ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ಭದ್ರಕೋಟೆಯನ್ನು ಕೆಡವಿದ ಮಮತಾ ಬ್ಯಾನರ್ಜಿ ನಿರಂತರವಾಗಿ ಮೂರು ಅವಧಿಗೆ ಅಂದರೆ 15 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದರು. ಮಹಿಳಾ ಮುಖ್ಯಮಂತ್ರಿಯೊಬ್ಬರು ಒಂದೂವರೆ ದಶಕದ ಕಾಲ ರಾಜ್ಯದ ಆಳ್ವಿಕೆ ನಡೆಸಿದ್ದು ಭಾರತೀಯ ರಾಜಕಾರಣದಲ್ಲಿ ದಾಖಲೆಯೇ ಸರಿ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಕೂಡ ಮೂರು ಅವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದರು. ಮೂಲಸೌಕರ್ಯ ಹಾಗೂ ಆರೋಗ್ಯ ಸೇವೆಗಳನ್ನು ಗ್ರಾಮಗಳಿಗೂ ವಿಸ್ತರಿಸಿದ ಮಮತಾ, ಬಡ ಮಹಿಳೆಯರಿಗೆ ‘ಲಕ್ಷ್ಮಿ ಭಂಡಾರ’ ಯೋಜನೆಯಡಿ ಆರ್ಥಿಕ ನೆರವು ಒದಗಿಸಿದ್ದರು. ಆದರೆ, ರಾಜ್ಯದಲ್ಲಿ ಹೆಚ್ಚಳಗೊಂಡ ಅಪರಾಧ ಚಟುವಟಿಕೆಗಳು, ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳು ಆಡಳಿತ ವಿರೋಧಿ ಅಲೆಯನ್ನು ತೀವ್ರಗೊಳಿಸಿ, ಮಮತಾರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದವು. ಮೇ 4ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡರೂ, ಸೋಲನ್ನು ಅರಗಿಸಿಕೊಳ್ಳದ ಮಮತಾ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಕೊನೆಗೆ, ರಾಜ್ಯಪಾಲರೇ ವಿಧಾನಸಭೆಯನ್ನು ವಿಸರ್ಜಿಸಿ, ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಳಿಸಿದರು.