ವೀವ್ಸ್​​ ಹುಚ್ಚಿಗೆ ಅಮಾಯಕನ ಜೀವ ತೆಗೆದ ಪ್ರಕರಣ: 21 ದಿನಗಳ ಬಳಿಕ ಆರೋಪಿ ಶಿಮ್ಜಿತಾಗೆ ಸಿಕ್ತು ಜಾಮೀನು! Deepak death Case

ದೀಪಕ್​ ಸಾವು ಪ್ರಕರಣದಲ್ಲಿ ( Deepak death Case  ) 21 ದಿನಗಳ ಬಳಿಕ ಆರೋಪಿ ಶಿಮ್ಜಿತಾಗೆ ಸಿಕ್ತು ಜಾಮೀನು
ದೀಪಕ್​ ಸಾವು ಪ್ರಕರಣದಲ್ಲಿ ( Deepak death Case ) 21 ದಿನಗಳ ಬಳಿಕ ಆರೋಪಿ ಶಿಮ್ಜಿತಾಗೆ ಸಿಕ್ತು ಜಾಮೀನು
Published on

ಪ್ರಮುಖ ಮುಖ್ಯಾಂಶಗಳು

  • ಇಡೀ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ ಕೇರಳ ಮೂಲದ ದೀಪಕ್​ ಸಾವು ಪ್ರಕರಣ
  • ತನ್ನ ವೀವ್ಸ್​ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸಿದ ಆರೋಪಿ ಶಿಮ್ಜಿತಾ ಮುಸ್ತಫಾ
  • ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್​ ಸಾವಿಗೆ ಶರಣಾಗಿದ್ದು ಅನೇಕರ ಮನಕಲಕಿತು
  • ಸುಮಾರು 21 ದಿನಗಳ ಕಾಲ ಜೈಲಿನಲ್ಲಿದ್ದ ಆರೋಪಿ ಶಿಮ್ಜಿತಾಗೆ ಜಾಮೀನು ಕೊಟ್ಟ ನ್ಯಾಯಾಲಯ
ಕೊಚ್ಚಿ: ಕೇರಳ ಮೂಲದ ದೀಪಕ್​ ಸಾವು ಪ್ರಕರಣ ( Deepak death Case ) ಇಡೀ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದು ನಿಮಗೆಲ್ಲರಿಗೂ ಗೊತ್ತಿದೆ. ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್​ ಸಾವಿಗೆ ಶರಣಾದನು. ತನ್ನ ವೀವ್ಸ್​ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸಿದ ಆರೋಪಿ ಶಿಮ್ಜಿತಾ ಮುಸ್ತಫಾ ವಿರುದ್ಧ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಯಿತು. ಈ ಪ್ರಕರಣದಲ್ಲಿ ಬಂಧನವಾಗಿದ್ದ ಶಿಮ್ಜಿತಾಗೆ ಇದೀಗ ನ್ಯಾಯಾಲಯ ಜಾಮೀನು ನೀಡಿದೆ.
ಸುಮಾರು 21 ದಿನ ಜೈಲಿನಲ್ಲಿ ಕಾಲ ಕಳೆದ ಬಳಿಕ ಆರೋಪಿ ಶಿಮ್ಜಿತಾಗೆ ಕೋಯಿಕ್ಕೋಡ್ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ದೀಪಕ್ ಸಾವಿನ ಬಗ್ಗೆ ಆತನ ಕುಟುಂಬ ಸಲ್ಲಿಸಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಮ್ಜಿತಾಳನ್ನು ಬಂಧಿಸಲಾಗಿತ್ತು. ದೀಪಕ್ ಆತ್ಮಹತ್ಯೆಗೆ ಶಿಮ್ಜಿತಾ ತನ್ನ ಇನ್​ಸ್ಟಾಗ್ರಾಂ ವಿಡಿಯೋದಲ್ಲಿ ಮಾಡಿದ ಆರೋಪಗಳು ಕಾರಣ ಎಂದು ಕುಟುಂಬ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಯನ್ನು ಬಂಧಿಸಿದ್ದರು.
ಶಿಮ್ಜಿತಾಳ ಲ್ಯಾಪ್‌ಟಾಪ್ ಮತ್ತು ಫೋನ್‌ನ ವಿಧಿವಿಜ್ಞಾನ ಪರೀಕ್ಷೆಯ ವರದಿ ಬರುವವರೆಗೂ ಆಕೆಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ವಾದಿಸಿತ್ತು. ಆದಾಗ್ಯೂ, ಆಕೆ 21 ದಿನಗಳಿಂದ ಜೈಲಿನಲ್ಲಿದ್ದಾಳೆ ಮತ್ತು ವಿಧಿವಿಜ್ಞಾನ ವರದಿ ಲಭ್ಯವಾಗುವವರೆಗೆ ಆಕೆಯನ್ನು ರಿಮಾಂಡ್ ಮಾಡುವ ಅಗತ್ಯವಿಲ್ಲ ಎಂದು ಪ್ರತಿವಾದಿಯು ನ್ಯಾಯಾಲಯಕ್ಕೆ ತಿಳಿಸಿದರು. ಎರಡೂ ಕಡೆಯ ವಾದ ಆಲಿಸಿದ ಕೋಯಿಕ್ಕೋಡ್ ಪ್ರಧಾನ ಸೆಷನ್ಸ್ ನ್ಯಾಯಾಲಯ, ಜಾಮೀನು ನೀಡಿ ಆದೇಶಿಸಿದೆ.

ಏನಿದು ಪ್ರಕರಣ?

ಕಳೆದ ಜನವರಿ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್​ ಆಯಿತು. ಆರೋಪಿ ಶಿಮ್ಜಿತಾ, ಬಸ್ಸಿನಲ್ಲಿ ವ್ಯಕ್ತಿಯೊಬ್ಬ ( ದೀಪಕ್​ ) ನನ್ನನ್ನು ಅನನುಚಿತವಾಗಿ ಸ್ಪರ್ಶಿಸಿದನು ಎಂದು ವಿಡಿಯೋ ಮಾಡಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು ಎಂಬ ಕಮೆಂಟ್​ಗಳಿಂದ ತುಂಬಿತು. ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು. ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ನನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ದೀಪಕ್, ಮನನೊಂದು ಆತ್ಮಹತ್ಯೆಗೆ ಶರಣಾದರು. ಈ ಘಟನೆ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.

ಮೃತ ದೀಪಕ್​ ವಿರುದ್ಧವೇ ದೂರು

ತನ್ನ ತಪ್ಪಿನಿಂದ ಓರ್ವ ಅಮಾಯಕನ ಜೀವ ಹೋಗಿದ್ದರು ಕೂಡ ಅದರ ಪಶ್ಚಾತಾಪವಿಲ್ಲದೇ ಶಿಮ್ಜಿತಾ ವರ್ತಿಸಿದಳು. ಮೃತ ದೀಪಕ್​ ವಿರುದ್ಧವೇ ಆಕೆ ದೂರು ನೀಡಿದಳು. ಘಟನೆ ನಡೆದ ದಿನ ಬೆಳಗ್ಗೆ ನಾನು ಪಯ್ಯನ್ನೂರು ರೈಲು ನಿಲ್ದಾಣದಿಂದ ಬಸ್ ಹತ್ತಿದೆ. ಪಯ್ಯನ್ನೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಓರ್ವ ವ್ಯಕ್ತಿ ನನ್ನನ್ನು ಅನುಚಿತವಾಗಿ ಮುಟ್ಟಿದನು. ಇದಾದ ನಂತರ, ನಾನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ ಎಂದು ಶಿಮ್ಜಿತಾ ದೂರಿನಲ್ಲಿ ಉಲ್ಲೇಖಿಸಿದ್ದಳು.

ಆರೋಪಿ ಬಂಧನ

ಕೇರಳದ ವಡಕರದ ಮುತ್ತುಂಗಲ್ ಪಶ್ಚಿಮದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿದ್ದ ಆರೋಪಿ ಶಿಮ್ಜಿತಾ ಮುಸ್ತಫಾಳನ್ನು ಜನವರಿ 22ರಂದು ಕೇರಳ ಪೊಲೀಸರು ಬಂಧಿಸಿದರು. ಬಳಿಕ ಆಕೆಯನ್ನು ರಿಮಾಂಡ್‌ನಲ್ಲಿ ಇಡಲಾಗಿತ್ತು. ಇದಕ್ಕೂ ಮುನ್ನ ದೀಪಕ್ ಅವರ ತಾಯಿ, ಶಿಮ್ಜಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ, ಶಿಮ್ಜಿತಾ ತಲೆಮರೆಸಿಕೊಂಡಿದ್ದಳು. ಆಕೆಗೆ ವಿದೇಶಿ ಸಂಪರ್ಕಗಳು ಇದ್ದ ಕಾರಣ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಆದರೆ, ವಡಕರದಲ್ಲಿದ್ದಾರೆ ಎಂಬ ಸುಳಿವು ದೊರೆತ ನಂತರ ಆಕೆಯನ್ನು ಬಂಧಿಸಲಾಯಿತು. ಬಳಿಕ, ಕೊಯಿಲಾಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಆಕೆಯನ್ನು 14 ದಿನಗಳ ಕಾಲ ಮಂಜೇರಿ ಮಹಿಳಾ ಜೈಲಿಗೆ ಕಳುಹಿಸಲಾಯಿತು. ಈ ಹಿಂದೆ ಒಮ್ಮೆ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಇದೀಗ ಸುಮಾರು 21 ದಿನಗಳ ಬಳಿಕ ಕೋಯಿಕ್ಕೊಡ್​ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net