ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಬೂಸ್ಟರ್ ಹಾಗೂ ಸಿಡಿತಲೆಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಈ ಮೂಲಕ ರಷ್ಯಾದ ಮೇಲಿದ್ದ ದಶಕಗಳ ಅವಲಂಬನೆಗೆ ತೆರೆ ಎಳೆಯಲಾಗಿದೆ. ಅಲ್ಲದೆ, ಭಾರತವು ತನ್ನ 5ನೇ ತಲೆಮಾರಿನ ಅಡ್ವಾನ್ಸ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಎಂಸಿಎ) ಸ್ಟೆಲ್ತ್ ಯುದ್ಧವಿಮಾನ ಸಿದ್ಧಪಡಿಸುತ್ತಿದೆ. ಅಮೆರಿಕದ ಅತ್ಯಾಧುನಿಕ ಎಫ್-35 ಯುದ್ಧವಿಮಾನದಲ್ಲಿರುವ ಪ್ರಮುಖ ನ್ಯೂನತೆಗಳನ್ನು ಮೀರಿಸಿ ಭಾರತದ ಎಎಂಸಿಎ ವಿನ್ಯಾಸಗೊಳಿಸಲಾಗುತ್ತಿದ್ದು, ಕಡಿಮೆ ರಿಪೇರಿ ಮತ್ತು ಹೆಚ್ಚು ಸಮರ ಸಾಮರ್ಥ್ಯ ಇದರ ಪ್ರಮುಖ ಅಂಶವಾಗಿದೆ. ಜಾಗತಿಕ ರಾಜಕೀಯದ ಸನ್ನಿವೇಶಗಳು ವೇಗವಾಗಿ ಬದಲಾಗುತ್ತಿದ್ದು, ಭಾರತ ಬಹುಆಯಾಮದ ಬೆದರಿಕೆಯನ್ನು ಎದುರಿಸುತ್ತಿದೆ. ಭಾರತದ ನೆರೆರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಹಾಗೂ ಭೂತಾನ್ನಲ್ಲಿ ಚೀನಾದ ಪ್ರಭಾವ ಹಾಗೂ ಹೂಡಿಕೆ ಹೆಚ್ಚುತ್ತಿದೆ. ಇತ್ತೀಚೆಗೆ, ಬಾಂಗ್ಲಾದೇಶದಲ್ಲೂ ಭಾರತವಿರೋಧಿ ಚಟುವಟಿಕೆಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಭಾರತ ರಕ್ಷಣಾ ಕ್ಷೇತ್ರದಲ್ಲಿ ಅನ್ಯರಾಷ್ಟ್ರಗಳ ಅವಲಂಬನೆಯನ್ನು ತಪ್ಪಿಸಿ ಸ್ವಂತ ಬಲದ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರ, ಯುದ್ಧವಿಮಾನಗಳನ್ನು ಹೊಂದುವುದು ಅಗತ್ಯವಾಗಿದ್ದು, ಈಗಿನ ಬೆಳವಣಿಗೆಗಳು ಭಾರತದ ಬಲವನ್ನು ಹೆಚ್ಚಿಸಿವೆ.