ಭ್ರಷ್ಟಾಚಾರದ ಕೂಪದಲ್ಲಿ ಯಾದವ್​ ಫ್ಯಾಮಿಲಿ ಲಾಕ್... ದೆಹಲಿ ಕೋರ್ಟ್‌ನಿಂದ ತೇಜ್​ಗೆ ಬಿಗ್ ಶಾಕ್! | Tej Pratap Yadav

Tej Pratap Yadav | ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್
Tej Pratap Yadav | ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್
Published on
ಪಟನಾ: ಲ್ಯಾಂಡ್ ಫಾರ್ ಜಾಬ್ ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್​ ಯಾದವ್​ರ ಹಿರಿಯ ಪುತ್ರ, ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ (Tej Pratap Yadav) ವಿರುದ್ಧ ದೆಹಲಿಯ ವಿಶೇಷ ನ್ಯಾಯಾಲಯ ಅಧಿಕೃತವಾಗಿ ಆರೋಪಗಳನ್ನು ಹೊರಿಸಿದ್ದು, ಪ್ರಕರಣ ನಿರ್ಣಾಯಕ ಹಂತ ತಲುಪಿದೆ.
ತೇಜ್ ಪ್ರತಾಪ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ವಿಚಾರಣೆಯನ್ನು ಎದುರಿಸುವುದಾಗಿ ತಿಳಿಸಿದ್ದಾರೆ. ನ್ಯಾಯಾಲಯವು ಭವಿಷ್ಯದ ವಿಚಾರಣೆಗಳಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದೆ ಎಂದು ವರದಿಯಾಗಿದೆ.
ಫೆಬ್ರವರಿ 16 ರಂದು, ಆರ್‌ಜೆಡಿ ಹಿರಿಯ ನಾಯಕರಾದ ಲಾಲು ಪ್ರಸಾದ್ ಯಾದವ್ ದಂಪತಿ ಕೂಡ ಇದೇ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದರು.

ಏನಿದು 'ಲ್ಯಾಂಡ್ ಫಾರ್ ಜಾಬ್' ಹಗರಣ?

2004 ರಿಂದ 2009ರ ಅವಧಿಯಲ್ಲಿ ಲಾಲೂ ಪ್ರಸಾದ್ ಯಾದವ್ ಕೇಂದ್ರ ರೈಲ್ವೆ ಸಚಿವರಾಗಿದ್ದರು, ಈ ವೇಳೆ ರೈಲ್ವೆಯ ಗ್ರೂಪ್-ಡಿ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ರೈಲ್ವೆಯಲ್ಲಿ ಕೆಲಸ ಕೊಡಿಸುವ ಬದಲಾಗಿ ಅಭ್ಯರ್ಥಿಗಳಿಂದ ಮತ್ತು ಅವರ ಕುಟುಂಬದವರಿಂದ ಕಡಿಮೆ ದರದಲ್ಲಿ ಜಮೀನನ್ನು ಲಾಲೂ ಕುಟುಂಬ ತಮ್ಮ ಹೆಸರಿಗೆ ಬರೆಯಿಸಿಕೊಂಡಿದೆ ಎನ್ನುವುದು ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯದ (ED) ಪ್ರಮುಖ ವಾದ.
ಈ ಪ್ರಕರಣವು ಭೂಮಿಗೆ ಬದಲಾಗಿ ಅಭ್ಯರ್ಥಿಗಳಿಗೆ ರೈಲ್ವೆ ಗ್ರೂಪ್ ಡಿ ಉದ್ಯೋಗಗಳನ್ನು ಒದಗಿಸಿದ ಆರೋಪಕ್ಕೆ ಸಂಬಂಧಿಸಿದೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ವಿರುದ್ಧ ಆರೋಪಗಳನ್ನು ಹೊರಿಸಿದರು. ವೀಡಿಯೊ ಕಾನ್ಫರೆನ್ಸಿಂಗ್‌ಗೆ ಆದೇಶವನ್ನು ಅನುಮತಿಸದ ಹೊರತು ಆರೋಪಿಗಳು ವೈಯಕ್ತಿಕವಾಗಿ ಹಾಜರಾಗಬೇಕು ಎಂದು ನ್ಯಾಯಾಲಯವು ಗಮನಿಸಿತು. "ಅವರ ವಯಸ್ಸು ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ನ್ಯಾಯಾಲಯ ಕೇಳಿದೆ" ಎಂದು ಮಿಸಾ ಭಾರ್ತಿ ಹೇಳಿದರು.

ತೇಜ್ ಪ್ರತಾಪ್ ಪಾತ್ರವೇನು?

ಈ ಅಕ್ರಮದಲ್ಲಿ ತೇಜ್ ಪ್ರತಾಪ್ ಯಾದವ್ ಕೂಡ ಭಾಗಿದಾರರು ಎನ್ನಲಾಗಿದ್ದು, ಅವರ ಹೆಸರಿನಲ್ಲಿಯೂ ಸಹ ಹಲವು ಆಸ್ತಿಗಳು ನೋಂದಣಿಯಾಗಿವೆ. ಮನಿ ಲಾಂಡರಿಂಗ್ (ಹಣ ಅಕ್ರಮ ವರ್ಗಾವಣೆ) ತಡೆ ಕಾಯ್ದೆಯಡಿ ಇಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತೇಜ್ ಪ್ರತಾಪ್ ಯಾದವ್ ಹೆಸರನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ಭೂಮಿಯನ್ನು ಲಂಚದ ರೂಪದಲ್ಲಿ ಪಡೆದ ಕಂಪನಿಗಳಲ್ಲಿ ತೇಜ್ ಪ್ರತಾಪ್ ಸಹ ನಿರ್ದೇಶಕರಾಗಿದ್ದರೆನ್ನಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net