

ನವದೆಹಲಿ: ಸಿಕ್ಕಿಂನಲ್ಲಿ ಸೋಮವಾರ ನಡೆದ ಸುರಂಗ (ಟನಲ್) ಕುಸಿತದಲ್ಲಿ 20 ಕಾರ್ವಿುಕರು ಪ್ರಾಣ ಕಳೆದುಕೊಂಡಿದ್ದಾರೆ. ಸೂಕ್ಷ್ಮ ಭೂಪ್ರದೇಶಗಳಲ್ಲಿ ಕೈಗೊಳ್ಳುವ ಬೃಹತ್ ಯೋಜನೆಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಮತ್ತು ವೈಜ್ಞಾನಿಕ ಅಧ್ಯಯನದ ಕೊರತೆಯು ಇಂತಹ ದಾರುಣ ಘಟನೆಗಳಿಗೆ ಮುಖ್ಯ ಕಾರಣವಾಗುತ್ತಿದೆ. ದೇಶದಲ್ಲಿ ನಡೆದ ಇಂಥ ಪ್ರಮುಖ ದುರಂತಗಳು ಮತ್ತು ಇವುಗಳನ್ನು ತಡೆಯಲು ಇರುವ ಮಾಗೋಪಾಯಗಳ ಕುರಿತ ವಿವರ ಇಲ್ಲಿದೆ.
ಸಿಕ್ಕಿಂನ ಎನ್ಎಚ್ಪಿಸಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿದ್ದ 25 ಕಾರ್ವಿುಕರ ಪೈಕಿ 20 ಜನರ ಮೃತದೇಹಗಳನ್ನು ಮಂಗಳವಾರ ತಡರಾತ್ರಿ ಹೊರತೆಗೆಯಲಾಗಿದೆ. ಈ ಕಾರ್ವಿುಕರು ಸುರಂಗದ ವಿಭಿನ್ನ ಭಾಗಗಳಲ್ಲಿ ಸಿಲುಕಿಕೊಂಡಿದ್ದರು. ರಕ್ಷಣಾ ಸಿಬ್ಬಂದಿ 24 ಗಂಟೆಗಳಿಂದ ಇವರ ಬಳಿ ತಲುಪಲು ನಿರಂತರ ಶ್ರಮಿಸಿದರೂ, ಸುರಂಗದಲ್ಲಿ ವಿಷಕಾರಿ ಮಿಥೇನ್ ಅನಿಲ ತುಂಬಿರುವುದರಿಂದ ಹಲವು ರಕ್ಷಣಾ ಸಿಬ್ಬಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಅಷ್ಟೇ ಕಷ್ಟಪಟ್ಟು ಹೊರತರಲಾಯಿತು.
ಈ ದುರಂತ ಸಂಭವಿಸಿದ್ದು ನಾಮ್ಚಿ ಜಿಲ್ಲೆಯ ಸಮರ್ಡುಂಗ್- ಝೆೊಲುಂಗಯ್ನಲ್ಲಿ ನಿರ್ವಿುಸಲಾಗುತ್ತಿರುವ ತೀಸ್ತಾ ಹಂತ-6 ಯೋಜನೆಯ ‘ಆದಿತ್-3’ ಸುರಂಗದಲ್ಲಿ. ಸೋಮವಾರ ಮಧ್ಯಾಹ್ನ ಸುರಂಗದ ಬಂಡೆಗಳ ನಡುವೆ ಸಿಲುಕಿದ್ದ ಜ್ವಾಲಾಮುಖಿ ಸ್ವರೂಪದ ಮಿಥೇನ್ ಅನಿಲ ದಿಢೀರ್ ಸ್ಪೋಟಗೊಂಡಿತ್ತು. ಇದರಿಂದಾಗಿ ಸುತ್ತಲೂ ಹೊಗೆ ಮತ್ತು ವಿಷಕಾರಿ ಅನಿಲ ಆವರಿಸಿಕೊಂಡಿತು. ಆ ಸಮಯದಲ್ಲಿ ಸುರಂಗದಲ್ಲಿ 25 ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಇವರು ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್, ಉತ್ತರಾಖಂಡ ಮತ್ತು ಸಿಕ್ಕಿಂನ ನಾಮ್ಚಿ ಮೂಲದವರಾಗಿದ್ದಾರೆ. ಸುರಂಗದ ಪ್ರವೇಶ ದ್ವಾರದಿಂದ ಸುಮಾರು 1.5 ಕಿ.ಮೀ ಒಳಗೆ ಕಾರ್ವಿುಕರು ಸಿಲುಕಿದ್ದರು.
ದುರಂತವು ಫೇಸ್-4ಬಿ ಭಾಗದಲ್ಲಿ ಸಂಭವಿಸಿತು. ಇಲ್ಲಿ ಮಿಥೇನ್ ಅನಿಲದೊಂದಿಗೆ ಮೇಲ್ಛಾವಣಿಯಿಂದ ಬಿದ್ದ ಪಳೆಯುಳಿಕೆ/ಮಣ್ಣಿನ ರಾಶಿ ತುಂಬಿಕೊಂಡಿದೆ. ಈ ಅನಿಲವು ಆಮ್ಲಜನಕವನ್ನು ಸಂಪೂರ್ಣವಾಗಿ ಖಾಲಿ ಮಾಡುವುದರಿಂದ ಅಲ್ಲಿ ಉಸಿರಾಡಲು ಸಾಧ್ಯವಿಲ್ಲ. ಬ್ಲಾಸ್ಟ್-ಪೂ›ಫ್ ಬ್ಲೋವರ್ಗಳು ಮತ್ತು ವೆಂಟಿಲೇಶನ್ ಪೈಪ್ಗಳ ಮೂಲಕ ಹೊರಗಿನ ತಾಜಾ ಗಾಳಿಯನ್ನು ಒಳಗೆ ಕಳುಹಿಸಲಾಗುತ್ತಿದೆ. ಇದರಿಂದ ಅನಿಲದ ಸಾಂದ್ರತೆ ಕಡಿಮೆಯಾಗಲಿದೆ. ಇನ್ನಷ್ಟು ಮಣ್ಣು/ಕಲ್ಲು ಕುಸಿಯುವುದನ್ನು ತಡೆಯಲು ಶಾಟ್ಕ್ರೀಟ್ ಮತ್ತು ರಾಕ್ ಬೋಲ್ಟಿಂಗ್ ಮಾಡಲಾಗುತ್ತಿದೆ. ಸಣ್ಣ ಲೋಡರ್ಗಳು ಮತ್ತು ರೋಬಾಟಿಕ್ ಉಪಕರಣಗಳನ್ನು ಬಳಸಿ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ.
ಹಿಮಾಲಯದ ಸೂಕ್ಷ್ಮ ಭೂಪ್ರಕೃತಿ: ಹಿಮಾಲಯ ಪರ್ವತ ಶ್ರೇಣಿಗಳು ಭೌಗೋಳಿಕವಾಗಿ ‘ಯುವ ಪರ್ವತಗಳು. ಇಲ್ಲಿನ ಮಣ್ಣು ಮತ್ತು ಬಂಡೆಗಳು ಸಡಿಲವಾಗಿದ್ದು, ಭೂಕಂಪ ಮತ್ತು ಕುಸಿತಗಳಿಗೆ ಬೇಗನೆ ತುತ್ತಾಗುತ್ತವೆ. ಹಿಮಾಲಯ ಮತ್ತು ಈಶಾನ್ಯ ರಾಜ್ಯಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಅಗತ್ಯವಾಗಿದ್ದರೂ, ಪರಿಸರ ಸ್ನೇಹಿ ತಂತ್ರಜ್ಞಾನ ಹಾಗೂ ಕಠಿಣ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ.
ಸುರಂಗ ಕೊರೆಯುವಾಗ ಬಳಸುವ ತಂತ್ರಜ್ಞಾನ ಹಾಗೂ ಭೂಗರ್ಭದ ಬಂಡೆಗಳ ಸಾಮರ್ಥ್ಯವನ್ನು ಸರಿಯಾಗಿ ಅಂದಾಜಿಸದಿರುವುದು. ಸುರಂಗ ನಿರ್ಮಾಣದ ವೇಳೆ ತುರ್ತು ನಿರ್ಗಮನ ಮಾರ್ಗಗಳನ್ನು ನಿರ್ವಿುಸದೇ ಇರುವುದು ಪ್ರಾಣಹಾನಿ ಹೆಚ್ಚಲು ಮುಖ್ಯ ಕಾರಣ. ಅಲ್ಲದೆ, ದಿಢೀರ್ ಮೇಘಸ್ಪೋಟ, ಭೂಕುಸಿತ ಮತ್ತು ಮಳೆಯು ಸುರಂಗಗಳ ಮೇಲೆ ಒತ್ತಡ ಹೆಚ್ಚು ಮಾಡಿ ಅವುಗಳು ಕುಸಿಯುವಂತೆ ಮಾಡುತ್ತವೆ. ಕಾಮಗಾರಿ ನಡೆಯುವ ಸ್ಥಳಗಳಲ್ಲಿ ನಿರಂತರ ಗೇಜಿಂಗ್ ಮತ್ತು ಭೂವೈಜ್ಞಾನಿಕ ತಪಾಸಣೆ ನಡೆಯದೇ ಇರುವುದು ಕೂಡ ದುರಂತಗಳಿಗೆ ಆಹ್ವಾನ ನೀಡುತ್ತಿದೆ.
ಹೌದು, ಇದು ಹಿಮಾಲಯದ ಕಾಂಚನ ಜುಂಗಾ ಶ್ರೇಣಿಯ ಅಸ್ಥಿರ ಪರ್ವತಗಳು ಮತ್ತು ಕರಗುವ ನೀರ್ಗಲ್ಲುಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಭೂಮಿಯ ಆಳದಲ್ಲಿ ತೀವ್ರ ಒತ್ತಡವಿರುತ್ತದೆ.
ನೀರಿನ ವೇಗದ ಹರಿವಿಗಾಗಿ ಎರಡು ಸಮಾನಾಂತರ ಸುರಂಗಗಳನ್ನು ನಿರ್ವಿುಸಲಾಗುತ್ತಿದೆ. ಇವುಗಳ ಉದ್ದ ತಲಾ 5 ಕಿಲೋಮೀಟರ್.
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕಾ್ಯರಾ ದಿಂದ ಬಾಕೋಟ್ಗೆ ಸಂಪರ್ಕ ಕಲ್ಪಿಸುವ 4.5 ಕಿ.ಮೀ ಉದ್ದದ ನಿರ್ಮಾಣ ಹಂತದಲ್ಲಿದ್ದ ಚಾರ್ಧಾಮ್ ಯೋಜನೆಯ ಸುರಂಗದ ಪ್ರವೇಶ ದ್ವಾರದಿಂದ 200 ಮೀಟರ್ಗಳಷ್ಟು ಒಳಭಾಗದಲ್ಲಿ 2023ರ ನವೆಂಬರ್ 12ರಂದು (ದೀಪಾವಳಿಯ ದಿನ ಬೆಳಗ್ಗೆ ಸುಮಾರು 5.30ಕ್ಕೆ) ದಿಢೀರ್ ಭೂಕುಸಿತ ಸಂಭವಿಸಿ, 60 ಮೀಟರ್ಗಳಷ್ಟು ಭಾಗ ಕುಸಿದು ಬಿದ್ದಿತು. ಆ ಸಮಯದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ 41 ವಲಸೆ ಕಾರ್ವಿುಕರು ಸುರಂಗ ದೊಳಗೆ ಸಿಲುಕಿಕೊಂಡರು. ಅದೃಷ್ಟವಶಾತ್, ಸುರಂಗ ಕುಸಿದ ಭಾಗದ ನಂತರ 2 ಕಿ.ಮೀಗಳಷ್ಟು ವಿಶಾಲವಾದ ಜಾಗವಿತ್ತು. ಅಲ್ಲಿ ಬೆಳಕು ಮತ್ತು ಗಾಳಿಯ ಸೌಲಭ್ಯವಿತ್ತು. ಪ್ರಾರಂಭದಲ್ಲಿ 4-ಇಂಚಿನ ಪೈಪ್ಲೈನ್ ಮೂಲಕ ಆಮ್ಲಜನಕ, ನೀರು, ಒಣಹಣ್ಣು ಗಳು ಮತ್ತು ಗ್ಲೂಕೋಸ್ ಕಳುಹಿಸಲಾಯಿತು.
ನಂತರ 6-ಇಂಚಿನ ಹೊಸ ‘ಲೈಫ್ಲೈನ್ ಪೈಪ್ಲೈನ್’ ಕೊರೆದು, ಇದರ ಮೂಲಕ ಬೇಯಿಸಿದ ಬಿಸಿ ಆಹಾರ, ಔಷಧಗಳು, ವಾಕಿ-ಟಾಕಿ, ಪ್ರತ್ಯೇಕ ಕ್ಯಾಮರಾ ಮತ್ತು ಚಾರ್ಜರ್ಗಳನ್ನು ಒಳಗಡೆ ಕಳುಹಿಸಲಾಯಿತು. ಈ ರಕ್ಷಣಾ ಕಾರ್ಯಾಚರಣೆಯು 17 ದಿನಗಳ ಕಾಲ (2023ರ ನವೆಂಬರ್ 12ರಿಂದ 28) ನಡೆಯಿತು. ಇದರಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸಶಸ್ತ್ರ ಪಡೆಗಳು, ಮತ್ತು ಆಸ್ಟ್ರೇಲಿಯಾದ ಸುರಂಗ ತಜ್ಞ ಆರ್ನಾಲ್ಡ್ ಡಿಕ್ಸ್ ಭಾಗವಹಿಸಿದ್ದರು. ಕೊನೆಗೆ, 41 ಕಾರ್ವಿುಕರನ್ನೂ ಯಾವುದೇ ಗಂಭೀರ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಗೆ ತರಲಾಯಿತು. ಈ ರಕ್ಷಣಾ ಕಾರ್ಯಾಚರಣೆ ಆಧಾರಿತವಾಗಿ ಬಾಲಿವುಡ್ ಚಿತ್ರವೂ ನಿರ್ವಣವಾಗುತ್ತಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ರಂಬನ್ ಜಿಲ್ಲೆಯ ಖೋನಿ ನಾಲಾ ಬಳಿ 2022ರ ಮೇ 19ರಂದು ಚತುಷ್ಪಥ ಹೆದ್ದಾರಿ ಯೋಜನೆಯ ಭಾಗವಾಗಿ ‘ಟಿ-3’ ಎಂಬ ಸುರಂಗವನ್ನು ನಿರ್ವಿುಸಲಾಗುತ್ತಿತ್ತು. ಸುರಂಗ ಕೊರೆಯುವ ಕಾಮಗಾರಿ ನಡೆಯುತ್ತಿದ್ದಾಗ, ಬೆಟ್ಟದ ಭಾಗ ದಿಢೀರನೆ ಸುರಂಗದ ಪ್ರವೇಶದ್ವಾರದ ಮೇಲೆಯೇ ಕುಸಿದು ಬಿದ್ದ ಪರಿಣಾಮ 10 ಕಾರ್ವಿುಕರು ಮೃತಪಟ್ಟರು. ಮೃತಪಟ್ಟವರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳ, ನೇಪಾಳ ಮತ್ತು ಜಮ್ಮು-ಕಾಶ್ಮೀರದ ಮೂಲದ ವಲಸೆ ಕಾರ್ವಿುಕರು ಹಾಗೂ ಸಣ್ಣ ಪ್ರಮಾಣದ ತಾಂತ್ರಿಕ ಸಿಬ್ಬಂದಿಯಾಗಿದ್ದರು.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ತಪೋವನ ಸುರಂಗ ದುರಂತವು ಭಾರತ ಕಂಡ ಭೀಕರ ಹಾಗೂ ನೈಸರ್ಗಿಕ ವಿಕೋಪ ಆಧಾರಿತ ಕೈಗಾರಿಕಾ ದುರಂತಗಳಲ್ಲಿ ಒಂದಾಗಿದೆ. 2021ರ ಫೆಬ್ರವರಿ 7ರಂದು ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಇರುವ ತಪೋವನ ವಿಷ್ಣುಗಡ್ ಜಲವಿದ್ಯುತ್ ಯೋಜನೆ ಬಳಿ ಹಿಮಕುಸಿತದಿಂದಾಗಿ ದಿಢೀರ್ ಮೇಘಸ್ಪೋಟ/ಪ್ರವಾಹ ಉಂಟಾಯಿತು. ಈ ದುರಂತದಲ್ಲಿ 75ಕ್ಕೂ ಹೆಚ್ಚು ಜನರು (ಸ್ಥಳೀಯರು ಹಾಗೂ ಕಾರ್ವಿುಕರು ಸೇರಿ) ಮೃತಪಟ್ಟರು ಅಥವಾ ನಾಪತ್ತೆಯಾದರು. ತಪೋವನ ಸುರಂಗದೊಳಗೆ ಸಿಲುಕಿ 50ಕ್ಕೂ ಹೆಚ್ಚು ಕಾರ್ವಿುಕರು ದಾರುಣವಾಗಿ ಪ್ರಾಣ ಕಳೆದುಕೊಂಡರು. ಸುರಂಗವು ಕೆಸರು ಮತ್ತು ಕಲ್ಲುಗಳಿಂದ ಮುಚ್ಚಿಹೋಗಿದ್ದರಿಂದ ಕಾರ್ವಿುಕರಿಗೆ ಹೊರಬರಲು ಸಾಧ್ಯವಾಗಲಿಲ್ಲ.
ವಿವರವಾದ ಭೂವಿಜ್ಞಾನ ಅಧ್ಯಯನ: ಸುರಂಗ ತೋಡುವ ಮುನ್ನ ಆ ಪ್ರದೇಶದ ಮಣ್ಣು, ಬಂಡೆಗಳ ಸ್ವರೂಪ ಮತ್ತು ಅಂತರ್ಜಲ ಮಟ್ಟದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವುದು. ಸುರಂಗ ಮಾರ್ಗವಿರುವ ಬೆಟ್ಟ ಅಥವಾ ಗುಡ್ಡಗಳ ಸ್ಥಿರತೆಯನ್ನು ನಿಯಮಿತವಾಗಿ ಪರಿಶೀಲಿಸುವುದು. ತುರ್ತು ನಿರ್ಗಮನ ಮಾರ್ಗಗಳು: ಮುಖ್ಯ ಸುರಂಗದ ಜೊತೆಗೆ ಅಪಾಯದ ಸಮಯದಲ್ಲಿ ಹೊರಬರಲು ಪರ್ಯಾಯ ಎಸ್ಕೇಪ್ ಟ್ವಿನ್ ಟನಲ್ ಅಥವಾ ತುರ್ತು ನಿರ್ಗಮನ ದಾರಿಗಳನ್ನು ನಿರ್ವಿುಸುವುದು.
ಗಾಳಿ ಮತ್ತು ಬೆಳಕಿನ ವ್ಯವಸ್ಥೆ: ಸುರಂಗದೊಳಗೆ ಹಾನಿಕಾರಕ ಅನಿಲಗಳು ಜಮೆಯಾಗದಂತೆ ಸೂಕ್ತವಾದ ವೆಂಟಿಲೇಶನ್ ವ್ಯವಸ್ಥೆ ಹಾಗೂ ಸ್ಪಷ್ಟವಾದ ಬೆಳಕಿನ ವ್ಯವಸ್ಥೆ ಮಾಡುವುದು. ಬೆಂಕಿ ಅವಘಡಗಳನ್ನು ಎದುರಿಸಲು ಸ್ವಯಂಚಾಲಿತ ಅಗ್ನಿಶಾಮಕ ಉಪಕರಣಗಳು ಹಾಗೂ ಒಳಬರುವ ನೀರನ್ನು ತಕ್ಷಣ ಹೊರಹಾಕಲು ಪ್ರಬಲ ಡ್ರೖೆನೇಜ್ ಸಿಸ್ಟಮ್ ಅಳವಡಿಸುವುದು. ಜಾಗರೂಕತೆಯ ಯೋಜನೆ, ಕಟ್ಟುನಿಟ್ಟಾದ ನಿರ್ವಹಣೆ ಹಾಗೂ ಎಐ-ಐಒಟಿ ಆಧಾರಿತ ತಂತ್ರಜ್ಞಾನಗಳ ಸಂಯೋಜನೆಯಿಂದ ಸುರಂಗ ದುರಂತಗಳನ್ನು ಗಣನೀಯವಾಗಿ ತಡೆಯಬಹುದು ಮತ್ತು ಸಾವಿರಾರು ಜನರ ಪ್ರಾಣ ಉಳಿಸಬಹುದು.