ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಹವಾ ಸೃಷ್ಟಿಸಿದ ನೈಟಿ ಕ್ರೇಜ್: ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿರೋ ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು? Nightie Trend

Nightie Trend (ಚಿತ್ರ Instagram)
Nightie Trend (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ದಶಕಗಳಿಂದಲೂ ಭಾರತೀಯ ಜನಪ್ರಿಯ ಸಂಸ್ಕೃತಿಯಲ್ಲಿ ನೈಟಿಗೆ ಒಂದು ನಿರ್ದಿಷ್ಟ ಸ್ಥಾನವಿದೆ
  • ಸಾಮಾನ್ಯವಾಗಿ ತಾಯಂದಿರು, ಅಜ್ಜಿಯರು, ಮನೆಕೆಲಸದವರಿಗೆ ಆರಾಮದಾಯಕ ಉಡುಪು ಎಂದೇ ಗುರುತಿಸಲಾಗುತ್ತಿತ್ತು
  • ಇದನ್ನು ಫ್ಯಾಶನ್ ಎನ್ನುವುದಕ್ಕಿಂತ ಹೆಚ್ಚಾಗಿ ಕೇವಲ ಆರಾಮಕ್ಕಾಗಿ ಧರಿಸುವ ಬಟ್ಟೆಯಾಗಿತ್ತು
  • ವೈರಲ್​ ಆಗುತ್ತಿರುವ ವಿಡಿಯೋಗಳಲ್ಲಿ ಯುವಕರು ಬಣ್ಣ ಬಣ್ಣದ ನೈಟಿಗಳನ್ನು ಧರಿಸಿ ಪ್ರಯಾಣಿಸುತ್ತಿದ್ದಾರೆ
Nightie Trend: ದಶಕಗಳಿಂದಲೂ ಭಾರತೀಯ ಜನಪ್ರಿಯ ಸಂಸ್ಕೃತಿಯಲ್ಲಿ ನೈಟಿಗೆ ಒಂದು ನಿರ್ದಿಷ್ಟ ಸ್ಥಾನವಿದೆ. ಇದನ್ನು ಸಾಮಾನ್ಯವಾಗಿ ತಾಯಂದಿರು, ಅಜ್ಜಿಯರು, ಮನೆಕೆಲಸದವರು ಮತ್ತು ಬೇಸಿಗೆಯ ಆರಾಮದಾಯಕ ಉಡುಪು ಎಂದೇ ಗುರುತಿಸಲಾಗುತ್ತಿತ್ತು. ಇದು ಫ್ಯಾಶನ್ ಎನ್ನುವುದಕ್ಕಿಂತ ಹೆಚ್ಚಾಗಿ ಕೇವಲ ಆರಾಮಕ್ಕಾಗಿ ಧರಿಸುವ ಬಟ್ಟೆಯಾಗಿತ್ತು. ಆದರೆ, ಇತ್ತೀಚಿನ ಸೋಶಿಯಲ್ ಮೀಡಿಯಾ ಟ್ರೆಂಡ್ ನೋಡಿದರೆ, ಈ ಸಾಮಾನ್ಯ ನೈಟಿಗೆ ಈಗ ಅನಿರೀಕ್ಷಿತವಾಗಿ ಎರಡನೇ ಜನ್ಮ ಸಿಕ್ಕಂತಾಗಿದೆ. ವಿಶೇಷವೆಂದರೆ, ಈ ಬಾರಿ ಜೆನ್-ಝಿ (Gen Z) ಹುಡುಗರು ಈ ಟ್ರೆಂಡ್ ಮುನ್ನಡೆಸುತ್ತಿದ್ದಾರೆ.

ವೈರಲ್​ ವಿಡಿಯೋಗಳಲ್ಲೇನಿದೆ?

ಇಂಟರ್ನೆಟ್​ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋಗಳಲ್ಲಿ ಯುವಕರು ಬಣ್ಣ ಬಣ್ಣದ ನೈಟಿಗಳನ್ನು ಧರಿಸಿ ಪ್ರಯಾಣಿಸುತ್ತಿರುವುದು, ಶಾಪಿಂಗ್​ ಮಾಡುವುದು, ಬೈಕ್​ನಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ. ಒಂದು ಕಾಲದಲ್ಲಿ ಕೇವಲ ಮನೆಗೆಲಸಕ್ಕೆ ಸೀಮಿತವಾಗಿದ್ದ ಉಡುಪು, ಇಂದು ಇಂಟರ್ನೆಟ್‌ನ ಅತ್ಯಂತ ಜನಪ್ರಿಯ ಸಮ್ಮರ್ ಫ್ಯಾಷನ್ ಉಡುಪಾಗಿ ಹೊರಹೊಮ್ಮುತ್ತಿದೆ. 

ಸೋಶಿಯಲ್ ಮೀಡಿಯಾ ಯುಗಕ್ಕೂ ಮುನ್ನ ಮ್ಯಾಕ್ಸಿ ಇತಿಹಾಸ

ನೈಟಿ ಮೂಲತಃ ಭಾರತೀಯ ಉಡುಪಲ್ಲ. 1960 ಮತ್ತು 1970 ರ ದಶಕದಲ್ಲಿ ಅಂತರರಾಷ್ಟ್ರೀಯ ಫ್ಯಾಷನ್ ಕ್ರಾಂತಿಯ ಸಮಯದಲ್ಲಿ ಇದು ಜಗತ್ತಿಗೆ ಪರಿಚಯವಾಯಿತು. ವಸಾಹತುಶಾಹಿ ಮತ್ತು ನಂತರದ ಅವಧಿಯಲ್ಲಿ ಪಾಶ್ಚಿಮಾತ್ಯ ಫ್ಯಾಷನ್ ಪ್ರಭಾವದಿಂದಾಗಿ ಇದು ಭಾರತವನ್ನು ಪ್ರವೇಶಿಸಿತು. ಸೀರೆ, ಸಲ್ವಾರ್ ಕಮೀಜ್ ಅಥವಾ ಲೆಹೆಂಗಾದಂತೆ ನೈಟಿ ಭಾರತದ ಸಾಂಪ್ರದಾಯಿಕ ಉಡುಪಾಗಿರಲಿಲ್ಲ. 
ಕಾಲಾನಂತರದಲ್ಲಿ ಭಾರತೀಯರು ಇದನ್ನು ತಮ್ಮ ಸ್ಥಳೀಯ ಜೀವನಶೈಲಿ, ಹವಾಮಾನ ಮತ್ತು ಆದ್ಯತೆಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಹತ್ತಿ ಬಟ್ಟೆಗಳು, ಆಕರ್ಷಕ ಪ್ರಿಂಟ್​ಗಳು ಮತ್ತು ಸರಳವಾದ ಹೊಲಿಗೆಯಿಂದಾಗಿ ಇದು ಭಾರತೀಯ ಮನೆಗಳ ದೈನಂದಿನ ಉಡುಪಾಗಿ ರೂಪಾಂತರಗೊಂಡಿತು.

ನೈಟಿ ವಿಕಸನಗೊಂಡಿದ್ದೇಗೆ?

ಬ್ರಿಟನ್‌ನ ವಿಕ್ಟೋರಿಯನ್ ಯುಗದ ನೈಟ್‌ಗೌನ್‌ಗಳಿಂದ ಇದು ಪ್ರೇರಿತವಾಗಿದೆ. ಆರಂಭದಲ್ಲಿ ಈ ಬಟ್ಟೆಯನ್ನು ಕೇವಲ ಮಲಗುವಾಗ ಮಾತ್ರ ಧರಿಸುವ ಬಟ್ಟೆಯಾಗಿತ್ತು. ಆದರೆ, ಭಾರತದ ಉಷ್ಣವಲಯದ ಹವಾಮಾನ, ತೇವಾಂಶ ಮತ್ತು ಧಾವಂತದ ಬೇಸಿಗೆಗೆ ಇದು ಅತ್ಯಂತ ಸೂಕ್ತವಾಗಿ ಹೊಂದಿಕೊಂಡಿತು. ಇದರ ವಿನ್ಯಾಸ, ಸುಲಭವಾಗಿ ತೊಳೆಯಬಹುದಾದ ಮತ್ತು ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದ್ದ ಈ ಉಡುಪು ನಿಧಾನವಾಗಿ ಬೆಡ್​ರೂಂನಿಂದ ಹೊರಬಂದು, ಇಡೀ ದಿನ ಧರಿಸುವ ಮನೆ ಉಡುಪಾಗಿ ಬದಲಾಯಿತು. ಈ ಬದಲಾವಣೆಯನ್ನು ಯಾವುದೇ ದೊಡ್ಡ ಬ್ರ್ಯಾಂಡ್‌ಗಳು ತರಲಿಲ್ಲ, ಬದಲಿಗೆ ಸಾಮಾನ್ಯ ಮಹಿಳೆಯರೇ ತಮ್ಮ ದಿನನಿತ್ಯದ ಅನುಕೂಲಕ್ಕಾಗಿ ಇದನ್ನು ಸೃಷ್ಟಿಸಿಕೊಂಡರು.

ಗಲ್ಫ್ ದೇಶಗಳ ಲಿಂಕ್ ಮತ್ತು ಕೇರಳದ ಕನೆಕ್ಷನ್

ಭಾರತದಲ್ಲಿ ನೈಟಿಯ ಜನಪ್ರಿಯತೆಯ ಬಗ್ಗೆ ಮಾತನಾಡುವಾಗ ಕೇರಳದ ಪಾತ್ರ ಹೆಚ್ಚಿನದಿದೆ. 1970 ಮತ್ತು 1980 ರ ದಶಕದ ಗಲ್ಫ್​ ದೇಶಕ್ಕೆ ಕೆಲಸಕ್ಕಾಗಿ ತೆರಳುತ್ತಿದ್ದ ಮಲಯಾಳಿ ಪುರುಷರು ತಮ್ಮ ಕುಟುಂಬದ ಮಹಿಳೆಯರಿಗಾಗಿ ಅಲ್ಲಿನ ಸಡಿಲವಾದ ಮತ್ತು ಆರಾಮದಾಯಕವಾದ ಉಡುಪುಗಳನ್ನು ಉಡುಗರೆಯಾಗಿ ತರಲು ಪ್ರಾರಂಭಿಸಿದ್ದರು. ಅಲ್ಲಿಂದ ಇದು ಇಡೀ ದಕ್ಷಿಣ ಭಾರತ ಮತ್ತು ದೇಶಾದ್ಯಂತ ಮನೆ ಮನೆಗಳಿಗೆ ಹರಡಿತು.

"ಮಮ್ಮಿ ಡ್ರೆಸ್" ನಿಂದ ಇಂಟರ್ನೆಟ್ ಫ್ಯಾಷನ್ ವರೆಗೆ

ಚಲನಚಿತ್ರಗಳು, ಟಿವಿ ಶೋಗಳು ಮತ್ತು ಮೀಮ್‌ಗಳಲ್ಲಿ ನೈಟಿಯನ್ನು ಭಾರತೀಯ ಗೃಹಿಣಿಯರ ‘ಯೂನಿಫಾರ್ಮ್’ ಎಂಬಂತೆ ಬಿಂಬಿಸಲಾಗುತ್ತಿತ್ತು. ಇದನ್ನು ಫ್ಯಾಷನ್ ರಹಿತ ಉಡುಪು ಎಂದು ನೋಡಲಾಗುತ್ತಿತ್ತು. ಆದರೆ ಇಂದಿನ ಸೋಶಿಯಲ್ ಮೀಡಿಯಾ ಬಳಕೆದಾರರು ಈ ನೈಟಿಯನ್ನೇ ಬಳಸಿ ಟ್ರೆಂಡ್​ ಸೃಷ್ಟಿಸುತ್ತಿದ್ದಾರೆ. 
ಇಂದಿನ ಯುವ ಪೀಳಿಗೆಯು ಫಾರ್ಮಾಲಿಟಿಗಿಂತ ಹೆಚ್ಚಾಗಿ ಆರಾಮಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಸಡಿಲವಾದ ಶರ್ಟ್‌ಗಳು, ಲೌಂಜ್‌ವೇರ್ ಮತ್ತು ಅಥ್ಲೀಷರ್ ಉಡುಪುಗಳ ಹವಾ ಇರುವ ಈ ಕಾಲದಲ್ಲಿ, ನೈಟಿಯ ಮರುಬರವು ಅಚ್ಚರಿಯೇನಲ್ಲ. ಅಂತಿಮವಾಗಿ, ತಂಪಾದ, ಗಾಳಿಯಾಡುವ ಮತ್ತು ಅತ್ಯಂತ ಅಗ್ಗದ ಬೆಲೆಯ ಈ ಉಡುಪು ಭಾರತೀಯ ಬೇಸಿಗೆಗೆ ಪರ್ಫೆಕ್ಟ್ ಮ್ಯಾಚ್ ಆಗಿದೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net