_1763748727242.webp?w=480&auto=format%2Ccompress&fit=max)
_1763748727242.webp?w=480&auto=format%2Ccompress&fit=max)
ದೇಶದ ಭದ್ರತೆಗೆ ಮಾರಕವಾಗಿರುವ ಶತ್ರುಗಳು ದೇಶದೊಳಗೇ ಕಾರ್ಯಾಚರಿಸುತ್ತಿದ್ದು, ಉಗ್ರವಾದವನ್ನು ಹರಡುವಲ್ಲಿ ನಿರತರಾಗಿರುವುದು ಆತಂಕಕಾರಿ ಸಂಗತಿ. ಇಂಥ ದೇಶದ್ರೋಹಿಗಳನ್ನು ಪತ್ತೆ ಹಚ್ಚಲು, ಅವರ ಜಾಲಗಳನ್ನು ನಿಮೂಲನಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಬೃಹತ್ ಕಾರ್ಯಾಚರಣೆ ನಡೆಯಬೇಕಿದೆ. ಭಾರತದಲ್ಲಿ ಬದುಕು ಕಟ್ಟಿಕೊಂಡು, ಇಲ್ಲಿನ ಆಹಾರ-ವಿಹಾರದೊಂದಿಗೆ ಜೀವಿಸುತ್ತಿದ್ದರೂ ರಾಷ್ಟ್ರಕ್ಕೆ ದ್ರೋಹವೆಸಗುತ್ತಿರುವ ಇಂಥ ದುರುಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ.
ಹೊರಗಡೆಯ ಶತ್ರುಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಹಿಮ್ಮೆಟಿಸಬಹುದು. ಆದರೆ, ದೇಶದೊಳಗೇ ಇದ್ದು ಷಡ್ಯಂತ್ರ ರೂಪಿಸುವ, ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕುವವರನ್ನು ಪತ್ತೆ ಹಚ್ಚುವುದು ಈಗಿನ ಅಗತ್ಯವಾಗಿದೆ. ನೌಕಾಪಡೆಯ ಹಡಗುಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದಲ್ಲಿ ಮಲ್ಪೆಯಲ್ಲಿ ಉತ್ತರಪ್ರದೇಶದ ಇಬ್ಬರನ್ನು ಬಂಧಿಸಲಾಗಿದೆ. ರೋಹಿತ್ ಹಾಗೂ ಸಂತ್ರಿ ಬಂಧಿತರು. ಈ ಪೈಕಿ ರೋಹಿತ್ ಈ ಹಿಂದೆ ಕೇರಳದಲ್ಲಿ ಕೆಲಸ ಮಾಡುತ್ತಿದ್ದಾಗಲೂ, ನೌಕಾ ಪಡೆಗೆ ಸಂಬಂಧಪಟ್ಟ ಹಡಗುಗಳ ಸಂಖ್ಯೆಗಳ ಪಟ್ಟಿ ಹಾಗೂ ಇತರ ಗೌಪ್ಯ ಮಾಹಿತಿಯನ್ನು ವಾಟ್ಸ್ಆಪ್ ಮೂಲಕ ಅನಧಿಕೃತವಾಗಿ ಶೇರ್ ಮಾಡಿದ್ದ.
ಈ ಇಬ್ಬರೂ ಆರೋಪಿಗಳು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಆರೋಪದ ಮೇರೆಗೆ ಜಮ್ಮುವಿನ ‘ಕಾಶ್ಮೀರ್ ಟೈಮ್ಸ್’ ಮಾಧ್ಯಮ ಸಂಸ್ಥೆಯ ಕಚೇರಿ ಮೇಲೆ ಗುರುವಾರ ಜಮ್ಮು-ಕಾಶ್ಮೀರದ ತನಿಖಾ ತಂಡ ದಾಳಿ ನಡೆಸಿದಾಗ ಅನೇಕ ಮಹತ್ವದ ಸಂಗತಿಗಳು ಬಯಲಾಗಿವೆ. ಈ ವೇಳೆ ಎಕೆ-47 ಕಾಟ್ರಿಡ್ಜ್ಗಳು, ಪಿಸ್ತೂಲ್ ರೌಂಡ್ಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಈ ಪತ್ರಿಕೆ ಪ್ರತ್ಯೇಕತಾವಾದವನ್ನು ಬೆಂಬಲಿಸುತ್ತ ಬಂದಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ.
ದೆಹಲಿ 2020ರ ಗಲಭೆ ಪ್ರಕರಣದ ಆರೋಪಿಗಳಾಗಿರುವ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಜಾಮೀನು ಅರ್ಜಿಗಳನ್ನು ಪರಿಗಣಿಸದಂತೆ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ಗೆ ಗುರುವಾರ ಮನವಿ ಮಾಡಿದರು. ಇತ್ತೀಚೆಗೆ ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ ವಿದ್ಯಾವಂತರೇ ಭಯೋತ್ಪಾದಕ ಕೃತ್ಯದಲ್ಲಿ ತೊಡಗುತ್ತಿರುವುದು ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ವೈದ್ಯರು ಹಾಗೂ ಇಂಜಿನಿಯರ್ಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದ ಪ್ರವಾಸಿತಾಣ ಪಹಲ್ಗಾಮ್ಲ್ಲಿ ಏಪ್ರಿಲ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಸಹಕರಿಸಿದ್ದ ಕೆಲ ಸ್ಥಳೀಯರನ್ನು ತನಿಖಾ ಸಂಸ್ಥೆಗಳು ಬಂಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಭಾರತ ದಿಟ್ಟ ಸೇನಾ ಕಾರ್ಯಾಚರಣೆಗಳ ಮುಖಾಂತರ ಗಡಿಯಾಚೆಗಿನ ಭಯೋತ್ಪಾದಕರ ಶಿಬಿರ ಮತ್ತು ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸುತ್ತ ಬಂದಿದೆ. ಆದರೆ, ಭಯೋತ್ಪಾದಕರಿಗೆ ಸಹಕಾರ ನೀಡುತ್ತಿರುವ ದುಷ್ಟರ ಹೆಡೆಮುರಿ ಕಟ್ಟಲು ಈಗ ದೇಶದೊಳಗೂ ಮಹತ್ವದ ಕಾರ್ಯಾಚರಣೆಯ ಅಗತ್ಯವಿದೆ. ಇಲ್ಲದಿದ್ದರೆ ಈ ವಿಷಬೀಜಗಳು ಆಂತರಿಕ ಭದ್ರತೆಗೆ ಸವಾಲು ಒಡ್ಡಬಲ್ಲವು. ಹಾಗಾಗಿ, ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಅಗತ್ಯ.