ಕುಸ್ತಿ ಅಖಾಡವಾದ ದೆಹಲಿ ಮೆಟ್ರೋ: ವೃದ್ಧನ ಮೇಲೆ ಯುವಕರಿಂದ ಹಲ್ಲೆ; ವೈರಲ್​ ವಿಡಿಯೋ ನೋಡಿ ಗರಂ ಆದ ನೆಟ್ಟಿಗರು | Delhi Metro

ದೆಹಲಿ ಮೆಟ್ರೋನಲ್ಲಿ ವೃದ್ಧ ವ್ಯಕ್ತಿಯನ್ನು ಧಳಿಸುತ್ತಿರುವ ಯುವಕರು
ದೆಹಲಿ ಮೆಟ್ರೋನಲ್ಲಿ ವೃದ್ಧ ವ್ಯಕ್ತಿಯನ್ನು ಧಳಿಸುತ್ತಿರುವ ಯುವಕರು
Published on

ಪ್ರಮುಖ ಮುಖ್ಯಾಂಶಗಳು

  • ಕುಸ್ತಿ ಅಖಾಡಾವಾಗಿ ಬದಲಾದ ದೆಹಲಿ ಮೆಟ್ರೋ
  • ವೃದ್ಧನ ಮೇಲೆ ಎರಗಿದ ಇಬ್ಬರು ಯುವಕರು
  • ವೈರಲ್​ ವಿಡಿಯೋ ನೋಡಿ ಗರಂ ಆದ ನೆಟ್ಟಿಗರು
ನವದೆಹಲಿ: ದೆಹಲಿ ಮೆಟ್ರೋ (Delhi Metro) ನಲ್ಲಿ ಏನಾದರೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ವಿಚಿತ್ರ ರೀಲ್ಸ್, ಇನ್ನು ಕೆಲವೊಮ್ಮೆ ಪ್ರೇಮಿಗಳ ಸರಸ.. ಆದರೆ ಈಗ ಹೊರಬಂದಿರುವ ವಿಡಿಯೋ ಮಾತ್ರ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.
ಇಬ್ಬರು ಯುವಕರು ಸೇರಿ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಮೆಟ್ರೋ ಒಳಗೇ ಮನಬಂದಂತೆ ಥಳಿಸುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (NCIB) ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಕಿಕ್ಕಿರಿದು ತುಂಬಿರುವ ಮೆಟ್ರೋ ಕೋಚ್ ಒಳಗೆ ಅಸಹಾಯಕ ವೃದ್ಧನ ಮೇಲೆ ಇಬ್ಬರು ಕಿರಾತಕರು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.
ನಡೆದಿದ್ದೇನು?
ವೈರಲ್ ಕ್ಲಿಪ್‌ನಲ್ಲಿರುವಂತೆ, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ ಯುವಕನೊಬ್ಬ ವೃದ್ಧನ ಮೇಲೆ ಸತತವಾಗಿ ಗುದ್ದುತ್ತಿದ್ದಾನೆ. ಆ ವಯಸ್ಸಾದ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ, ಈ ಇಬ್ಬರು ಯುವಕರು ಮಾತ್ರ ಬಿಡುತ್ತಿಲ್ಲ. ಜಗಳ ಎಷ್ಟು ವಿಕೋಪಕ್ಕೆ ಹೋಗಿತ್ತೆಂದರೆ, ಇಬ್ಬರು ಯುವಕರು ಸೇರಿ ಆ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಮೆಟ್ರೋ ತುಂಬ ಜನ ಇದ್ದರೂ ಯಾರೊಬ್ಬರೂ ಇವರನ್ನು ಬಿಡಿಸಲು ಮುಂದಾಗುತ್ತಿಲ್ಲ. ಎಲ್ಲರೂ ಮೂಕಪ್ರೇಕ್ಷಕರಂತೆ ನಿಂತು ದೃಶ್ಯವನ್ನು ನೋಡುತ್ತಿದ್ದಾರೆ. ಒಂದು ಹಂತದಲ್ಲಂತೂ ಒಬ್ಬ ಯುವಕ ಕುಸ್ತಿಪಟುವಿನಂತೆ ವೃದ್ಧನ ಕಾಲನ್ನು ಎತ್ತಿ ನೆಲಕ್ಕೆ ಅಪ್ಪಳಿಸಲು ಮುಂದಾಗಿದ್ದಾನೆ. ಈ ಗಲಾಟೆಗೆ ಅಸಲಿ ಕಾರಣವೇನು ಎಂಬುದು ಇಲ್ಲಿವರೆಗೆ ತಿಳಿದುಬಂದಿಲ್ಲ.

ದೆಹಲಿ ಪೊಲೀಸರೇ ಎಚ್ಚೆತ್ತುಕೊಳ್ಳಿ!

ಈ ವಿಡಿಯೋ ಎಕ್ಸ್ (X) ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ದೆಹಲಿ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ನಗರದ ಜೀವನಾಡಿ ಎನ್ನಿಸಿಕೊಳ್ಳುವ ಮೆಟ್ರೋದಲ್ಲಿ ಇಂತಹ ಗೂಂಡಾಗಿರಿ ನಡೆಯುತ್ತಿದ್ದರೂ ಪೊಲೀಸರು ಏನು ಮಾಡುತ್ತಿದ್ದಾರೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಜನರ ಎದುರೇ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತಿದ್ದರೂ ಯಾರೂ ತಡೆಯುತ್ತಿಲ್ಲ ಎಂದರೆ ನಾವೆತ್ತ ಸಾಗುತ್ತಿದ್ದೇವೆ? ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂದು ಆ ವ್ಯಕ್ತಿಗೆ ಈ ಪರಿಸ್ಥಿತಿ ಬಂದಿದೆ, ನಾಳೆ ನಿಮಗೂ ಬರಬಹುದು, ಅಂದು ಜನ ಹೀಗೆಯೇ ವಿಡಿಯೋ ಮಾಡುತ್ತಾ ನಿಂತಿರುತ್ತಾರೆ ಎಂದು ಮಾರ್ಮಿಕವಾಗಿ ಎಚ್ಚರಿಸಿದ್ದಾರೆ.

ರಾಜಧಾನಿ ಮರ್ಯಾದೆ ಹರಾಜು!

ದೆಹಲಿ ಮೆಟ್ರೋದಲ್ಲಿ ಪದೇ ಪದೇ ಇಂತಹ ಗಲಾಟೆಗಳು ನಡೆಯುತ್ತಿರುವುದು ರಾಜಧಾನಿಯ ಘನತೆಗೆ ಕಪ್ಪುಚುಕ್ಕೆಯಾಗಿದೆ. ಭದ್ರತಾ ಸಿಬ್ಬಂದಿ (CISF) ಮತ್ತು ಮೆಟ್ರೋ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಈ ಗೂಂಡಾಗಳನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಈ ಘಟನೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿಲ್ಲ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net