ವಶಕ್ಕೆ ಪಡೆದ 24 ಗಂಟೆಯೊಳಗೆ ಕೋರ್ಟ್‌ಗೆ ಹಾಜರುಪಡಿಸದಿದ್ರೆ ಆರೋಪಿಗೆ ಬಿಡುಗಡೆ: ಸುಪ್ರೀಂ ಕೋರ್ಟ್ ಆದೇಶ! Supreme Court

supreme court
supreme court
Published on: 

ನವದೆಹಲಿ: ವ್ಯಕ್ತಿಯೊಬ್ಬನನ್ನು ಬಂಧಿಸಿದ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕೆಂಬ ಸಂವಿಧಾನಾತ್ಮಕ ಗಡುವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ( Supreme Court ) ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಪೊಲೀಸರು ಅಧಿಕೃತವಾಗಿ ದಾಖಲಿಸುವ ಬಂಧನದ ಸಮಯದಿಂದಲ್ಲ, ಬದಲಿಗೆ ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಕಾಲಾವಕಾಶದ ಲೆಕ್ಕಾಚಾರ ಆರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ತ್ರಿಪುರಾ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎನ್‌ಡಿಪಿಎಸ್ (NDPS) ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠವು ಈ ಪ್ರಮುಖ ಆದೇಶವನ್ನು ಹೊರಡಿಸಿದೆ.

ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಭಾರತೀಯ ಸಂವಿಧಾನದ ವಿಧಿ 22(2) ರ ಅಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಿದೆ. ಯಾವುದೇ ತನಿಖಾ ಸಂಸ್ಥೆಗಳು ಅಥವಾ ಪೊಲೀಸರು ಶೋಧ ಮತ್ತು ವಶಪಡಿಸಿಕೊಳ್ಳುವಿಕೆ (Search and Seizure) ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಥವಾ ಆಡಳಿತಾತ್ಮಕವಾಗಿ ಬಂಧನವನ್ನು ದಾಖಲಿಸುವವರೆಗೆ 24 ಗಂಟೆಗಳ ಸಮಯ ಪ್ರಾರಂಭವಾಗುವುದಿಲ್ಲ ಎಂಬ ವಾದವನ್ನು ನ್ಯಾಯಪೀಠವು ಸಂಪೂರ್ಣವಾಗಿ ತಿರಸ್ಕರಿಸಿದೆ. ಅಂತಹ ಲೆಕ್ಕಾಚಾರವು ಕಾನೂನುಬಾಹಿರ ಮಾತ್ರವಲ್ಲದೆ ಸಂಪೂರ್ಣವಾಗಿ ಅಸಂವಿಧಾನಿಕ ಎಂದು ಕೋರ್ಟ್ ಖಾರವಾಗಿ ಹೇಳಿದೆ.

Also Read
ರಾಮಾಯಣ: ರಣಬೀರ್ ಕಪೂರ್ vs ಯಶ್, ಇಬ್ಬರಲ್ಲಿ ಮಿಂಚಿದವರು ಯಾರು? ಇಲ್ಲಿದೆ ಒಂದು ಸಮಗ್ರ ವಿಶ್ಲೇಷಣೆ... Ramayana
supreme court

ಸಂವಿಧಾನದ 22(2)ನೇ ವಿಧಿಯ ಪ್ರಕಾರ, ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಆತನನ್ನು ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ 24 ಗಂಟೆಯೊಳಗೆ ಹಾಜರುಪಡಿಸುವುದು ಕಡ್ಡಾಯವಾಗಿದೆ. ಪ್ರಯಾಣದ ಸಮಯವನ್ನು ಹೊರತುಪಡಿಸಿ, ಮ್ಯಾಜಿಸ್ಟ್ರೇಟ್ ಅವರ ಅನುಮತಿಯಿಲ್ಲದೆ 24 ಗಂಟೆಗಳಿಗಿಂತ ಹೆಚ್ಚು ಕಾಲ ಯಾರನ್ನೂ ವಶದಲ್ಲಿ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಯಾವುದೇ ವ್ಯಕ್ತಿಯನ್ನು 24 ಗಂಟೆಗಳ ಮೀರಿದರೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದಿದ್ದರೆ, ಆತನನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕಾಲಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ತನಿಖಾ ಸಂಸ್ಥೆಗಳ ಹೊಣೆಯಾಗಿದೆ.

ಇದರ ಜತೆಗೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 58 ಅನ್ನು ಉಲ್ಲೇಖಿಸಿದ ನ್ಯಾಯಪೀಠವು, ಕೇವಲ 24 ಗಂಟೆಯ ಗಡುವನ್ನು ಪಾಲಿಸಿದ ತಕ್ಷಣವೇ ಬಂಧನವು ಸಮರ್ಥನೀಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವ್ಯಕ್ತಿಯನ್ನು ವಶಕ್ಕೆ ಪಡೆದ ಸಮಯವು ಆ ಪ್ರಕರಣದ ಸಂದರ್ಭಕ್ಕೆ ತಕ್ಕಂತೆ ಸಮಂಜಸವಾಗಿದೆಯೇ ಎಂಬುದನ್ನೂ ತನಿಖಾ ಸಂಸ್ಥೆಗಳು ಖಾತರಿಪಡಿಸಬೇಕು. ಮ್ಯಾಜಿಸ್ಟ್ರೇಟ್ ಅವರ ಮುಂದೆ ಆರೋಪಿಯನ್ನು ಹಾಜರುಪಡಿಸಿದಾಗ, ವ್ಯಕ್ತಿಯನ್ನು ವಾಸ್ತವವಾಗಿ ಯಾವ ದಿನಾಂಕ ಮತ್ತು ಸಮಯಕ್ಕೆ ವಶಕ್ಕೆ ಪಡೆಯಲಾಗಿತ್ತು ಎಂಬುದನ್ನು ದಾಖಲಿಸಿಕೊಳ್ಳುವುದು ಹಾಗೂ ಸಂವಿಧಾನದ ನಿಯಮ ಪಾಲನೆಯಾಗಿದೆಯೇ ಎಂದು ಸ್ವತಂತ್ರವಾಗಿ ಪರಿಶೀಲಿಸುವುದು ಮ್ಯಾಜಿಸ್ಟ್ರೇಟ್‌ಗಳ ಕರ್ತವ್ಯವಾಗಿದೆ.

Also Read
ದೀಪಾವಳಿ ಅಂದ್ರೆ ಬೆಳಕು ಆದ್ರೆ ಈ ಊರು ರಾತ್ರಿಯಿಡೀ ಕತ್ತಲಲ್ಲಿ ಮುಳುಗುತ್ತದೆ! ಈ ವಿಚಿತ್ರ ಸಂಪ್ರದಾಯದ ಹಿಂದಿನ ಕಥೆಯೇನು? Dipawali celebration
supreme court

ಒಂದು ವೇಳೆ 24 ಗಂಟೆಯ ಒಳಗಡೆ ಆರೋಪಿಯನ್ನು ಹಾಜರುಪಡಿಸಿದ್ದರೂ ಸಹ, ಆತನನ್ನು ವಶದಲ್ಲಿಟ್ಟಿದ್ದ ಸಮಯ ಸಮಂಜಸವಾಗಿಲ್ಲ ಎಂದು ಮ್ಯಾಜಿಸ್ಟ್ರೇಟ್‌ಗೆ ಅನಿಸಿದರೆ ಮುಂದಿನ ರಿಮಾಂಡ್ ನೀಡಲು ನಿರಾಕರಿಸಬಹುದು ಎಂದು ಕೋರ್ಟ್ ತಿಳಿಸಿದೆ. ಈ ಮಹತ್ವದ ತೀರ್ಪಿನ ಅಡಿಯಲ್ಲಿ, ತ್ರಿಪುರಾ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಮೇಲ್ಮನವಿ ಸಲ್ಲಿಸಿದ್ದ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಪೊಲೀಸ್ ಅಧಿಕಾರ ದುರ್ಬಳಕೆ ತಡೆಯಲು ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲು ಈ ತೀರ್ಪು ದಿಕ್ಸೂಚಿಯಾಗಿದೆ, (ಏಜೆನ್ಸೀಸ್​).