‘ಕುಸ್ತಿಪಟು ವಿನೇಶ್ ಫೋಗಟ್ ಅನರ್ಹತೆ ವಿವಾದ: ; 'ಪ್ರತೀಕಾರ ಸಾಧಿಸೋದು ಬಿಡಿ' ಎಂದು WFI ಕಿವಿ ಹಿಂಡಿದ Delhi High Court

Delhi High Court
Delhi High Court
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸಿದ್ಧ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಟ್ರಯಲ್ಸ್‌ನಿಂದ ಅನರ್ಹಗೊಳಿಸಿದ ಡಬ್ಲ್ಯೂಎಫ್‌ಐ
  • ಡಬ್ಲ್ಯೂಎಫ್‌ಐ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್​
  • ಒಬ್ಬರ ಏಳಿಗೆಗೆ ತಾಯ್ತನವೇ ಮಾರಕ ಎನ್ನುವುದಾಗಿ ಬಿಂಬಿಸಬೇಡಿ ಎಂದ ಕೋರ್ಟ್
ನವದೆಹಲಿ: ದೇಶಿಯ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ಅನರ್ಹ ಎಂದಿದ್ದ ​ ಭಾರತೀಯ ಕುಸ್ತಿ ಫೆಡರೇಶನ್ ಅನ್ನು  ದೆಹಲಿ ಹೈಕೋರ್ಟ್​(Delhi High Court) ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಮೇ.30 ಮತ್ತು31ರಂದು ನಡೆಯುವ  ಏಷ್ಯನ್​ ಗೇಮ್ಸ್​ ಟ್ರಯಲ್ಸ್​ನಲ್ಲಿ ಕುಸ್ತಿಪಟು ಭಾಗಿಯಾಗುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ತಜ್ಞರ ಸಮಿತಿ ರಚಿಸಲು ನಿರ್ದೇಶಿಸಿದೆ
ವಿನೇಶ್ ಫೋಗಟ್ ಅವರು ತಮಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿದ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿಕೆ ಉಪಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರನ್ನೊಳಗೊಂಡಿದ್ದ ಪೀಠವು ವಿಚಾರಣೆ ನಡೆಸಿದ್ದು, ಕ್ರೀಡಾ ಸಂಸ್ಥೆಗಳು ತಮಗಿಷ್ಟ ಬಂದಂತೆ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ. ಬದಲಾವಣೆಯಲ್ಲೇ ರಾಜಕೀಯ ಕಾಣುತ್ತಿದೆ ಈ ರೀತಿ ನಡೆದುಕೊಳ್ಳಬೇಡಿ ಎಂದು ಕಿವಿ ಹಿಂಡಿತು.  

ಕೋರ್ಟ್​ ಹೇಳಿದ್ದೇನು?

'ದೇಶದಲ್ಲಿ ತಾಯ್ತನವನ್ನು ಸಂಭ್ರಮಿಸಲಾಗುತ್ತದೆ. ಆದರೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು  ಕ್ರೀಡಾಪಟುವಿನ ವೃತ್ತಿ ಜೀವನಕ್ಕೆ ಇದು ಮಾರಕ ಎನ್ನುವಂತೆ ಬಳಕೆ ಮಾಡಿಕೊಳ್ಳುವುದು ತಪ್ಪು. ಪ್ರತಿಕಾರ ಸಾಧಿಸೋದು ತಪ್ಪು' ಎಂದು ಅಸಮಾಧಾನ ವ್ಯಕ್ತಪಡಿಸಿತು.
'ಯಾವುದೇ ಕ್ರೀಡಾಪಟುವನ್ನು ಅನರ್ಹಗೊಳಿಸುವ ಮುನ್ನ ಸೂಕ್ತ ಪ್ರಕ್ರಿಯೆ ಮತ್ತು ಲಿಖಿತ ನಿಯಮಾವಳಿಗಳನ್ನು ಪಾಲಿಸಬೇಕು, ಅದನ್ನು ಪಾಲಿಸಲಾಗಿದೆಯೇ?. ಕೇವಲ ಮೌಖಿಕ ಆದೇಶ ಅಥವಾ ಆಂತರಿಕ ನಿರ್ಧರಗಳ ಆಧಾರದ ಮೇಲೆ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಅವಕಾಶವನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ' ಎಂದು ಹೇಳಿತು. 

ವರ್ಷಾನುಗಟ್ಟಲೇ ಶ್ರಮಿಸಿರುತ್ತಾರೆ

'ಕ್ರೀಡಾಪಟುಗಳು ನಮ್ಮ ದೇಶವನ್ನು ಪ್ರತಿನಿಧಿಸಲು ತಮ್ಮನ್ನೇ ತಾವು ದಂಡಿಸಿಕೊಂಡು ವರ್ಷಗಟ್ಟಲೇ ಕಷ್ಟಪಟ್ಟು  ತರಬೇತಿ ಪಡೆದುಕೊಳ್ಳುತ್ತಾರೆ. ಅಂತಹವರ ಹಕ್ಕು ಕಸಿದು ಕೊಳ್ಳೋದಕ್ಕೂ ಮುನ್ನ ಕ್ರೀಡಾ ಸಂಸ್ಥೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು.  ಯಾವ ನಿಯಮವನ್ನೂ ಪಾಲನೆ ಮಾಡಲು ಕ್ರೀಡಾಪಟು ಭವಿಷ್ಯದ ಜೊತೆಗೆ ಆಡವಾಡಲು ಬಿಡೋದಿಲ್ಲ' ಎಂದು ಎಚ್ಚರಿಕೆ ಕೊಟ್ಟಿತು 

ದ್ವೇಷದ ರಾಜಕಾರಣ ಬಿಡಿ

'ಹಳೆಯ ಮಾನದಂಡಗಳನ್ನು ದಿಢೀರ್​ ಬದಲಾಯಿಸಿರುವುದರ ಹಿಂದೆ ದ್ವೇಷದ ರಾಜಕಾರಣ  ಅಡಗಿರುವಂತೆ ಕಾಣುತ್ತದೆ. ಮುಂಬರುವ ಏಷ್ಯನ್​​ ಗೇಮ್ಸ್​​ ಆಯ್ಕೆ ಟ್ರಯಲ್ಸ್​​ನಲ್ಲಿ ಅವರು ಭಾಗವಹಿಸುವುದನ್ನು ಖಚಿತಪಡಿಸುವಂತೆ ನಿರ್ದೇಶಿಸಿದೆ.
2024ರ ಪ್ಯಾರಿಸ್​ ಒಲಂಪಿಕ್ಸ್​ನಲ್ಲಿ ವಿನೇಶಾ ಫೋಗಟ್​ ಅವರು 100 ಗ್ರಾಂ ಹೆಚ್ಚು ತೂಕದಿಂದ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಇದು ರಾಷ್ಟ್ರಕ್ಕೆ ಮಾಡಿದ್ದ ಅವಮಾನ ಎಂದು ಕರೆದಿರುವುದರ ವಿರುದ್ಧ ಕೋರ್ಟ್​​ ಕಿಡಿಕಾರಿತು. 2025ರಲ್ಲಿ ವಿನೇಶಾ ತಾಯಿಯಾಗಿ ಕೆಲವೇ ತಿಂಗಳಲ್ಲಿ ದೇಶ ಪ್ರತಿನಿಧಿಸಲು ನಿರ್ಧರಿಸಿದ್ದಾರೆ.ಸಣ್ಣ ಪುಟ್ಟ ಭಿನ್ನಾಭಿಪ್ರಾಯದಿಂದ ಅವರನ್ನು ಕ್ರೀಡೆಯಿಂದ ದೂರವಿಡುವುದು ಸರಿಯಲ್ಲ. ಫೆಡರೇಶನ್​ ಕ್ರೀಡಾ ಹಿತದೃಷ್ಟಿಯಿಂದ ವರ್ತಿಸುತ್ತಿಲ್ಲ' ಎಂದು ಕಟುವಾಗಿ ಟೀಕಿಸಿತು.
'ವಿನೇಶ್ ಫೋಗಟ್​​ ಅವರು ಕುಸ್ತಿ ಫೆಡರೇಶನ್​ನ ನಿಯಮವನ್ನು ಉಲ್ಲಂಘಿಸಿದ್ದಾರೆ. ಶಿಸ್ತು ನಿಯಮ ಕಾಪಡಿಕೊಂಡಿಲ್ಲ ಎಂದು ಡಬ್ಲ್ಯೂ ಎಫ್​ಐ ಪರ ವಕೀಲರು ವಾದಿಸಿದರು. ಇದಕ್ಕೂ ಮುನ್ನ ಕುಸ್ತಿಪಟುಗೆ ಶೋಕಾಸ್ ನೋಟಿಸ್​ ಕೊಟ್ಟಿದ್ದೀರಾ' ಎಂಬ ಪ್ರಶ್ನೆಗೆ ಉತ್ತರಿಸದ ಕಾರಣ ಅವರ ವಾದವನ್ನು ಕೋರ್ಟ್ ನಿರಾಕರಿಸಿತು. 

ಏನಿದು ವಿನೇಶಾ ಮೇಲಿನ ಆರೋಪ 

ವಿನೇಶಾ ಅವರು ಕೆಲವು ನಿಯಮ ಉಲ್ಲಂಘಿಸಿದ್ದಾರೆ. ನಿವೃತ್ತಿ ನಂತರ ಮರಳಿ ಸ್ಪರ್ಧೆಗೆ ಬರುವ ಪ್ರಕ್ರಿಯೆ ಪಾಲಿಸಿಲ್ಲ ಎಂಬ ಆರೋಪವನ್ನು ಮುಂದಿಟ್ಟು ಫೆಡರೇಶನ್​ ವಿನೇಶಾ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟು 2026ರ ಜೂನ್​ವರೆಗೆ ಯಾವ ಕ್ರೀಡೆಯಲ್ಲಿಯೂ ಸ್ಪರ್ಧಿಸಿದಂತೆ ನಿರ್ಬಂಧಿಸಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net