ಭಾರತದ ಈ ದ್ವೀಪಕ್ಕೆ ಕಾಲಿಟ್ಟರೆ ಸಾವು ಖಚಿತ: ಹೋದವರ ಹೆಣವೂ ಸಿಕ್ಕಿಲ್ಲ, ಅಷ್ಟಕ್ಕೂ ಇಲ್ಲಿನ ಭಯಾನಕ ರಹಸ್ಯವೇನು? Island In India

ಭಾರತದ ಈ ದ್ವೀಪಕ್ಕೆ ಕಾಲಿಟ್ಟರೆ ಸಾವು ಖಚಿತ: ಹೋದವರ ಹೆಣವೂ ಸಿಕ್ಕಿಲ್ಲ, ಅಷ್ಟಕ್ಕೂ ಇಲ್ಲಿನ ಭಯಾನಕ ರಹಸ್ಯವೇನು? Island In India
ಭಾರತದ ಈ ದ್ವೀಪಕ್ಕೆ ಕಾಲಿಟ್ಟರೆ ಸಾವು ಖಚಿತ: ಹೋದವರ ಹೆಣವೂ ಸಿಕ್ಕಿಲ್ಲ, ಅಷ್ಟಕ್ಕೂ ಇಲ್ಲಿನ ಭಯಾನಕ ರಹಸ್ಯವೇನು? Island In India
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಈ ನಿಗೂಢ ದ್ವೀಪಕ್ಕೆ ಹೋದರೆ ಸಾವು ಖಚಿತ ಇಂದಿಗೂ ಭೇದಿಸಲಾಗದ ರಹಸ್ಯ
  • ಇಂದಿಗೂ ಯಾರಿಗೂ ಬಿಡಿಸಲು ಸಾಧ್ಯವಾಗದ ರಹಸ್ಯ ಭಾರತದ ಈ ದ್ವೀಪಕ್ಕೆ ಹೋದರೆ ಸಾವು ಖಚಿತ
  • ಕಳೆದ ಅರವತ್ತು ಸಾವಿರ ವರ್ಷಗಳಿಂದ ಹೊರ ಜಗತ್ತಿನ ಸಂಪರ್ಕವೇ ಇಲ್ಲದ ಭಾರತದ ಮರಣಕೂಪ ದ್ವೀಪ
  • ಹೋದವರು ಯಾರೂ ಮರಳಿ ಬಂದಿಲ್ಲ ಭಾರತದ ನಿಗೂಢ ದ್ವೀಪದ ಭಯಾನಕ ಸತ್ಯ ಇಲ್ಲಿದೆ
Island In India : ಮರಣದ ಕರೆಯಂತೆ ಕಾಯುವ ಆ ನಿಗೂಢ ದ್ವೀಪ! ಹೌದು, ಈ ಭೂಮಿಯ ಮೇಲೆ ಹೆಜ್ಜೆ ಇಟ್ಟರೆ ಸಾಕು, ಮರಳಿ ಬರಲು ಸಾಧ್ಯವೇ ಇಲ್ಲ ಎನ್ನುವಂತಹ ಭಯಾನಕ ಜಾಗವೊಂದು ಭಾರತದಲ್ಲೇ ಇದೆ. ಅದೇ ಬಂಗಾಳ ಕೊಲ್ಲಿಯ ನೀಲಿ ಜಲರಾಶಿಯ ಮಧ್ಯೆ ಕಗ್ಗತ್ತಲ ರಹಸ್ಯದಂತೆ ಅಡಗಿರುವ 'ನಾರ್ತ್ ಸೆಂಟಿನೆಲ್ ಐಲ್ಯಾಂಡ್'. ಸುಂದರ ಕಡಲತೀರ ಮತ್ತು ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಈ ದ್ವೀಪಕ್ಕೆ ಹೋಗಿ ಜೀವಂತವಾಗಿ ಮರಳಿದವರಿಲ್ಲ! ಅಷ್ಟೇ ಏಕೆ, ಇಲ್ಲಿ ಹತ್ಯೆಯಾದವರ ಹೆಣಗಳೂ ಸಹ ಇಂದಿಗೂ ಯಾರಿಗೂ ಸಿಕ್ಕಿಲ್ಲ ಎನ್ನುವುದೇ ಇಡೀ ಜಗತ್ತನ್ನು ನಡುಗಿಸುವ ಸತ್ಯ.
ಈ ಪುಟ್ಟ ದ್ವೀಪದಲ್ಲಿ ಇಂದಿಗೂ ಆಧುನಿಕ ಜಗತ್ತಿನ ಸಂಪರ್ಕವೇ ಇಲ್ಲದ, ಕಲ್ಲಿನ ಯುಗದ ಬದುಕನ್ನು ಸಾಗಿಸುತ್ತಿರುವ ಆದಿವಾಸಿ ಬುಡಕಟ್ಟು ಸಮುದಾಯ ವಾಸಿಸುತ್ತಿದೆ. ಹೊರ ಜಗತ್ತಿನ ಯಾವುದೇ ಮನುಷ್ಯ ತನ್ನ ದ್ವೀಪಕ್ಕೆ ಕಾಲಿಟ್ಟರೆ ಸಾಕು, ಅದನ್ನು ತಮ್ಮ ಮೇಲಿನ ಆಕ್ರಮಣ ಎಂದೇ ಭಾವಿಸುವ ಇವರು, ಬಿಲ್ಲು-ಬಾಣ ಹಾಗೂ ಈಟಿಗಳೊಂದಿಗೆ ಮುಗಿಬಿದ್ದು ನಿರ್ದಕ್ಷಿಣ್ಯವಾಗಿ ಕೊಂದು ಹಾಕುತ್ತಾರೆ. ಹೊರಗಿನವರನ್ನು ಕಂಡರೆ ಬೆಂಕಿ ಕಾರುವ ಈ ಆದಿವಾಸಿಗಳ ಹಿಂಸಾತ್ಮಕ ಸ್ವಭಾವದಿಂದಾಗಿ, ಭಾರತ ಸರ್ಕಾರ ಕೂಡ ಈ ದ್ವೀಪಕ್ಕೆ ಹೋಗುವುದನ್ನು ಕಾನೂನುಬಾಹಿರ ಎಂದು ಘೋಷಿಸಿದೆ. ತಂತ್ರಜ್ಞಾನದ ತುತ್ತತುದಿಯಲ್ಲಿರುವ ಇಂದಿನ ಯುಗದಲ್ಲೂ ಭೇದಿಸಲಾಗದ ಜೀವಂತ ಮರಣಕೂಪವಾಗಿ ಈ ದ್ವೀಪ ಉಳಿದುಕೊಂಡಿದೆ.
ಮಾನವಶಾಸ್ತ್ರಜ್ಞರ ಪ್ರಕಾರ, ಈ ದ್ವೀಪದಲ್ಲಿರುವ ಆದಿವಾಸಿಗಳು ಕಳೆದ 60,000 ವರ್ಷಗಳಿಂದ ಹೊರ ಜಗತ್ತಿನೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿಲ್ಲ. ಹೀಗಾಗಿಯೇ ಪ್ರವಾಸಿಗರು ಇರಲಿ, ಮೀನುಗಾರರು ಕೂಡ ಪ್ರಾಣಭಯದಿಂದ ಈ ದ್ವೀಪದ ಹತ್ತಿರವೂ ಸುಳಿಯುವುದಿಲ್ಲ. ಕಳೆದ 2006ರಲ್ಲಿ ದಾರಿ ತಪ್ಪಿ ಈ ದ್ವೀಪದ ದಡ ಸೇರಿದ್ದ ಇಬ್ಬರು ಮೀನುಗಾರರನ್ನು ಇಲ್ಲಿನ ಬುಡಕಟ್ಟು ಜನರು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದರು. ಆ ಘಟನೆಯೇ ಇವರ ಭೀಕರತೆಗೆ ಸಂಬಂಧಿಸಿದಂತೆ ಇಡೀ ಜಗತ್ತಿಗೆ ಸಿಕ್ಕ ಕೊನೆಯ ಕರಾಳ ಸಾಕ್ಷಿಯಾಗಿದೆ.
ತಮ್ಮ ದ್ವೀಪದ ಮೇಲೆ ಕಡಿಮೆ ಎತ್ತರದಲ್ಲಿ ಹಾರುವ ವಿಮಾನಗಳು ಅಥವಾ ಹೆಲಿಕಾಪ್ಟರ್‌ಗಳು ಕಂಡುಬಂದರೂ ಸಹ, ಇವರು ಆಕಾಶದ ಕಡೆಗೆ ಬಿಲ್ಲು-ಬಾಣಗಳನ್ನು ಹೂಡುತ್ತಾರೆ ಮತ್ತು ಕಲ್ಲುಗಳನ್ನು ತೂರಿ ತಮ್ಮ ಆಕ್ರೋಶ ಹೊರಹಾಕುತ್ತಾರೆ. ಭೌಗೋಳಿಕವಾಗಿ ಈ ದ್ವೀಪ ಭಾರತಕ್ಕೆ ಸೇರಿದ್ದರೂ ಸಹ, ಇಲ್ಲಿನ ಜನರ ಭಾಷೆ, ಸಂಸ್ಕೃತಿ ಅಥವಾ ಆಚರಣೆಗಳ ಬಗ್ಗೆ ಇಂದಿಗೂ ಹೊರ ಜಗತ್ತಿಗೆ ಯಾವುದೇ ಮಾಹಿತಿ ಇಲ್ಲ. ಇಡೀ ಜಗತ್ತು ಡಿಜಿಟಲ್ ಯುಗದಲ್ಲಿ ಮುನ್ನುಗ್ಗುತ್ತಿದ್ದರೂ, ಇವರು ಮಾತ್ರ ಇಂದಿಗೂ ಕಾಲದ ಚಕ್ರಕ್ಕೆ ಸಿಲುಕದ ನಿಗೂಢ ಜಗತ್ತಿನಂತೆ ಉಳಿದುಕೊಂಡಿದ್ದಾರೆ.
ಕಲ್ಲಿನ ಯುಗದ ಪರಿಸ್ಥಿತಿಯಲ್ಲೇ ಬದುಕುತ್ತಿರುವ ಈ ನಿಗೂಢ ಬುಡಕಟ್ಟು ಜನರನ್ನು ಸಂಪರ್ಕಿಸಲು ಭಾರತ ಸರ್ಕಾರ ಹಲವು ಬಾರಿ ಪ್ರಯತ್ನ ನಡೆಸಿದೆಯಾದರೂ ಎಲ್ಲವೂ ವಿಫಲವಾಗಿವೆ. ಅವರ ಆಕ್ರಮಣಕಾರಿ ಸ್ವಭಾವ ಮತ್ತು ರಕ್ಷಣೆಯ ದೃಷ್ಟಿಯಿಂದ, ಸರ್ಕಾರವು ಈ ದ್ವೀಪದ ಸುತ್ತಲೂ ಮೂರು ಮೈಲಿ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿದೆ. ಸದ್ಯಕ್ಕೆ ಈ ಗಡಿಯೊಳಗೆ ಪ್ರವೇಶಿಸುವುದು ಅಥವಾ ಅಲ್ಲಿನ ಜನರನ್ನು ಸಂಪರ್ಕಿಸಲು ಯತ್ನಿಸುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.
ಹೊರ ಜಗತ್ತಿನಿಂದ ಸಂಪೂರ್ಣವಾಗಿ ಒಂಟಿಯಾಗಿರುವ ಕಾರಣ, ಸಾಮಾನ್ಯ ಸಾಂಕ್ರಾಮಿಕ ರೋಗಗಳು ಹರಡಿದರೂ ಇಡೀ ಸಮುದಾಯವೇ ನಾಶವಾಗುವ ದೊಡ್ಡ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದಾಗ್ಯೂ, ಹೊರಗಿನವರನ್ನು ಎದುರಿಸುವಲ್ಲಿ ಇವರು ಅಸಾಧಾರಣ ಧೈರ್ಯ ಮತ್ತು ಪ್ರತಿರೋಧವನ್ನು ತೋರುತ್ತಾ ಬಂದಿದ್ದಾರೆ. ಕೃಷಿ ಅರಿಯದ ಇವರು ಕಾಡಿನಲ್ಲಿ ಸಿಗುವ ಆಹಾರವನ್ನು ಹುಡುಕಿ ತಿನ್ನುತ್ತಾರೆ ಹಾಗೂ ಬೇಟೆಯಾಡುವುದು ಮತ್ತು ಮೀನು ಹಿಡಿಯುವುದನ್ನೇ ತಮ್ಮ ಜೀವನೋಪಾಯವಾಗಿಸಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net