ಧುರಂದರ್!...ಜೆನ್​ಜೀಗಳಿಗೆ ನಮೋ ಇಷ್ಟವಾಗುವುದು ಏಕೆ..?

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ಸಾರ್ವಜನಿಕ ಬದುಕಿನಲ್ಲಿ, ಅದರಲ್ಲೂ ಆಡಳಿತದ ಮುಖ್ಯಸ್ಥರಾಗಿ ಇಪ್ಪತ್ತೈದು ವರ್ಷ ಪೂರೈಸುವುದು ನಿಜಕ್ಕೂ ಅಸಾಧಾರಣ ಸಂಗತಿ. ಇಂಥದ್ದೊಂದು ಅಪೂರ್ವ ದಾಖಲೆಗೆ ಪಾತ್ರರಾಗಿದ್ದಾರೆ ಪ್ರಧಾನಿ ನರೇಂದ್ರ ದಾಮೋದರ್‌ ದಾಸ್‌ ಮೋದಿ. 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾದ ಮೋದಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ನಿರಂತರ 13 ವರ್ಷಗಳ ಕಾಲ ಸಿಎಂ ಆಗಿದ್ದು ಗುಜರಾತ್‌ ಅನ್ನು ಅಭಿವೃದ್ಧಿಯ ಮುಂಚೂಣಿಗೆ ತಂದು ನಿಲ್ಲಿಸಿದರಲ್ಲದೆ, ಗುಜರಾತಿನ ವಿಕಾಸ ಅಂತಾರಾಷ್ಟ್ರೀಯ ವಲಯದ ಗಮನವೂ ಸೆಳೆಯಿತು. 2014ರಲ್ಲಿ ಪ್ರಧಾನಿಯಾದ ಅವರು, ಕಳೆದ 12 ವರ್ಷಗಳಲ್ಲಿ ಜಾಗತಿಕ ನಾಯಕರಾಗಿ ಬೆಳೆದಿದ್ದಾರೆ. ಮಾತ್ರವಲ್ಲ, ಯುವಭಾರತದ ಮನಸ್ಸನ್ನೂ ಗೆದ್ದಿದ್ದಾರೆ. ಹೀಗೆ ಆಡಳಿತದ 25 ವರ್ಷಗಳನ್ನು ಪೂರೈಸಿರುವ ಮೋದಿ ಅವರಿಗೆ ಇಂದು (ಸೆ.17) 76ನೇ ಹುಟ್ಟುಹಬ್ಬದ ಸಂಭ್ರಮ. ಈ ನಿಮಿತ್ತ ಮೋದಿಯವರ ವಿಶಿಷ್ಟ ವ್ಯಕ್ತಿತ್ವ ಹಾಗೂ ಆಡಳಿತ ಶೈಲಿ ಕುರಿತಾದ ಪನೋಟ ಇಲ್ಲಿದೆ.
ಹದಿಮೂರು ವರ್ಷಗಳ ನಂತರ ದೆಹಲಿಯ ಶ್ರೀರಾಮ್​ ಕಾಲೇಜ್​ ಆಫ್​ ಕಾಮರ್ಸ್​ ಕಾಲೇಜಿಗೆ (ಎಸ್​ಆರ್​ಸಿಸಿ) ಇದೇ ಸೆಪ್ಟೆಂಬರ್​ 5ರಂದು ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದು "ಧುರಂಧರ್' ಚಿತ್ರದ ಗೀತೆಯ ಮೂಲಕ. ಧುರಂಧರ್ ಎಂದರೆ ದಿಗ್ಗಜ ಅಥವಾ ಪರಿಣತ ಎಂದರ್ಥ. ಅಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ ಜೆನ್​ಜೀ ಭಾಷೆಯನ್ನು ಪ್ರಯೋಗಿಸಿ, ಗಮನ ಸೆಳೆದರು. 76ರ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಟರ್ನೆಟ್​ ಯುಗದಲ್ಲೇ ಹುಟ್ಟಿ ಬೆಳೆದ 20-25ರ ಹರೆಯದ ಜೆನ್​ಜೀ ಪೀಳಿಗೆಯ ನಡುವೆ ಸುಮಾರು ಐದು ದಶಕಗಳ ವಯಸ್ಸಿನ ಅಂತರವಿದೆ. ಆದಾಗ್ಯೂ, ಇಂದಿನ ಯುವಜನತೆಯಲ್ಲಿ ಮೋದಿಯವರ ಬಗೆಗಿನ ಆಕರ್ಷಣೆ ಹೆಚ್ಚಿದ್ದು, ಅದಕ್ಕೆ ಕಾರಣ ಮೋದಿಯವರು ತಲುಪುವ ಹಾಗೂ ಸ್ಪಂದಿಸುವ ಅನನ್ಯ ರೀತಿ. ಇಂದಿನ ಪೀಳಿಗೆಯು ಡಿಜಿಟಲ್​ ಜಗತ್ತಿನಲ್ಲಿ ಬದುಕುತ್ತಿದೆ ಎಂದು ಅರಿತಿರುವ ಮೋದಿ, ಡಿಜಿಟಲ್​ ವೇದಿಕೆಗಳ ಮುಖಾಂತರವೂ ಯುವ ಮನಸ್ಸುಗಳನ್ನು ತಲುಪುತ್ತಿದ್ದಾರೆ.
ಮೋದಿಯವರ ಡಿಜಿಟಲ್​ ಉಪಸ್ಥಿತಿಯ ವ್ಯಾಪಕತೆ ಹಲವು ನಾಯಕರಿಗೆ ಅಚ್ಚರಿಯ ವಿಚಾರ. ಯೂಟ್ಯೂಬರ್​ಗಳು, ಗೇಮರ್​ಗಳು ಮತ್ತು ಪಾಡ್​ಕಾಸ್ಟರ್​ಗಳೊಂದಿಗೆ ನಡೆಸುವ ಸಂವಾದಗಳು, ನ್ಯಾಷನಲ್​ ಕ್ರಿಯೇಟರ್ಸ್​ ಅವಾರ್ಡ್ಸ್​ನಂತಹ ಉಪಕ್ರಮಗಳು ಇಂಟರ್ನೆಟ್​ ತಲೆಮಾರಿನ ಸಂಸ್ಕೃತಿಯನ್ನು ಮೋದಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವುದಕ್ಕೆ ಸಾಕ್ಷಿ. ಅಲ್ಲದೆ, ಭಾಷಣಗಳಲ್ಲಿ ಆಕರ್ಷಕ ಪದಪುಂಜಗಳು, ಪ್ರಾಸಬದ್ಧ ಮಾತುಗಳು ಮತ್ತು ಇಂದಿನ ಟ್ರೆಂಡ್​ಗಳಿಗೆ ತಕ್ಕಂತೆ ಉದಾಹರಣೆಗಳನ್ನು ನೀಡುವುದರಿಂದ ಜೆನ್​ಜೀ ಪೀಳಿಗೆಯ ಅದೆಷ್ಟೋ ಯುವಕ/ಯುವತಿಯರು ಮೋದಿ ಅಭಿಮಾನಿಯಾಗಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದು ಅತ್ಯುನ್ನತ ಹುದ್ದೆ ತಲುಪಿದ ಮೋದಿ ಹಿನ್ನೆಲೆ ಹಾಗೂ ಸ್ವಜನಪಕ್ಷಪಾತವಿಲ್ಲದ ರಾಜಕೀಯ ಪ್ರತಿಪಾದನೆ, ಪ್ರತಿಭೆಗೆ ತಕ್ಕ ಅವಕಾಶ ಸಿಗಬೇಕು ಎಂದು ಬಯಸುವ ಇಂದಿನ ಜೆನ್​ಜೀ ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದೆ. ಜೆನ್​ಜೀ ಪೀಳಿಗೆಯು ಸಾಂಪ್ರದಾಯಿಕ ಉದ್ಯೋಗಕ್ಕಿಂತ ಸ್ವಂತ ಉದ್ಯಮ, ಕಂಟೆಂಟ್​ ಕ್ರಿಯೇಷನ್​ ಮತ್ತು ನವೋದ್ಯಮಗಳತ್ತ ಹೆಚ್ಚು ಆಕರ್ಷಿತವಾಗಿದೆ. ಸ್ಟಾರ್ಟಪ್​ ಇಂಡಿಯಾ, ಯುನಿಕಾರ್ನ್​ ಸಂಸ್ಕೃತಿಗೆ ನೀಡುತ್ತಿರುವ ಬೆಂಬಲ ಮತ್ತು ಡಿಜಿಟಲ್​ ಇಂಡಿಯಾ ಉಪಕ್ರಮಗಳು ಯುವ ಆವಿಷ್ಕಾರಕರಿಗೆ ಸೂಕ್ತ ವೇದಿಕೆ ಒದಗಿಸಿವೆ.

32 ಕೋಟಿಗೂ ಹೆಚ್ಚು ಫಾಲೋವರ್ಸ್​

ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವ ಅಗ್ರಗಣ್ಯ ನಾಯಕರಾಗಿದ್ದಾರೆ ನರೇಂದ್ರ ಮೋದಿ.
ಎಕ್ಸ್​: 10.6 ಕೋಟಿ (106+ ಮಿಲಿಯನ್​).
ಇನ್​ಸ್ಟಾಗ್ರಾಮ್​: 10.6 ಕೋಟಿ (106+ ಮಿಲಿಯನ್​) (ಇನ್​ಸ್ಟಾಗ್ರಾಮ್​ನಲ್ಲಿ 100 ಮಿಲಿಯನ್​ ಫಾಲೋವರ್ಸ್​ ಗಡಿ ದಾಟಿದ ಮೊದಲ ಜಾಗತಿಕ ರಾಜಕೀಯ ನಾಯಕ).
ಫೇಸ್​ಬುಕ್​: 6.3 ಕೋಟಿ (63 ಮಿಲಿಯನ್​)
ಯೂಟ್ಯೂಬ್​: 3.14 ಕೋಟಿ (31.4 ಮಿಲಿಯನ್​) ಚಂದಾದಾರರು.
ವಾಟ್ಸ್​ಆ್ಯಪ್​ ಚಾನಲ್​: 1.4 ಕೋಟಿಗೂ ಹೆಚ್ಚು (14+ ಮಿಲಿಯನ್​).
ಲಿಂಕ್ಡ್​ಇನ್​: 45 ಲಕ್ಷಕ್ಕೂ ಹೆಚ್ಚು (4.5+ ಮಿಲಿಯನ್​).
ಎಲ್ಲ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಸೇರಿಸಿದರೆ ಮೋದಿಯವರ ಡಿಜಿಟಲ್​ ಫಾಲೋವರ್ಸ್​ ಒಟ್ಟು ಸಂಖ್ಯೆ 320 ಮಿಲಿಯನ್​ (32 ಕೋಟಿ)ಗೂ ಅಧಿಕವಾಗಿದೆ.

ನೇರ ಸಂವಾದ

ಮೋದಿಯವರು ಯುವಕರೊಂದಿಗೆ ಕೇವಲ ಭಾಷಣದ ಮೂಲಕ ಮಾತನಾಡದೆ, ಸಂವಾದದ ಮೂಲಕ ಸಂಪರ್ಕ ಸಾಧಿಸುತ್ತಾರೆ. ಅವರ "ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವು ಶಾಲಾ&ಕಾಲೇಜು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡ ನಿವಾರಣೆ, ಸಮಯ ನಿರ್ವಹಣೆ ಹಾಗೂ ಆತ್ಮವಿಶ್ವಾಸದ ಕುರಿತು ನೇರವಾಗಿ ಚರ್ಚಿಸಲು ವೇದಿಕೆಯಾಗಿದೆ. ರಾಜಕೀಯ ವಿಷಯಗಳ ಬದಲು ವಿದ್ಯಾರ್ಥಿಗಳ ವೈಯಕ್ತಿಕ ಸವಾಲುಗಳ ಕುರಿತು ಹಿರಿಯ ಮಾರ್ಗದರ್ಶಕರಂತೆ (ಮೆಂಟರ್​) ಮಾತನಾಡುವುದು ಯುವಜನರನ್ನು ಆಕರ್ಷಿಸುತ್ತದೆ.

ಸೆಲ್ಫಿಯಿಂದ ಒಜಿಯವರೆಗೆ

2026ರ ಜುಲೈ 23: ಮೋದಿ ಅವರು ಮೊದಲ ಬಾರಿಗೆ ಫ್ರಂಟ್​ ಕ್ಯಾಮೆರಾ ಮೂಲಕ ನೇರವಾಗಿ ಯುವಜನತೆಯನ್ನು ಉದ್ದೇಶಿಸಿ (ಮೊದಲ ಸೆಲ್ಫಿ ವಿಡಿಯೋ) ಮಾತನಾಡಿದ ವಿಡಿಯೋವನ್ನು ಪೋಸ್ಟ್​ ಮಾಡಿದರು. ಮಧ್ಯರಾತ್ರಿ 12 ಗಂಟೆಗೆ ಮಾಡಿದ 3 ನಿಮಿಷಗಳ ಈ ವಿಡಿಯೋದಲ್ಲಿ, ಅವರು ಪ್ರಶ್ನೆಪತ್ರಿಕೆ ಸೋರಿಕೆಯನ್ನು ಗಂಭೀರ ಸಮಸ್ಯೆಯೆಂದು ಕರೆಯುವ ಮೂಲಕ, ವಿದ್ಯಾರ್ಥಿಗಳ ಸಮಸ್ಯೆ ಅರಿತಿರುವ ಸಂದೇಶ ನೀಡಿದರು.
ಜುಲೈ 24: ಎರಡನೇ ಸೆಲ್ಫಿ ವಿಡಿಯೋ. ಮರುದಿನವೇ ಮೋದಿ ಮತ್ತೊಮ್ಮೆ ಸೆಲ್ಫಿ ವಿಡಿಯೋದಲ್ಲಿ ಕಾಣಿಸಿಕೊಂಡರು. ಹಿಂದಿನ ವಿಡಿಯೋಗೆ ನೀಡಿದ ಪ್ರತಿಕ್ರಿಯೆಗಳು ಮತ್ತು ಸಲಹೆಗಳಿಗಾಗಿ ಅವರು ಯುವಜನತೆಗೆ ಧನ್ಯವಾದ ಅರ್ಪಿಸಿದರು.
ಜುಲೈ 31: ಮತ್ತೆ ಇನ್​ಸ್ಟಾಗ್ರಾಮ್​/ರೀಲ್ಸ್​ ಶೈಲಿಯಲ್ಲಿ ಕಾಣಿಸಿಕೊಂಡ ಮೋದಿ ಅವರು ಲಂಬವಾದ (ವರ್ಟಿಕಲ್) ವಿಡಿಯೋದಲ್ಲಿ "ಹಾಯ್​ ಫ್ರೆಂಡ್ಸ್​' ಎಂದು ಹೇಳುವ ಮೂಲಕ ಯುವಕರೊಂದಿಗೆ ಅನೌಪಚಾರಿಕ ಶೈಲಿಯಲ್ಲಿ ಸಂವಾದ ನಡೆಸಿದರು.
ಆಗಸ್ಟ್​ 20: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಒಂದು ದಿನ ಕಳೆಯಲು ಮತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲು ಮೋದಿ ಸಚಿವರಿಗೆ ಸೂಚಿಸಿದರು.
ಆಗಸ್ಟ್​ 26: "ಡೇಟಾ ಬೀಯಿಂಗ್ಸ್​' ವಿಶ್ಲೇಷಣೆಯ ಪ್ರಕಾರ, ಜುಲೈ 20ರ ನಂತರ ಮೋದಿ ಅವರ ಇನ್​ಸ್ಟಾಗ್ರಾಮ್​ನ ಪ್ರತಿ ಪೋಸ್ಟ್​ನ ಸರಾಸರಿ ತೊಡಗಿಸಿಕೊಳ್ಳುವಿಕೆ (ಎಂಗೇಜ್‌ಮೆಂಟ್) 1.19 ಕೋಟಿಯಿಂದ 4.63 ಕೋಟಿಗೆ ಏರಿಕೆಯಾಗಿದೆ.
ಸೆಪ್ಟೆಂಬರ್​ 5: ಎಸ್​ಆರ್​ಸಿಸಿ ಶತಮಾನೋತ್ಸವ ಸಮಾರಂಭದಲ್ಲಿ ಜೆನ್​ಜೀ ಶೈಲಿ 'ಜಿಒಎಟಿ' (GOAT - Greatest Of All Time) ಮತ್ತು "ಸ್ಲ್ಯಾಗ್" ನಂತಹ ಯುವಜನರಲ್ಲಿ ಜನಪ್ರಿಯವಾಗಿರುವ ಪದಗಳನ್ನು ಬಳಸುವ ಮೂಲಕ ಅವರು ಹೊಸ ಪೀಳಿಗೆಯೊಂದಿಗೆ ಬೆರೆಯಲು ಪ್ರಯತ್ನಿಸಿದರು.

ಡ್ರೆಸ್ಸಿಂಗ್​ ಶೈಲಿ

ಮೋದಿಯವರ ಉಡುಗೆ-ತೊಡುಗೆಗಳ ಶೈಲಿ (ಮೋದಿ ಕುರ್ತಾ, ಜಾಕೆಟ್​, ಸ್ಥಳೀಯ ಸಂಸ್ಕೃತಿಗೆ ತಕ್ಕಂತೆ ಧರಿಸುವ ರುಮಾಲುಗಳು/ಶಾಲುಗಳು/ಪೇಟಾಗಳು) ಮತ್ತು ಅವರ ಸದಾ ಕ್ರಿಯಾಶೀಲ ನಡವಳಿಕೆ (ಎನರ್ಜಿಟಿಕ್ ಆ್ಯಟಿಟ್ಯೂಡ್) ಯುವಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ. ಅವರ ಫಿಟ್​ನೆಸ್​ ಹಾಗೂ ಕಠಿಣ ದಿನಚರಿ ಇಂದಿನ ಯುವಕರಿಗೆ ಶಿಸ್ತಿನ ಮಾದರಿಯಾಗಿ ಕಾಣುತ್ತದೆ.

ಜಾಗತಿಕ ವರ್ಚಸ್ಸು

ಜಾಗತಿಕ ಮಟ್ಟದಲ್ಲಿ ಭಾರತದ ಬಲವಾದ ನಿಲುವು, ವಿದೇಶಾಂಗ ನೀತಿಯಲ್ಲಿನ ಸ್ಪಷ್ಟತೆ ಮತ್ತು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿನ ದಿಟ್ಟ ನಿರ್ಧಾರಗಳು ಯುವಜನರಲ್ಲಿ ದೇಶಾಭಿಮಾನ ಹಾಗೂ ಹೆಮ್ಮೆಯನ್ನು ಹೆಚ್ಚಿಸಿವೆ. ಜಾಗತಿಕ ನಾಯಕರೊಂದಿಗೆ ಸಮಾನ ನೆಲೆಯಲ್ಲಿ ನಿಲ್ಲುವ ಮೋದಿಯವರ ಚಿತ್ರಣವು ಇಂದಿನ ಮಹತ್ವಾಕಾಂಕ್ಷಿ ಯುವ ಪೀಳಿಗೆಯ ಮನಸ್ಥಿತಿಗೆ ಹೊಂದಿಕೆಯಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net