ್ನು ತೋರಿಸುವುದು ಕಡ್ಡಾಯ.
ಬಹುಮುಖಿ ದತ್ತಾಂಶ: ಕೇವಲ ಸಂಖ್ಯೆಗಳನ್ನಷ್ಟೇ ಅಲ್ಲದೆ, ವಲಸೆ ಹೋದವರ ವಿವರ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆಯೂ ಹೆಚ್ಚಿನ ಗಮನ ಹರಿಸಲಾಗುತ್ತದೆ.
ವೇಗದ ಫಲಿತಾಂಶ: ಡಿಜಿಟಲ್ ವಿಧಾನದಿಂದಾಗಿ, ಈ ಹಿಂದೆ ಫಲಿತಾಂಶ ಪ್ರಕಟಿಸಲು ಬೇಕಾಗುತ್ತಿದ್ದ ವರ್ಷಗಟ್ಟಲೇ ಸಮಯ ಈಗ ಗಣನೀಯವಾಗಿ ಕಡಿಮೆಯಾಗಲಿದೆ.
ಪ್ರಾಮುಖ್ಯ
ಸರ್ಕಾರ ಯೋಜನೆ ಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಕ್ಕೆ ತರುವಲ್ಲಿ ಈ ದತ್ತಾಂಶ ತುಂಬ ಸಹಕಾರಿಯಾಗುತ್ತದೆ. ಉದಾಹರಣೆಗೆ, ಶಾಲೆಗಳು, ವಸತಿಗೃಹಗಳು, ಆಸ್ಪತ್ರೆಗಳು ಮತ್ತು ರಸ್ತೆ, ಸೇತುವೆಗಳನ್ನು ಎಲ್ಲಿ ನಿರ್ವಿುಸಬೇಕು ಎಂಬುದನ್ನು ಈ ದತ್ತಾಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ರಾಜ್ಯಗಳಿಗೆ ನೀಡುವ ಅನುದಾನ ಮತ್ತು ಮೀಸಲಾತಿ ಕ್ಷೇತ್ರಗಳ ಪುನರ್ವಿಂಗ ಡಣೆಗೆ ಜನಗಣತಿ ಆಧಾರವಾಗಿರುತ್ತದೆ.
ದೇಶದ ಆರ್ಥಿಕ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿ.
ಈ ಬಾರಿಯ ಜನಗಣತಿಯಲ್ಲಿ ಜಾತಿವಾರು ಮಾಹಿತಿಯನ್ನು ಸಹ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.
ಜನರು ಏನು ಮಾಡಬೇಕು?
ಜನಗಣತಿ ಪ್ರಕ್ರಿಯೆಯಲ್ಲಿ ಪಾಳ್ಗೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಯಾವುದೇ ತಪು್ಪ ಮತ್ತು ಗೊಂದಲ ಗಳಿಲ್ಲದ ನಿಖರವಾದ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಕು ಅಥವಾ ವೆಬ್ ಪೋರ್ಟಲ್ನಲ್ಲಿ ಸ್ವಯಂ ಗಣತಿ ಮಾಡಿಕೊಳ್ಳಬಹುದು.
ಪ್ರಮುಖ ದಿನಾಂಕಗಳು
ಮೊದಲ ಹಂತ (ಮನೆ ಪಟ್ಟಿ ಮತ್ತು ಮನೆಗಳ ಗಣತಿ): ಇದು 2026ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ.
ಏಪ್ರಿಲ್ 1ರಿಂದ 15: ಕರ್ನಾಟಕ, ಗೋವಾ, ಸಿಕ್ಕಿಂ, ಮಿಜೋರಾಂ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ದೆಹಲಿಯ ಕೆಲವು ಭಾಗಗಳಲ್ಲಿ ‘ಸ್ವಯಂ ಗಣತಿ’ ಆರಂಭವಾಗಿದೆ.
ಏಪ್ರಿಲ್ 16ರಿಂದ ಮೇ 15: ಈ ಮೇಲಿನ ರಾಜ್ಯಗಳಲ್ಲಿ ಗಣತಿದಾರರು ಮನೆ-ಮನೆಗೆ ಭೇಟಿ ನೀಡುವ ಪ್ರಕ್ರಿಯೆ ನಡೆಯಲಿದೆ. ಇತರ ರಾಜ್ಯಗಳಾದ ಗುಜರಾತ್, ಉತ್ತರ ಪ್ರದೇಶ, ಬಿಹಾರ ಮುಂತಾದೆಡೆ ಮೇ ಮತ್ತು ಜೂನ್ ತಿಂಗಳಲ್ಲಿ ಈ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ.
ಎರಡನೇ ಹಂತ (ಜನಸಂಖ್ಯೆ ಎಣಿಕೆ): ಇದು 2027ರ ಫೆಬ್ರವರಿಯಲ್ಲಿ ದೇಶಾದ್ಯಂತ ಏಕಕಾಲದಲ್ಲಿ ನಡೆಯಲಿದೆ.
ಕೇಳಲಾಗುವ ಪ್ರಮುಖ ಪ್ರಶ್ನೆಗಳು
1) ಮನೆ ಮತ್ತು ಸೌಲಭ್ಯಗಳ ಬಗ್ಗೆ
ಮನೆಯ ವಿಧ: ಮನೆ ಸ್ವಂತದ್ದೇ ಅಥವಾ ಬಾಡಿಗೆಯದ್ದೇ? ಮನೆಯ ಛಾವಣಿ, ಗೋಡೆಗಳಿಗೆ ಬಳಸಿದ ವಸ್ತುಗಳು ಯಾವುವು?
ಮೂಲಸೌಕರ್ಯ: ಕುಡಿಯುವ ನೀರಿನ ಮೂಲ ಯಾವುದು? (ನಳ, ಬಾವಿ, ಇತ್ಯಾದಿ).
ಇಂಧನ ಮತ್ತು ಬೆಳಕು: ಅಡುಗೆಗೆ ಬಳಸುವ ಇಂಧನ (ಎಲ್ಪಿಜಿ, ಕಟ್ಟಿಗೆ) ಮತ್ತು ಮನೆಗೆ ವಿದ್ಯುತ್ ಸಂಪರ್ಕವಿದೆಯೇ?
ಆಸ್ತಿ ಮತ್ತು ಉಪಕರಣಗಳು: ಮನೆಯಲ್ಲಿ ರೇಡಿಯೋ, ಟಿವಿ, ಕಂಪ್ಯೂಟರ್/ಲ್ಯಾಪ್ಟಾಪ್, ಇಂಟರ್ನೆಟ್ ಸೌಲಭ್ಯ, ಸೈಕಲ್, ಸ್ಕೂಟರ್ ಅಥವಾ ಕಾರು ಇದೆಯೇ?
ಬ್ಯಾಂಕಿಂಗ್: ಕುಟುಂಬದ ಸದಸ್ಯರು ಬ್ಯಾಂಕ್ ಖಾತೆ ಹೊಂದಿದ್ದಾರೆಯೇ?
2) ವೈಯಕ್ತಿಕ ವಿವರಗಳು
ವೈಯಕ್ತಿಕ ಮಾಹಿತಿ: ಹೆಸರು, ಲಿಂಗ, ಜನ್ಮ ದಿನಾಂಕ ಮತ್ತು ವಯಸ್ಸು.
ಸಾಮಾಜಿಕ ವಿವರ: ವೈವಾಹಿಕ ಸ್ಥಿತಿ, ಧರ್ಮ, ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರೇ?
ಶಿಕ್ಷಣ: ಸಾಕ್ಷರತೆ ಮತ್ತು ಗರಿಷ್ಠ ವಿದ್ಯಾಭ್ಯಾಸದ ಮಟ್ಟ.
ಭಾಷೆ: ಮಾತೃಭಾಷೆ ಮತ್ತು ತಿಳಿದಿರುವ ಇತರ ಎರಡು ಭಾಷೆಗಳು.
ಕೆಲಸ/ಉದ್ಯೋಗ: ನೀವು ಮಾಡುವ ಕೆಲಸದ ಸ್ವರೂಪ (ಕೃಷಿ, ವ್ಯಾಪಾರ, ಸರ್ಕಾರಿ ಕೆಲಸ, ಖಾಸಗಿ ಕೆಲಸ, ಸ್ವಯಂ ಉದ್ಯೋಗ ಇತ್ಯಾದಿ) ಮತ್ತು ಕೆಲಸದ ಅವಧಿ.
ವಲಸೆ: ನೀವು ಹುಟ್ಟಿದ ಸ್ಥಳ ಯಾವುದು? ಈಗ ಇರುವ ಸ್ಥಳಕ್ಕೆ ಎಷ್ಟು ವರ್ಷಗಳ ಹಿಂದೆ ಬಂದಿದ್ದೀರಿ?
ಸಂತಾನೋತ್ಪತ್ತಿ ವಿವರ (ಮಹಿಳೆಯರಿಗೆ): ಜನಿಸಿದ ಮಕ್ಕಳ ಸಂಖ್ಯೆ ಮತ್ತು ಪ್ರಸ್ತುತ ಇರುವ ಮಕ್ಕಳ ವಿವರ.
ಹೀಗಿದೆ ಪ್ರಕ್ರಿಯೆ
ಲಕ್ಷಾಂತರ ಶಿಕ್ಷಕರು ಮತ್ತು ಸರ್ಕಾರಿ ನೌಕರರಿಗೆ ಗಣತಿ ಕಾರ್ಯಕ್ಕಾಗಿ ವಿಶೇಷ ತರಬೇತಿ ನೀಡಲಾಗಿದೆ.
ಗಣತಿದಾರರು ತಮಗೆ ನಿಗದಿಪಡಿಸಿದ ಪ್ರದೇಶದ ನಕ್ಷೆಯನ್ನು ಸಿದ್ಧಪಡಿಸಿಕೊಂಡು ಪ್ರತಿಯೊಂದು ಕಟ್ಟಡವನ್ನೂ ಗುರುತಿಸುತ್ತಾರೆ. ಬಳಿಕ ಪ್ರತಿ ಮನೆಗೆ ಭೇಟಿ ನೀಡಿ ಮನೆಯ ಮುಖ್ಯಸ್ಥರನ್ನು ಅಥವಾ ಜವಾಬ್ದಾರಿಯುತ ವ್ಯಕ್ತಿಯನ್ನು ಮಾತನಾಡಿಸಿ ನಿಗದಿಪಡಿಸಿದ ಪ್ರಶ್ನೆಗಳನ್ನು ಕೇಳಿ, ಮಾಹಿತಿ ದಾಖಲಿಸುತ್ತಾರೆ. ಮನೆಗೆ ಬರುವ ಗಣತಿದಾರರು ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರುತ್ತಾರೆ. ಅವರು ತಮ್ಮ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ನಲ್ಲಿರುವ ಅಧಿಕೃತ ಆಪ್ನಲ್ಲಿ ಜನರು ನೀಡುವ ವಿವರಗಳನ್ನು ದಾಖಲಿಸುತ್ತಾರೆ.
ಜನರು ನೀಡುವ ಎಲ್ಲ ಮಾಹಿತಿಗಳು ಗೌಪ್ಯವಾಗಿರುತ್ತವೆ. ಇದನ್ನು ಕೇವಲ ಅಂಕಿಅಂಶಗಳ ವಿಶ್ಲೇಷಣೆಗಾಗಿ ಬಳಸಲಾಗುತ್ತದೆಯೇ ಹೊರತು ವೈಯಕ್ತಿಕವಾಗಿ ಹಂಚಿಕೊಳ್ಳಲಾಗುವುದಿಲ್ಲ.
ಮುಖ್ಯ ನಿಯಮಗಳು
ಭಾಷಾ ಸ್ವಾತಂತ್ರ್ಯ ನೀವು ಮನೆಯಲ್ಲಿ ಮಾತನಾಡುವ ಯಾವುದೇ ಭಾಷೆಯನ್ನು ಮಾತೃಭಾಷೆಯಾಗಿ ನೋಂದಾಯಿಸಬಹುದು.
ಮಾಹಿತಿಯ ನಿಖರತೆ: ಕಾನೂನಿನ ಪ್ರಕಾರ (ಇಛ್ಞಿಠ್ಠಠ ಅಠಿ, 1948), ಜನಗಣತಿಯಲ್ಲಿ ಕೇಳುವ ಪ್ರಶ್ನೆಗಳಿಗೆ ನಿಖರವಾದ ಉತ್ತರ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ದಾಖಲೆಗಳ ಅವಶ್ಯಕತೆ: ಸಾಮಾನ್ಯವಾಗಿ ಗಣತಿದಾರರು ನಿಮ್ಮ ಯಾವುದೇ ದಾಖಲೆಗಳನ್ನು (ಆಧಾರ್ ಕಾರ್ಡ್ ಇತ್ಯಾದಿ) ಕಡ್ಡಾಯವಾಗಿ ತೋರಿಸಲೇಬೇಕು ಎಂದು ಒತ್ತಾಯಿಸುವುದಿಲ್ಲ, ಆದರೆ ನಿಖರವಾದ ಮಾಹಿತಿ ನೀಡಲು ಅವುಗಳು ಸಹಕಾರಿ.
ಇತಿಹಾಸ
ಭಾರತದಲ್ಲಿ ಮೊದಲ ಬಾರಿಗೆ ಜನಗಣತಿ ನಡೆದದ್ದು 1872ರಲ್ಲಿ (ಲಾರ್ಡ್ ಮಾಯೋ ಕಾಲದಲ್ಲಿ). ಆದರೆ, ದೇಶಾದ್ಯಂತ ಏಕಕಾಲದಲ್ಲಿ ವ್ಯವಸ್ಥಿತವಾಗಿ ಜನಗಣತಿ ಆರಂಭವಾದದ್ದು 1881ರಿಂದ. ಅಂದಿನಿಂದ ಪ್ರತಿ ಹತ್ತು ವರ್ಷಕ್ಕೊಮ್ಮೆ ತಪ್ಪದೇ ಜನಗಣತಿ ನಡೆಯುತ್ತ ಬಂದಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ವಿಳಂಬವಾಗಿ, ಈಗ 2026ರ ಏಪ್ರಿಲ್ನಲ್ಲಿ ಆರಂಭವಾಗಿದೆ.