ಆದೇಶದ ಮೇಲೆ ಪ್ರಭಾವ ಬೀರಲು ಸಿಜೆಐ ಸಹೋದರನಿಗೆ ಕಾಲ್!...ವಿದೇಶದಲ್ಲಿ ಅಡಗಿದ್ದರೂ ಬಿಡಲ್ಲ ಅಂದ್ರು ಮುಖ್ಯ ನ್ಯಾಯಮೂರ್ತಿಗಳು | CJI SuryaKant
CJI SuryaKant | ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್
Published on:
Copied
Follow Us
ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (CJI SuryaKant) ಅವರು ನ್ಯಾಯಾಲಯದಲ್ಲಿ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದು, ವೈದ್ಯಕೀಯ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಮ್ಮ ಆದೇಶವನ್ನು ಪ್ರಶ್ನಿಸಲು ಅರ್ಜಿದಾರರ ಪರ ವ್ಯಕ್ತಿಯೊಬ್ಬರು ಸಿಜೆಐ ಸಹೋದರನಿಗೇ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಸಿಜೆಐ, ವಿದೇಶದಲ್ಲಿ ಅಡಗಿಕೊಂಡಿದ್ದರೂ ಅಂತಹವರನ್ನು ಹೇಗೆ ಶಿಕ್ಷಿಸಬೇಕೆಂದು ನನಗೆ ತಿಳಿದಿದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಮೀರತ್‌ನ ಸುಭಾರ್ತಿ ವೈದ್ಯಕೀಯ ಕಾಲೇಜಿನಲ್ಲಿ ಬೌದ್ಧ ಅಲ್ಪಸಂಖ್ಯಾತ ಕೋಟಾದಡಿ ಸ್ನಾತಕೋತ್ತರ ಸೀಟು ಪಡೆಯಲು ಹರಿಯಾಣದ ಇಬ್ಬರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಸಿಜೆಐ ಅವರು, ಯಾರೋ ನನ್ನ ಸಹೋದರನಿಗೆ ಕರೆ ಮಾಡಿ ನಾನು ಇಂತಹ ಆದೇಶವನ್ನು ಹೇಗೆ ನೀಡಿದೆ ಎಂದು ಪ್ರಶ್ನಿಸಿದ್ದಾರೆ. ಅವರು ನನಗೆ ಷರತ್ತುಗಳನ್ನು ವಿಧಿಸುತ್ತಾರೆಯೇ? ಇವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮವನ್ನು ಏಕೆ ಕೈಗೊಳ್ಳಬಾರದು?" ಎಂದು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿದರು.
ಕಳೆದ 23 ವರ್ಷಗಳಿಂದ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿದ್ದೇನೆ ಎಂದಿರುವ ಸಿಜೆಐ, ಮೌಲ್ಯಗಳನ್ನು ಗಾಳಿಗೆ ತೂರಿ ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದ್ದಾರೆ.
ಬೌದ್ಧ ಧರ್ಮಕ್ಕೆ ಮತಾಂತರದ ವಂಚನೆ
ಈ ಪ್ರಕರಣವು ಕೇವಲ ಬೆದರಿಕೆ ಕರೆಗೆ ಸೀಮಿತವಾಗಿಲ್ಲ, ಬದಲಿಗೆ ಮೀಸಲಾತಿಗಾಗಿ ನಡೆದ ದೊಡ್ಡ ವಂಚನೆಯನ್ನು ಎತ್ತಿ ತೋರಿಸಿದೆ. ಹರಿಯಾಣದ ಶ್ರೀಮಂತ ಜಾಟ್ ಪುನಿಯಾ ಸಮುದಾಯಕ್ಕೆ ಸೇರಿದ ಇಬ್ಬರು ಅಭ್ಯರ್ಥಿಗಳು, ಪರೀಕ್ಷೆಗೆ ಕೆಲವೇ ದಿನಗಳ ಮುನ್ನ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದು ಹೊಸ ಮಾದರಿಯ ವಂಚನೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಾ, ಶ್ರೀಮಂತ ಸಮುದಾಯಕ್ಕೆ ಸೇರಿದ ನೀವು ನಿಮ್ಮ ಅರ್ಹತೆಯ ಬಗ್ಗೆ ಹೆಮ್ಮೆ ಪಡಬೇಕು, ಇಂತಹ ಅಡ್ಡದಾರಿ ಹಿಡಿಯಬಾರದು ಎಂದು ಬುದ್ಧಿವಾದ ಹೇಳಿದರು.
ಕೋರ್ಟ್‌ನ ಮುಂದಿನ ಆದೇಶ
ಹಿಸಾರ್‌ನ ಉಪವಿಭಾಗೀಯ ಅಧಿಕಾರಿ ಇಂತಹ ಅಲ್ಪಸಂಖ್ಯಾತ ಪ್ರಮಾಣಪತ್ರಗಳನ್ನು ಹೇಗೆ ನೀಡಿದರು ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಸಮಗ್ರ ಮಾರ್ಗಸೂಚಿಗಳನ್ನು ಒದಗಿಸುವಂತೆ ಹರಿಯಾಣದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ. ಅಲ್ಪಸಂಖ್ಯಾತರ ಕೋಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಶ್ರೀಮಂತ ವರ್ಗದವರ ವಿರುದ್ಧ ಕಠಿಣ ನಿಲುವು ತಳೆದಿರುವ ಕೋರ್ಟ್, ಈ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದೆ(ಏಜೆನ್ಸೀಸ್).