ಶ್ರೀರಾಮ, ಸೀತೆ, ಕೃಷ್ಣನ ಬಗ್ಗೆ ವಿವಾದಾತ್ಮಕ ವಿಡಿಯೋ: ಯೂಟ್ಯೂಬರ್ ಧ್ರುವ್ ರಾಠಿಗೆ ಕೋರ್ಟ್ ಶಾಕ್, 15 ದಿನದ ಡೆಡ್​ಲೈನ್​! Dhruv Rathee

ಶ್ರೀರಾಮ, ಸೀತೆ, ಕೃಷ್ಣನ ಬಗ್ಗೆ ವಿವಾದಾತ್ಮಕ ವಿಡಿಯೋ: ಯೂಟ್ಯೂಬರ್ ಧ್ರುವ್ ರಾಠಿಗೆ ಕೋರ್ಟ್ ಶಾಕ್, 15 ದಿನದ ಡೆಡ್​ಲೈನ್​! Dhruv Rathee
ಶ್ರೀರಾಮ, ಸೀತೆ, ಕೃಷ್ಣನ ಬಗ್ಗೆ ವಿವಾದಾತ್ಮಕ ವಿಡಿಯೋ: ಯೂಟ್ಯೂಬರ್ ಧ್ರುವ್ ರಾಠಿಗೆ ಕೋರ್ಟ್ ಶಾಕ್, 15 ದಿನದ ಡೆಡ್​ಲೈನ್​! Dhruv Rathee
Published on

ಪ್ರಮುಖ ಮುಖ್ಯಾಂಶಗಳು

  • ಧ್ರುವ್ ರಾಠಿ ವಿಡಿಯೋಗೆ ದೆಹಲಿ ಹೈಕೋರ್ಟ್ ಕೆಂಡ
  • ಹಿಂದೂ ದೇವತೆಗಳ ಕುರಿತು ವಿವಾದಾತ್ಮಕ ಕಾಮೆಂಟ್‌ಗೆ ತೀವ್ರ ಅಸಮಾಧಾನ
  • ಗೂಗಲ್, ಜಿಎಸಿಗೆ 15 ದಿನದ ಡೆಡ್‌ಲೈನ್ ಕೊಟ್ಟ ದೆಹಲಿ ಹೈಕೋರ್ಟ್
ನವದೆಹಲಿ: ಯೂಟ್ಯೂಬರ್ ಧ್ರುವ್ ರಾಠಿ ( Dhruv Rathee ) ಹಿಂದೂ ದೇವತೆಗಳಾದ ಶ್ರೀರಾಮ, ಸೀತೆ ಮತ್ತು ಶ್ರೀಕೃಷ್ಣ ಮಾಂಸ ಹಾಗೂ ಮದ್ಯವನ್ನು ಸೇವಿಸುತ್ತಿದ್ದರು ಅಂತ ತಮ್ಮ ವಿಡಿಯೋವೊಂದರಲ್ಲಿ ಮಾಡಿರುವ ವಿವಾದಾತ್ಮಕ ಕಾಮೆಂಟ್‌ಗಳ ವಿರುದ್ಧ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆಕ್ಷೇಪಾರ್ಹ ವಿಡಿಯೋವನ್ನು ಯೂಟ್ಯೂಬ್‌ನಿಂದ ತಕ್ಷಣವೇ ತೆಗೆದುಹಾಕುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಮುಂದಿನ 15 ದಿನಗಳ ಒಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಿ ಕುಂದುಕೊರತೆಗಳ ಮೇಲ್ಮನವಿ ಸಮಿತಿಗೆ (GAC) ಹೈಕೋರ್ಟ್ ಶುಕ್ರವಾರ ಖಡಕ್ ನಿರ್ದೇಶನ ನೀಡಿದೆ. ಅಷ್ಟೇ ಅಲ್ಲದೆ, ನ್ಯಾಯಾಲಯದ ಈ ಆದೇಶವನ್ನು ಜಾರಿಗೊಳಿಸುವಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ಧೋರಣೆ ತೋರಿದರೆ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕೋರ್ಟ್ ಬಲವಾದ ಎಚ್ಚರಿಕೆ ನೀಡಿದೆ.
ಯೂಟ್ಯೂಬರ್ ಧ್ರುವ್ ರಾಠಿ ಅವರು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಮಾರ್ಚ್ 21 ರಂದು ಅಪ್‌ಲೋಡ್ ಮಾಡಿದ್ದ "Can Hindus Eat Beef? | Kerala Story 2 Exposed" ಎಂಬ ಶೀರ್ಷಿಕೆಯ ವಿಡಿಯೋದಲ್ಲಿ, ಹಿಂದೂ ದೇವತೆಗಳಾದ ಶ್ರೀರಾಮ, ಶ್ರೀಕೃಷ್ಣ ಮತ್ತು ಸೀತಾಮಾತೆಯು ಮಾಂಸ ಹಾಗೂ ಮದ್ಯವನ್ನು ಸೇವಿಸುತ್ತಿದ್ದರು ಎಂದು ಪ್ರತಿಪಾದಿಸಿದ್ದರು.
ಈ ವಿವಾದಾತ್ಮಕ ಕಾಮೆಂಟ್‌ಗಳು ಸನಾತನ ಧರ್ಮದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿವೆ ಮತ್ತು ಸಮಾಜದಲ್ಲಿ ಸೌಹಾರ್ದತೆ ಕೆಡಿಸುವಂತಿವೆ ಎಂಬ ವ್ಯಾಪಕ ಆಕ್ಷೇಪಗಳು ವಿಡಿಯೋಗೆ ವ್ಯಕ್ತವಾಗಿವೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಈ ವಿಡಿಯೋವನ್ನು ಯೂಟ್ಯೂಬ್‌ನಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ಸಾರ್ವಜನಿಕರು ಹಾಗೂ ಕಾನೂನು ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಕೆಯಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಚೇತನ್ ಶರ್ಮಾ ಅವರು, ಮಧ್ಯವರ್ತಿ ಸಂಸ್ಥೆಯಾದ ಯೂಟ್ಯೂಬ್ (ಗೂಗಲ್) ಇಂತಹ ಸೂಕ್ಷ್ಮ ವಿಷಯಗಳಲ್ಲಿ ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗಿತ್ತು ಮತ್ತು ದ್ವೇಷ ಪ್ರಚೋದಿಸುವ ಹಾಗೂ ಆಕ್ಷೇಪಾರ್ಹವಾಗಿರುವ ಈ ವಿಡಿಯೋ ವಿಷಯವನ್ನು ತಕ್ಷಣವೇ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಬೇಕಾಗಿತ್ತು ಎಂದು ಬಲವಾಗಿ ವಾದಿಸಿದರು. ಧ್ರುವ್ ರಾಠಿ ಅಪ್‌ಲೋಡ್ ಮಾಡಿರುವ ಈ ವಿಡಿಯೋ ಸಮಾಜದಲ್ಲಿ ಒಡಕು ಮೂಡಿಸುವಂತಿದ್ದು, ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ. ಆದ್ದರಿಂದ ಗೂಗಲ್ ಸಂಸ್ಥೆಯು ಈ ವಿಡಿಯೋವನ್ನು ತೆಗೆದುಹಾಕುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಬೇಕು, ಇಲ್ಲವೇ ಡಿವಿಷನ್ ಬೆಂಚ್ ನೀಡಿರುವ ಅವಲೋಕನಗಳ ಆಧಾರದ ಮೇಲೆ ನ್ಯಾಯಾಲಯವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.

ಗೂಗಲ್ ಸಂಸ್ಥೆಯ ಸ್ಪಷ್ಟನೆ ಏನು?

ಇದೇ ವೇಳೆ ಗೂಗಲ್ ಪರವಾಗಿ ಹಾಜರಿದ್ದ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ತಾವು ಈಗಾಗಲೇ ಅರ್ಜಿದಾರರಾದ ವಕೀಲೆ ಅಮಿತಾ ಸಚ್‌ದೇವ್ ಅವರಿಗೆ ಅಧಿಕೃತವಾಗಿ ಪ್ರತ್ಯುತ್ತರವನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು. ಅಷ್ಟೇ ಅಲ್ಲದೆ, ಈ ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಕುಂದುಕೊರತೆಗಳ ಮೇಲ್ಮನವಿ ಸಮಿತಿಯ (GAC) ಮುಂಭಾಗದಲ್ಲಿ ಈಗಾಗಲೇ ಒಂದು ಮೇಲ್ಮನವಿಯನ್ನು ಸಲ್ಲಿಸಲಾಗಿದ್ದು, ಅದು ಬಾಕಿ ಉಳಿದಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಉಭಯ ಪಕ್ಷಗಳ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು, ಮುಂದಿನ 15 ದಿನಗಳ ಒಳಗಾಗಿ ಈ ಮೇಲ್ಮನವಿಯ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಕುಂದುಕೊರತೆಗಳ ಮೇಲ್ಮನವಿ ಸಮಿತಿಗೆ ಕಡ್ಡಾಯ ನಿರ್ದೇಶನ ನೀಡಿದರು.
ಅಂದಹಾಗೆ, ವಕೀಲೆ ಅಮಿತಾ ಸಚ್‌ದೇವ್ ಅವರು ಮಾರ್ಚ್ 21 ರಂದು ಧ್ರುವ್ ರಾಠಿ ಅಪ್‌ಲೋಡ್ ಮಾಡಿದ್ದ ವಿಡಿಯೋವನ್ನು ಯೂಟ್ಯೂಬ್‌ನಿಂದ ಸಂಪೂರ್ಣವಾಗಿ ತೆಗೆದುಹಾಕುವಂತೆ ಕೋರಿ ಈ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯದ ಈ ಆದೇಶವನ್ನು ಜಾರಿಗೊಳಿಸುವಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿದರೆ ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ನ್ಯಾಯಾಧೀಶರು ಇದೇ ವೇಳೆ ಎಚ್ಚರಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net