ಒಂದೆಡೆ ಕೃತಕ ಬುದ್ಧಿಮತ್ತೆ ನಮ್ಮ ಯುವಜನರ ನೌಕರಿಯನ್ನು ಕಿತ್ತುಕೊಳ್ಳಲಿದೆಯೆಂಬ ಆತಂಕದ ನಡುವೆ ಡೇಟಾ ಸೆಂಟರ್‌ಗೆ ಇದ್ದಕ್ಕಿದ್ದಂತೆ ಬೇಡಿಕೆ ಸೃಷ್ಟಿಯಾಗಿರುವುದು ಮುಳುಗುವವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿದೆ. ಇದು ಉದ್ಯೋಗ ಸೃಷ್ಟಿಗೆ ಕಾರಣವಾಗಬಹುದೆಂಬ ಆಶಾಭಾವನೆ ನಾಯಕರುಗಳಲ್ಲಿ ಮೂಡಿ ಟೆಕ್ ಕಂಪನಿಗಳಿಗೆ ಮಣೆ ಹಾಕುತ್ತಿದ್ದಾರೆ. ಅದರ ಪರಿಣಾಮವೇ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕಂಡುಬರುತ್ತಿರುವ ಡೇಟಾ ಸೆಂಟರ್ ಕ್ರಾಂತಿ. 2020ರಲ್ಲಿ ಭಾರತದ ಡೇಟಾ ಸೆಂಟರ್‌ನ ಕ್ಷಮತೆ 375 ಮೆಗಾವಾಟ್‌ನಷ್ಟಿದ್ದರೆ 2025ಕ್ಕೆ ಅದು 1500 ಮೆಗಾವಾಟ್‌ಗೆ ತಲುಪಿದೆ. ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಳದ ಜತೆಗೆ ಭಾರತದ ಬಳಕೆದಾರರ ದತ್ತಾಂಶ ದೇಶದ ಹೊರಗೆ ಹೋಗದೇ ನಮ್ಮಲ್ಲಿರುವ ಡೇಟಾ ಸೆಂಟರ್‌ಗಳಲ್ಲೇ ಭದ್ರವಾಗಿರಬೇಕೆಂಬ ಸರ್ಕಾರದ ಹೊಸ ನೀತಿಯ ಪರಿಣಾಮದಿಂದ ಅವು ಕತ್ರಿಗೊಂದು ಮುರ್ಕಿಗೊಂದರಂತೆ ತಲೆಯೆತ್ತುವ ಲಕ್ಷಣಗಳು ಕಾಣುತ್ತಿದ್ದು, ಒಂದು ಅಂದಾಜಿನಂತೆ ಭಾರತದ ಡೇಟಾ ಸೆಂಟರ್‌ನ ಕ್ಷಮತೆ 2031ರಲ್ಲಿ ಹಾಲಿ ಇರುವುದರ ಏಳು ಪಟ್ಟು ಅಂದರೆ 10.5 ಗಿಗಾವಾಟ್‌ಗೆ ತಲುಪಲಿದೆ. ಅಂದಹಾಗೆ ಡೇಟಾ ಸೆಂಟರ್‌ನ ಕ್ಷಮತೆಯನ್ನು ಅದು ಬಳಸುವ ವಿದ್ಯುತ್ತಿನ ಪ್ರಮಾಣದಿಂದ ಅಳೆಯಲಾಗುತ್ತಿದ್ದು, ಬಳಕೆಯ ಪ್ರಮಾಣ ಹೆಚ್ಚಿದಂತೆಲ್ಲ ಅದರ ಕ್ಷಮತೆಯೂ ಹೆಚ್ಚುತ್ತದೆ. ಇದು ರಾಜ್ಯಗಳ ನಡುವೆ ಮತ್ತೊಂದು ಬಂಡವಾಳ ಸೆಳೆತ ಸಮರಕ್ಕೆ ಕಾರಣವಾಗಿದ್ದು, ಸದ್ಯಕ್ಕೆ ಆಂಧ್ರಪ್ರದೇಶ ರೇಸ್‌ನಲ್ಲಿ ಮುಂದಿದೆ. ಕರ್ನಾಟಕವೂ ತನ್ನ ಪಟ್ಟುಗಳನ್ನು ಅಣಿ ಮಾಡಿಕೊಳ್ಳುತ್ತಿದೆ.