ಪಾಕ್ ಪರ ಬೇಹುಗಾರಿಕೆ ಆರೋಪ; ಉತ್ತರಪ್ರದೇಶದ ಹಾಪುರ್ನಲ್ಲಿ ಇಬ್ಬರನ್ನು ಬಂಧಿಸಿದ ದೆಹಲಿ ಪೊಲೀಸರು | spying
ಸಾಂದರ್ಭಿಕ ಚಿತ್ರ
Published on:
Copied
Follow Us
ಲಖನೌ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಶ್ಚಿಮ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಇಬ್ಬರನ್ನು ದೆಹಲಿಯ ಗುಪ್ತಚರ ಬ್ಯೂರೋ ಪೊಲೀಸರು ಬಂಧಿಸಿದ್ದಾರೆ ಎಂದು ಗುರುವಾರ(ಮಾ. 19) ವರದಿಯಾಗಿದೆ.
ಬಂಧಿತರನ್ನು ಹಾಪುರದ ಧೌಲಾನಾದ ಅಜೀಮ್ ರಾಣಾ, ಮೀರತ್ ಜಿಲ್ಲೆಯ ಗ್ರಾಮವೊಂದರ ಆಜಾದ್ ರಜಪೂತ್ ಎಂದು ಗುರಿತಿಸಲಾಗಿದೆ. ಹಣಕ್ಕಾಗಿ ಇಬ್ಬರೂ 2025ರಿಂದ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕ್ ಮೂಲದ ದರೋಡೆಕೋರ ಶಹಜಾದ್ ಭಟ್ಟಿ ಜೊತೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ. 2026 ಫೆಬ್ರವರಿ 19ರಂದು ಪಾಕ್ಗೆ ದೇಶದ ಹಲವು ಪ್ರಮುಖ ದೇವಾಲಯ, ಸಾರ್ವಜನಿಕ ಪ್ರದೇಶದ ಸ್ಥಳಗಳ ಹಲವಾರು ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಹಾಪುರ್ ಎಸ್ಪಿ ಕೆಜಿ ಸಿಂಗ್, ಆರೋಪಿಗಳಾದ ಅಜೀಮ್ ರಾಣಾ ಮತ್ತು ಆಜಾದ್ ರಜಪೂತ್ ದೆಹಲಿಯ ಸನಾತನ ಧರ್ಮ ದೇವಾಲಯ, ಗ್ರೇಟರ್ ನೋಯ್ಡಾದ ರಾವಣ ದೇವಾಲಯ ಹಾಗೂ ಹತ್ತಿರದ ಇತರ ಸ್ಥಳಗಳ ವೀಡಿಯೊಗಳನ್ನು ಪಾಕ್ನ ತಮ್ಮ ನಿರ್ವಾಹಕರಿಗೆ ಕಳುಹಿಸಿದ್ದರು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).