ಟೀಮ್ ಇಂಡಿಯಾ ಅಬ್ಬರಕ್ಕೆ ನಡುಗಿದರೇ ಪಾಕ್​ ವೇಗಿ? ಸೆಮಿಫೈನಲ್‌ಗೆ ಬರಲ್ಲ ಎಂದಿದ್ದವರಿಂದಲೇ ಈಗ ಫೈನಲ್ ಫಿಕ್ಸ್ ಭವಿಷ್ಯ! Mohammad Amir

ಟೀಮ್ ಇಂಡಿಯಾ ಅಬ್ಬರಕ್ಕೆ ನಡುಗಿದರೇ ಪಾಕ್​ ವೇಗಿ? ಸೆಮಿಫೈನಲ್‌ಗೆ ಬರಲ್ಲ ಎಂದಿದ್ದವರಿಂದಲೇ ಈಗ ಫೈನಲ್ ಫಿಕ್ಸ್ ಭವಿಷ್ಯ!
ಟೀಮ್ ಇಂಡಿಯಾ ಅಬ್ಬರಕ್ಕೆ ನಡುಗಿದರೇ ಪಾಕ್​ ವೇಗಿ? ಸೆಮಿಫೈನಲ್‌ಗೆ ಬರಲ್ಲ ಎಂದಿದ್ದವರಿಂದಲೇ ಈಗ ಫೈನಲ್ ಫಿಕ್ಸ್ ಭವಿಷ್ಯ!
Published on
ಲಾಹೋರ್: ಟಿ20 ವಿಶ್ವಕಪ್ ರಣಕಣವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆಯೇ, ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್(Mohammad Amir) ತಮ್ಮ ಭವಿಷ್ಯವಾಣಿಯಲ್ಲಿ ಭಾರಿ ಬದಲಾವಣೆ ಮಾಡುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಆರಂಭದಲ್ಲಿ ಭಾರತ ಸೆಮಿಫೈನಲ್ ಕೂಡ ತಲುಪುವುದಿಲ್ಲ ಎಂದು ಲೇವಡಿ ಮಾಡಿದ್ದ ಅಮೀರ್, ಈಗ ದಿಢೀರ್ ಆಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಫೈನಲ್ ನಡೆಯಲಿದೆ ಎಂದು ಹೇಳುವ ಮೂಲಕ ದೊಡ್ಡ ಯು-ಟರ್ನ್ ಹೊಡೆದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದ ಹಾರ್ನಾ ಮನಾ ಹೈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮೀರ್, ಭಾರತದ ಬ್ಯಾಟಿಂಗ್ ಲೈನಪ್ ದುರ್ಬಲವಾಗಿದೆ, ಅವರು ಸೆಮಿಫೈನಲ್‌ಗೆ ಅರ್ಹರಲ್ಲ. ಈ ಬಾರಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಫೈನಲ್ ಆಡಲಿವೆ ಎಂದು ಭವಿಷ್ಯ ನುಡಿದಿದ್ದರು. ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಸ್ಲಾಗರ್ ಎಂದು ಕರೆದು ಟೀಕಿಸಿದ್ದರು. ಆದರೆ, ಇತ್ತೀಚಿನ ಪಂದ್ಯಗಳಲ್ಲಿ ಭಾರತವು ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ ದಾಖಲಿಸಿ ಪುಟಿದೆದ್ದ ಬೆನ್ನಲ್ಲೇ ಅಮೀರ್ ತಮ್ಮ ವರಸೆಯನ್ನು ಬದಲಿಸಿದ್ದಾರೆ.
ನನ್ನ ಭವಿಷ್ಯವಾಣಿಯನ್ನು ನಾನು ಸ್ವಲ್ಪ ಬದಲಿಸಲು ಇಚ್ಛಿಸುತ್ತೇನೆ. ನನ್ನ ಪ್ರಕಾರ, ಈ ಬಾರಿಯೂ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ ಎಂದು ಅಮೀರ್ ಹೊಸ ಹೇಳಿಕೆ ನೀಡಿದ್ದಾರೆ.

ಭಾರತದ ವಿಜಯಯಾತ್ರೆಗೆ ನಡುಗಿದರೇ ಅಮೀರ್..?

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ ಭಾರತ ತಂಡವನ್ನು ಟ್ರೋಲ್ ಮಾಡಿದ್ದ ಅಮೀರ್ ಮತ್ತು ಪಾಕಿಸ್ತಾನದ ಮಾಧ್ಯಮಗಳಿಗೆ, ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ನೀಡಿದ ಪ್ರದರ್ಶನ ನಡುಕ ಹುಟ್ಟಿಸಿದಂತಿದೆ. ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತದ ಫಾರ್ಮ್ ಕಂಡು ಅಮೀರ್ ಮಣಿದಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅಮೀರ್ ಅವರನ್ನು ಪಾಕಿಸ್ತಾನದ ಆ್ಯಂಕರ್‌ಗಳು ಅಸ್ಟ್ರಾಲಜರ್ ಎಂದು ಕರೆದು ತಮಾಷೆ ಮಾಡುತ್ತಿದ್ದರೂ, ಈಗ ಅವರು ಭಾರತದ ಪರವಾಗಿ ಬ್ಯಾಟ್ ಬೀಸಿರುವುದು ಸ್ವತಃ ಪಾಕ್ ಅಭಿಮಾನಿಗಳಿಗೇ ಅಚ್ಚರಿ ಮೂಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಅಭಿಮಾನಿಗಳ ಲೇವಡಿ

ಅಮೀರ್ ಅವರ ಈ ಯು-ಟರ್ನ್ ನೋಡಿ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಭಾರತದ ಶಕ್ತಿ ಏನು ಎಂಬುದು ಈಗಲಾದರೂ ಅರ್ಥವಾಯಿತೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪಾಕಿಸ್ತಾನ ತಂಡವು ಸೆಮಿಫೈನಲ್ ತಲುಪಲು ಪರದಾಡುತ್ತಿರುವ ಈ ಹೊತ್ತಿನಲ್ಲಿ, ಅಮೀರ್ ತನ್ನದೇ ದೇಶದ ತಂಡವನ್ನು ಕೈಬಿಟ್ಟು ಭಾರತದ ಹೆಸರನ್ನು ಫೈನಲಿಸ್ಟ್ ಪಟ್ಟಿಯಲ್ಲಿ ಸೇರಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net