ಬಾಂಗ್ಲಾದೇಶದೊಂದಿಗಿನ ಗಡಿಯಲ್ಲಿ ಬೇಲಿ ನಿರ್ಮಾಣ ಮಾಡಲು ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ಭೂಮಿ ಹಸ್ತಾಂತರಿಸಲು ಪಶ್ಚಿಮ ಬಂಗಾಳದ ಹೊಸ ಸರ್ಕಾರ ತನ್ನ ಮೊದಲ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಂಡಿದೆ. ಭೂಮಿ ಹಸ್ತಾಂತರದ ಪ್ರಕ್ರಿಯೆ 45 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ. ಬಾಂಗ್ಲಾದೇಶ ನುಸುಳುಕೋರರ ಹಾವಳಿಯನ್ನು ತಡೆಯಲು ಈ ಕ್ರಮ ಅಗತ್ಯವಾಗಿದೆ. ಈ ಹಿಂದಿನ ಟಿಎಂಸಿ ಸರ್ಕಾರ ಬಿಎಸ್ಎಫ್ಗೆ ಭೂಮಿ ನೀಡಲು ಸ್ಪಷ್ಟವಾಗಿ ನಿರಾಕರಿಸಿತ್ತು. ಆದರೆ, ರಾಜಕೀಯ ಕಾರಣಗಳಿಗಾಗಿ ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುವುದು ಅಕ್ಷಮ್ಯ ಅಪರಾಧ. ಬಾಂಗ್ಲಾದೇಶದೊಂದಿಗೆ ಭಾರತವು ಹಂಚಿಕೊಂಡಿರುವ 4,096 ಕಿ.ಮೀ. ಉದ್ದದ ಗಡಿಯಲ್ಲಿ ಪಶ್ಚಿಮ ಬಂಗಾಳವೊಂದೇ ಅತಿ ಹೆಚ್ಚು ಅಂದರೆ 2,216 ಕಿ.ಮೀ. ಪಾಲನ್ನು ಹೊಂದಿದೆ ಎಂಬುದು ಗಮನಾರ್ಹ..ಬೇಲಿ ನಿರ್ವಣದಿಂದ ನುಸುಳುವಿಕೆ ತಡೆಗಟ್ಟಬಹುದಲ್ಲದೆ, ಜಾನುವಾರು ಕಳ್ಳಸಾಗಣೆ ಮತ್ತು ಮಾದಕ ದ್ರವ್ಯಗಳ ಸಾಗಾಟಕ್ಕೂ ಕಡಿವಾಣ ಹಾಕಬಹುದು. ಬೇಲಿ ಇದ್ದಾಗ ಬಿಎಸ್ಎಫ್ ಯೋಧರಿಗೆ ಗಸ್ತು ತಿರುಗಲು ಮತ್ತು ಕಣ್ಗಾವಲು ಇಡಲು ನಿರ್ದಿಷ್ಟ ವ್ಯಾಪ್ತಿ ಸಿಗುತ್ತದೆ. ಬೇಲಿ ಇಲ್ಲದ ಕಡೆಗಳಲ್ಲಿ ಜನವಸತಿ ಪ್ರದೇಶಗಳು ಮತ್ತು ಹೊಲಗಳು ಹಂಚಿಹೋಗಿ ರುವುದರಿಂದ ನುಸುಳುಕೋರರನ್ನು ಗುರುತಿಸುವುದು ಕಷ್ಟಕರವಾಗುತ್ತದೆ. ಭೂಮಿ ಹಸ್ತಾಂತರದ ಪ್ರಕ್ರಿಯೆ 45 ದಿನಗಳಲ್ಲಿ ಮುಗಿದರೆ, ಕುಂಟುತ್ತ ಸಾಗಿದ್ದ ಬೇಲಿ ನಿರ್ಮಾಣ ಕಾರ್ಯಕ್ಕೆ ವೇಗ ಸಿಗುತ್ತದೆ. ಗಡಿಯ ಕೆಲವು ಕಡೆಗಳಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಹಳ್ಳಿಗಳು ಎಷ್ಟೊಂದು ಹತ್ತಿರವಾಗಿವೆ ಎಂದರೆ, ಒಂದು ಮನೆಯ ಮುಂಭಾಗದ ಬಾಗಿಲು ಭಾರತದಲ್ಲಿದ್ದರೆ ಹಿಂಭಾಗದ ಬಾಗಿಲು ಬಾಂಗ್ಲಾದೇಶದಲ್ಲಿರುವ ಉದಾಹರಣೆಗಳಿವೆ. ಇದು ಭದ್ರತಾ ಪಡೆಗಳಿಗೆ ದೊಡ್ಡ ತಲೆನೋವಾಗಿದೆ. ಅಲ್ಲದೆ, ನುಸುಳುವಿಕೆಯ ಹಿಂದೆ ಸ್ಥಳೀಯ ಮಟ್ಟದ ಬಲವಾದ ಏಜೆಂಟ್ಗಳು ಮತ್ತು ಕಳ್ಳಸಾಗಣೆದಾರರ ಜಾಲ ಸಕ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಕಣ್ಗಾವಲು ಹೆಚ್ಚಿದ್ದರೂ, ಭೌತಿಕ ಬೇಲಿಯ ಕೊರತೆ ಭದ್ರತೆಯಲ್ಲಿ ಲೋಪವನ್ನು ಉಂಟುಮಾಡುತ್ತಿತ್ತು..ನದಿಗಳು ಮತ್ತು ಕಡಿದಾದ ಪ್ರದೇಶಗಳಲ್ಲಿ ಬೇಲಿ ಹಾಕಲು ಸಾಧ್ಯವಿಲ್ಲದ ಕಡೆಗಳಲ್ಲಿ ಲೇಸರ್ ಸೆನ್ಸರ್ಗಳು, ಥರ್ಮಲ್ ಇಮೇಜಿಂಗ್ ಕ್ಯಾಮರಾಗಳು ಮತ್ತು ಡ್ರೋನ್ಗಳ ಮೂಲಕ ವರ್ಚುವಲ್ ಬೇಲಿ ನಿರ್ವಿುಸಬೇಕು. ಗಡಿ ಭಾಗದ ಜನರಿಗೆ ಪರ್ಯಾಯ ಜೀವನೋಪಾಯ ಕಲ್ಪಿಸಿ, ಅವರು ಕಳ್ಳಸಾಗಣೆ ಜಾಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಗ್ರಾಮ ರಕ್ಷಣಾ ಸಮಿತಿಗಳನ್ನು ಬಲಪಡಿಸುವುದು ಮುಖ್ಯ. ಕೇಂದ್ರದ ಬಿಎಸ್ಎಫ್ ಮತ್ತು ರಾಜ್ಯದ ಪೊಲೀಸ್ ಪಡೆಗಳ ನಡುವೆ ಗುಪ್ತಚರ ಮಾಹಿತಿ ಹಂಚಿಕೆಯಲ್ಲಿ ಹೆಚ್ಚಿನ ಸಮನ್ವಯ ಇರಬೇಕು. ಗಡಿ ಭಾಗದಲ್ಲಿ ವಾಸಿಸುವ ಜನರ ಆಧಾರ್ ಮತ್ತು ಇತರ ಗುರುತಿನ ಚೀಟಿಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಯಬೇಕು, ಇದರಿಂದ ಬಾಂಗ್ಲಾದೇಶದ ನುಸುಳುಕೋರರು ಸುಲಭವಾಗಿ ಸ್ಥಳೀಯ ದಾಖಲೆ ಪಡೆಯುವುದನ್ನು ತಡೆಯಬಹುದು. ಒಟ್ಟಾರೆಯಾಗಿ, ರಾಜ್ಯ ಸರ್ಕಾರವು ಭೂಮಿ ನೀಡಲು ಮುಂದಾಗಿರುವುದು ದಶಕಗಳ ಕಾಲದ ಗಡಿ ಭದ್ರತಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಲಿದೆ.