ಕಲುಷಿತ ನೀರು ಸೇವಿಸಿ ಸಾವು ಪ್ರಕರಣ: ಮಧ್ಯಪ್ರದೇಶ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್! High Court

ಕಲುಷಿತ ನೀರಿನ ಸೇವನೆಯಿಂದ ಸಾವನ್ನಪ್ಪಿದ ಇಂದೋರ್​ ನಾಗರಿಕರು
ಕಲುಷಿತ ನೀರಿನ ಸೇವನೆಯಿಂದ ಸಾವನ್ನಪ್ಪಿದ ಇಂದೋರ್​ ನಾಗರಿಕರು
Published on
ಇಂದೋರ್: ಇಂದೋರ್​ನಲ್ಲಿ ಇತ್ತಿಚೇಗೆ ಕಲುಷಿತ ನೀರು ಸೇವಿಸಿ ಹಲವು ಮಂದಿ ಸಾವನ್ನಪ್ಪಿದ ಪ್ರಕರಣ ಮರುಕಳಿಸದಂತೆ ತಡೆಯಲು ಕೈಗೊಂಡ ಕ್ರಮಗಳನ್ನು ವಿವರಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ (High Court) ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.
ತೊಂದರೆಗೀಡಾದ ಸಂತ್ರಸ್ತರಿಗೆ ತುರ್ತು ಪರಿಹಾರ ಕ್ರಮ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕೈಗೊಂಡ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವರಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರ ನ್ಯಾಯಪೀಠ ಸೂಚಿಸಿದೆ.
ಇಡೀ ರಾಜ್ಯದಲ್ಲಿ ನೀರು ಕಲುಷಿತಗೊಳ್ಳದಂತೆ ತಡೆಯಲು ಹಾಗೂ ಉಳಿದ ಸ್ಥಳಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ರಾಜ್ಯಮಟ್ಟದಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಅವರು ಈ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಆದೇಶಿಸಿದೆ.
ಅಲ್ಲದೆ ನೀರು ದೊರೆಯದ ಪ್ರದೇಶಗಳಿಗೆ ಸರ್ಕಾರದ ವೆಚ್ಚದಲ್ಲಿ ಟ್ಯಾಂಕರ್‌ಗಳ ಮೂಲಕ ಅಥವಾ ಪ್ಯಾಕೇಜ್ ಕುಡಿಯುವ ನೀರನ್ನು ತಕ್ಷಣ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ಮಾಲಿನ್ಯಗೊಂಡ ಪೈಪ್‌ಲೈನ್‌ಗಳು, ಮೇಲ್ಮಟ್ಟದ ಟ್ಯಾಂಕ್‌ಗಳು, ಬೋರ್‌ವೆಲ್‌ಗಳು ಹಾಗೂ ನದಿಗಳಂತಹ ನೀರಿನ ಮೂಲಗಳ ಬಳಕೆಯನ್ನು ನಿಲ್ಲಿಸುವಂತೆ ಆದೇಶಿಸಿದೆ. ಬಾಧಿತ ಪ್ರದೇಶದ ನಿವಾಸಿಗಳ ಆರೋಗ್ಯ ತಪಾಸಣೆಗೆ ಶಿಬಿರಗಳನ್ನು ನಡೆಸಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಲುಷಿತ ನೀರು ಸೇವಿಸಿದವರಿಗೆ ಉಚಿತ ಚಿಕತ್ಸೆ ನೀಡಬೇಕು ಎಂದು ತಿಳಿಸಿದೆ.
ಭಗೀರಥಪುರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಮಾಲಿನ್ಯಗೊಂಡ ನೀರಿನಿಂದ ಏಳು ಮಂದಿ ಸಾವನ್ನಪ್ಪಿ ಹಲವರಿಗೆ ಅತಿಸಾರ ಸೇರಿದಂತೆ ಕಾಯಿಲೆಗಳು ಕಾಣಿಸಿಕೊಂಡಿವೆ ಎಂಬುದನ್ನು ಗಮನಿಸಿ ಸ್ವಚ್ಛ ಕುಡಿಯುವ ನೀರು ಜೀವಿಸುವ ಹಕ್ಕಿನ ಅವಿಭಾಜ್ಯ ಭಾಗ. ಇಂತಹ ಘಟನೆಗಳು ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಹೇಳುತ್ತವೆ ಎಂದಿತು. ಇದು ಇಂದೋರ್‌ ಮಾತ್ರವಲ್ಲದೆ ಇಡೀ ರಾಜ್ಯದ ಸಮಸ್ಯೆಯಾಗಿದೆ ಎಂದ ಪೀಠ ಮುಂದಿನ ವಿಚಾರಣೆಗೂ ಮುನ್ನವೇ ತಾನು ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net