ಶಿಖೋಪುರ್ ಲ್ಯಾಂಡ್ ಡೀಲ್ ಮನಿ ಲಾಂಡರಿಂಗ್ ಪ್ರಕರಣ; ಸೋನಿಯಾ ಅಳಿಯ ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು ಭಾಗ್ಯ! | Robert Vadra

Robert Vadra | ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ
Robert Vadra | ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ
Published on
ದೆಹಲಿ: ಹರಿಯಾಣದ ಗುರುಗ್ರಾಮದ ಶಿಖೋಪುರ ಗ್ರಾಮದಲ್ಲಿ 2008 ರಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್ ವಾದ್ರಾಗೆ (Robert Vadra) ದೆಹಲಿಯ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ಆದೇಶದ ಪ್ರಕಾರ, ವಾದ್ರಾಗೆ 50,000 ರೂಪಾಯಿಗಳ ಜಾಮೀನು ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ (ಖಾತರಿ) ಆಧಾರದ ಮೇಲೆ ಈ ಜಾಮೀನು ನೀಡಲಾಗಿದೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ: ರಾಬರ್ಟ್ ವಾದ್ರಾ

ನ್ಯಾಯಾಲಯದಿಂದ ಜಾಮೀನು ಪಡೆದ ತಕ್ಷಣ ಉದ್ಯಮಿ ರಾಬರ್ಟ್ ವಾದ್ರಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನಗೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಇಡಿ ಸಂಸ್ಥೆಯು ಸರ್ಕಾರದಿಂದ ನಿರ್ವಹಿಸಲ್ಪಡುತ್ತಿದೆ ಮತ್ತು ಅದು ಸರ್ಕಾರದ ಸೂಚನೆಗಳ ಮೇರೆಗೆ ಮುಂದುವರಿಯುತ್ತದೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ, ಇಡಿ ತಳೆದಿರುವ ನಿಲುವು ನ್ಯಾಯಯುತವಾದುದಲ್ಲ ಎಂದರು.
ನಾನು ಇಲ್ಲೇ ಇದ್ದೇನೆ, ಮರೆಮಾಡಲು ಏನೂ ಇಲ್ಲ. ಹಾಗಾಗಿ ಯಾವಾಗಲೂ ಇಲ್ಲೇ ಇರುತ್ತೇನೆ ಮತ್ತು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಕಾನೂನಾತ್ಮಕ ಔಪಚಾರಿಕತೆಗಳು ಏನೇ ಇರಲಿ, ಅವುಗಳನ್ನು ಪೂರ್ಣಗೊಳಿಸುತ್ತೇನೆ. ಆದ್ದರಿಂದ ಎಲ್ಲವೂ ಒಳ್ಳೆಯದೇ ಆಗಲಿದೆ. ನಾವು ಚುನಾವಣೆಗಳನ್ನು ಗೆದ್ದರೆ, ನಾವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೆ ಮತ್ತು ಜನರು ಇನ್ನೂ ನನ್ನ ಕುಟುಂಬವನ್ನು ಬಯಸಿದರೆ, ಅದಕ್ಕೆ ಪ್ರತಿಯಾಗಿ ನಾನು ಇಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಎದುರಿಸುವ ಎಲ್ಲಾ ಸಾಮರ್ಥ್ಯ ನನಗಿದೆ ಎಂದರು.
ಹರಿಯಾಣದ ಶಿಕೋಹ್‌ಪುರದಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ತಮಗೆ ಸಮನ್ಸ್ ಜಾರಿ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಬರ್ಟ್ ವಾದ್ರಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಜಾರಿ ನಿರ್ದೇಶನಾಲಯವು (ED) ಗುರುವಾರ ತೀವ್ರವಾಗಿ ವಿರೋಧಿಸಿತ್ತು.

ವಾದ್ರಾ ಅರ್ಜಿಯಲ್ಲಿ ಸುಳ್ಳು: ಇಡಿ ಆರೋಪ

ನ್ಯಾಯಮೂರ್ತಿ ಮನೋಜ್ ಜೈನ್ ಅವರಿದ್ದ ಪೀಠದ ಮುಂದೆ ತನಿಖಾ ಸಂಸ್ಥೆಯ ಪರ ವಕೀಲರು ವಾದ ಮಂಡಿಸಿ, ವಾದ್ರಾ ಸಲ್ಲಿಸಿರುವ ಅರ್ಜಿಯು ಸಂಪೂರ್ಣ ಸುಳ್ಳು ಕಾನೂನು ಸಲ್ಲಿಕೆಯನ್ನು ಆಧರಿಸಿದೆ. ಆದ್ದರಿಂದ ದಂಡದ ವೆಚ್ಚಗಳೊಂದಿಗೆ ಆ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯ ದಂಡ ಸಂಹಿತೆ (IPC) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅರ್ಜಿದಾರರ (ವಾದ್ರಾ) ವಿರುದ್ಧ ದಾಖಲಾಗಿರುವ ಅಪರಾಧಗಳು, ಆ ವ್ಯವಹಾರ ನಡೆದ ಸಂಬಂಧಿತ ಸಮಯದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (PMLA) ನಿಗದಿತ ಅಪರಾಧಗಳಾಗಿರಲಿಲ್ಲ. ಹಾಗಾಗಿ ಈ ಪ್ರಕರಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ (ED) ಯಾವುದೇ ಕಾನೂನಾತ್ಮಕ ಅಧಿಕಾರ ವ್ಯಾಪ್ತಿ ಇಲ್ಲ ಎಂದು ವಾದ್ರಾ ಪರ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.
ಈ ಭೂ ವ್ಯವಹಾರವು 2008 ಮತ್ತು 2012 ರ ನಡುವೆ ನಡೆದಿದ್ದು, ಇಡಿ ಪ್ರಕರಣಕ್ಕೆ ಆಧಾರವಾಗಿರುವ ಅಪರಾಧಗಳನ್ನು 2013 ಮತ್ತು 2018 ರ ವೇಳಾಪಟ್ಟಿಯಲ್ಲಿ ಮಾತ್ರ ಕಾಯ್ದೆಗೆ ಸೇರಿಸಲಾಗಿದೆ ಎಂದು ವಾದ್ರಾ ಪರ ವಕೀಲ ಸಿಂಘ್ವಿ ವಿವರಿಸಿದರು. ಆದರೆ, ಅರ್ಜಿದಾರರ ಈ ವಾದವು ಸಂಪೂರ್ಣ ತಪ್ಪಾಗಿದೆ ಮತ್ತು ಇದು ಕಾನೂನಿನ ಬಗ್ಗೆ ಸಾರಿರುವ ಸಂಪೂರ್ಣ ಸುಳ್ಳು ಹೇಳಿಕೆ ಎಂದು ಇಡಿ ಪರ ವಕೀಲರು ಪ್ರತಿವಾದ ಮಂಡಿಸಿದರು.

ಮೇ 18 ರಂದು ಮುಂದಿನ ವಿಚಾರಣೆ

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮೇ 18ಕ್ಕೆ (ಸೋಮವಾರ) ನಿಗದಿಪಡಿಸಿದೆ. ಇಡಿ ಮಾಡಿರುವ ಆರೋಪಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯವು ವಾದ್ರಾ ಪರ ವಕೀಲರಿಗೆ ಸೂಚಿಸಿದೆ. ಒಂದು ವೇಳೆ ನಿಮ್ಮ ವಾದ ಸಂಪೂರ್ಣವಾಗಿ ತಪ್ಪಾಗಿದ್ದರೆ, ನಾವು ನಿಮಗೆ ಹೇಗೆ ತಾನೇ ಸಹಾಯ ಮಾಡಲು ಸಾಧ್ಯ..? ಸೋಮವಾರ ನಾವು ಈ ಕುರಿತು ವಾದ-ಪ್ರತಿವಾದಗಳನ್ನು ಆಲಿಸುತ್ತೇವೆ ಎಂದು ನ್ಯಾಯಮೂರ್ತಿ ಜೈನ್ ಅವರು ಹೇಳಿದರು.
ಕಳೆದ ತಿಂಗಳ 15 ರಂದು ವಿಚಾರಣಾ ನ್ಯಾಯಾಲಯವು, 2025 ರ ಜುಲೈನಲ್ಲಿ ಇಡಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿನ ಅಪರಾಧಗಳನ್ನು ಪರಿಗಣನೆಗೆ ತೆಗೆದುಕೊಂಡು, ಮೇ 16 ರಂದು ರಾಬರ್ಟ್ ವಾದ್ರಾ ಮತ್ತು ಇತರರನ್ನು ತನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ಆದೇಶಿಸಿತ್ತು. ಇಷ್ಟು ವರ್ಷಗಳ ಕ್ರಿಮಿನಲ್ ಪ್ರಕರಣಗಳ ಇತಿಹಾಸದಲ್ಲಿ 57 ವರ್ಷದ ವಾದ್ರಾ ವಿರುದ್ಧ ಯಾವುದೇ ತನಿಖಾ ಸಂಸ್ಥೆಯು ಚಾರ್ಜ್‌ಶೀಟ್ ಸಲ್ಲಿಸಿದ್ದು ಇದೇ ಮೊದಲ ಬಾರಿಯಾಗಿದೆ. ಇದಕ್ಕೂ ಮುನ್ನ, ಕಳೆದ ವರ್ಷ ಏಪ್ರಿಲ್​ನಲ್ಲಿ ಜಾರಿ ನಿರ್ದೇಶನಾಲಯವು ವಾದ್ರಾರನ್ನು ಸತತ ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಡಿಸಿತ್ತು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net