ಚುನಾವಣಾ ಆಯೋಗವನ್ನು ತುಘಲಕ್ ಆಯೋಗ ಎಂದ ದೀದಿ; ಮಮತಾ ನಡೆಸುತ್ತಿರೋದು ಜಮಾತ್‌ ಬಿ-ಟೀಮ್ ಎಂದ ಬಿಜೆಪಿ ವಾಗ್ದಾಳಿ..! Mamata Banerjee

ದೀದಿ ವರ್ಸಸ್ ಬಿಜೆಪಿ: ಮಮತಾ ನಡೆಸುತ್ತಿರೋದು ಜಮಾತ್‌ ಬಿ-ಟೀಮ್ ಎಂದು ಕೇಸರಿ ಪಡೆ ವಾಗ್ದಾಳಿ..!
ದೀದಿ ವರ್ಸಸ್ ಬಿಜೆಪಿ: ಮಮತಾ ನಡೆಸುತ್ತಿರೋದು ಜಮಾತ್‌ ಬಿ-ಟೀಮ್ ಎಂದು ಕೇಸರಿ ಪಡೆ ವಾಗ್ದಾಳಿ..!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರು ಭಾರತದ ಚುನಾವಣಾ ಆಯೋಗದ (ECI) ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಅಸ್ಥಿರತೆಯ ನಡುವೆಯೂ ಬಾಂಗ್ಲಾದೇಶವು ಅತ್ಯಂತ ಯಶಸ್ವಿಯಾಗಿ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಿದೆ ಎಂದು ಹೊಗಳುವ ಮೂಲಕ, ಭಾರತದ ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಮತಾ ಹೇಳಿಕೆಯಲ್ಲೇನಿದೆ..?

ಈ ಬಗ್ಗೆ ನಬನ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. ಬಾಂಗ್ಲಾದಲ್ಲಿ ಹಿಂಸಾಚಾರ ನಡೆಯಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಎಷ್ಟು ಶಾಂತಿಯುತವಾಗಿ ಮತ್ತು ಮುಕ್ತವಾಗಿ ಚುನಾವಣೆ ನಡೆಸಲಾಯಿತು ಎಂಬುದನ್ನು ನೋಡಿ. ಆದರೆ ಇಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಸಂಚು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗವನ್ನು ತುಘಲಕ್ ಆಯೋಗ ಎಂದು ಕರೆದ ದೀದಿ, ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂದು ದೂರಿದ್ದಾರೆ.

ಬಿಜೆಪಿಯ ಹರಿತವಾದ ಪ್ರತಿಕ್ರಿಯೆ: ಜಮಾತ್ ಬಿ-ಟೀಮ್

ಮಮತಾ ಬ್ಯಾನರ್ಜಿ ಅವರ ಬಾಂಗ್ಲಾದೇಶ ಪರ ಪ್ರೇಮಕ್ಕೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ನಾಯಕಿ ಅಗ್ನಿಮಿತ್ರ ಪಾಲ್ ಅವರು ಮಮತಾ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಬಾಂಗ್ಲಾದೇಶದ ಫಲಿತಾಂಶ ನೋಡಿ ಮಮತಾ ಬ್ಯಾನರ್ಜಿ ಕುಣಿದಾಡುತ್ತಿದ್ದಾರೆ. ಏಕೆಂದರೆ ಅವರು ಪಶ್ಚಿಮ ಬಂಗಾಳದಲ್ಲಿ ಜಮಾತ್-ಎ-ಇಸ್ಲಾಮಿಯ ಬಿ-ಟೀಮ್ ಅನ್ನು ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಮತ್ತು ಹಮಾಸ್ ಅಥವಾ ಜಮಾತ್‌ನಂತಹ ಸಂಘಟನೆಗಳ ಪ್ರಭಾವದ ಬಗ್ಗೆ ಮೌನವಾಗಿರುವ ಮಮತಾ, ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಹೀಯಾಳಿಸುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net