ನವದೆಹಲಿ: ದೇಶದ ಅತ್ಯಂತ ಸೂಕ್ಷ್ಮ ಮತ್ತು ಬಿಗಿ ಭದ್ರತೆಯ ವಿಮಾನ ನಿಲ್ದಾಣಗಳಲ್ಲಿ ಒಂದಾದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ಟಿಕೆಟ್ ಅಥವಾ ಪ್ರಯಾಣದ ದಾಖಲೆಗಳಿಲ್ಲದೆ ಟರ್ಮಿನಲ್-3ರ ಒಳಗೆ ಬಲವಂತವಾಗಿ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ಕ್ಷಣಾರ್ಧದಲ್ಲಿ ತಡೆದು ವಶಕ್ಕೆ ಪಡೆದಿದ್ದಾರೆ.
ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಈ ಘಟನೆ ನಡೆದಿದ್ದು, CISF ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ 25 ಸೆಕೆಂಡ್ಗಳ ಸಿಸಿಟಿವಿ ವಿಡಿಯೊದಲ್ಲಿ ಇಡೀ ಘಟನೆ ಸೆರೆಯಾಗಿದೆ. ಹರಿಯಾಣ ಮೂಲದ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಮೂಲಕ ಏಕಾಏಕಿ ಒಳನುಗ್ಗಲು ಮುಂದಾಗಿದ್ದಾನೆ.
ಪ್ರವೇಶ ದ್ವಾರದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆಯಲು ಯತ್ನಿಸಿದರೂ, ಅವರನ್ನು ಲೆಕ್ಕಿಸದೆ ಆತ ಕೆಲ ಮೀಟರ್ಗಳಷ್ಟು ಒಳಕ್ಕೆ ಓಡಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಹಾಗೂ ಸ್ಥಳಕ್ಕೆ ಧಾವಿಸಿದ ಕ್ವಿಕ್ ರೆಸ್ಪಾನ್ಸ್ ಟೀಮ್ (QRT), ಕೇವಲ ಕೆಲವೇ ಸೆಕೆಂಡ್ಗಳಲ್ಲಿ ಆತನನ್ನು ಸುತ್ತುವರಿದು ನೆಲಕ್ಕೆ ಕೆಡವಿ ವಶಕ್ಕೆ ಪಡೆದಿದೆ. ಭದ್ರತಾ ಪಡೆಯ ಈ ಚುರುಕಿನ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಭದ್ರತಾ ಲೋಪ ತಪ್ಪಿದಂತಾಗಿದೆ.
ವಶಕ್ಕೆ ಪಡೆದ ಯುವಕನ ಬ್ಯಾಗ್ ತಪಾಸಣೆ ನಡೆಸಿದಾಗ ಕೆಲವು ಗುರುತಿನ ಚೀಟಿಗಳು ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳು ಪತ್ತೆಯಾಗಿವೆ. ಆರೋಪಿಯನ್ನು ಹರಿಯಾಣ ನಿವಾಸಿ ಎಂದು ಗುರುತಿಸಲಾಗಿದ್ದು,ಆತನ ತಂದೆಯನ್ನು ಸಂಪರ್ಕಿಸಿದಾಗ, ಆತ ಮಾದಕವಸ್ತು ವ್ಯಸನದಿಂದ ಬಳಲುತ್ತಿದ್ದು ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆತ ಯಾವ ಉದ್ದೇಶಕ್ಕಾಗಿ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರತಿದಿನ ಲಕ್ಷಾಂತರ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸುವ ದೆಹಲಿ ವಿಮಾನ ನಿಲ್ದಾಣವು ಅತ್ಯಂತ ಸೂಕ್ಷ್ಮ ವಲಯವಾಗಿದೆ. ಇಲ್ಲಿ ಟರ್ಮಿನಲ್ ಪ್ರವೇಶಿಸಲು ಮಾನ್ಯ ಟಿಕೆಟ್ ಮತ್ತು ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದ್ದು, ಸಿಬ್ಬಂದಿಗೂ ಕಠಿಣ ತಪಾಸಣೆ ಬಳಿಕವೇ ಪ್ರವೇಶ ನೀಡಲಾಗುತ್ತದೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು CISF ಪಡೆ ಸದಾ ಸನ್ನದ್ಧವಾಗಿರುತ್ತದೆ.