ಕೋಚ್ ಆಗಿ ದಾದಾ ಹೊಸ ಇನ್ನಿಂಗ್ಸ್: 7 ರನ್ನಿಗೆ 5 ವಿಕೆಟ್ ಹೋದರೂ ಗೆಲ್ಲುವ ಸೂತ್ರ ಗಂಗೂಲಿ ಹೇಳಿಕೊಟ್ಟಿದ್ದು ಹೇಗೆ? | Ganguly

 Ganguly
Ganguly
Published on
ಕೋಲ್ಕತ್ತಾ: ಭಾರತೀಯ ಕ್ರಿಕೆಟ್‌ನ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ( Ganguly) ಅವರು ಇದೀಗ ಕೋಚ್ ಆಗಿ ಹೊಸ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಸೌತ್ ಆಫ್ರಿಕಾ ಟಿ20 ಲೀಗ್‌ನಲ್ಲಿ ತಾವು ಮಾರ್ಗದರ್ಶನ ನೀಡುತ್ತಿರುವ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಆರಂಭಿಕ ಸೋಲಿನ ನಂತರ ಭರ್ಜರಿ ಕಮ್‌ಬ್ಯಾಕ್ ಮಾಡಿದ ಬಗ್ಗೆ ಗಂಗೂಲಿ ಅವರು 'ಸಂವಾದ್ ಪ್ರತಿದಿನ' ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಹೌದು, ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳಲ್ಲಿ ಕ್ರಿಕೆಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದ ಗಂಗೂಲಿ ಅವರಿಗೆ, ಇದು ಕೋಚ್ ಆಗಿ ಮೊದಲ ಟೂರ್ನಿ. ಈ ಬಗ್ಗೆ ಮಾತನಾಡಿದ ಅವರು, "ಇದು ಅದ್ಭುತ ಅನುಭವ. ಹಿಂದೆ ರಿಕ್ಕಿ ಪಾಂಟಿಂಗ್ ಜೊತೆ ನಿರ್ದೇಶಕನಾಗಿ ಕೆಲಸ ಮಾಡಿದ್ದೆ, ಆದರೆ ಕೋಚ್ ಜವಾಬ್ದಾರಿಯೇ ಬೇರೆ. ಈ ಅವಕಾಶ ಸಿಕ್ಕಾಗ ನಾನು ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾದಾಗ ಎಷ್ಟು ಉತ್ಸಾಹ ಅನುಭವಿಸಿದ್ದೆನೋ, ಈಗಲೂ ಅದೇ ರೀತಿಯ ಭಾವನೆ ಮೂಡುತ್ತಿದೆ," ಎಂದು ತಮ್ಮ ಸಂಭ್ರಮ ಹಂಚಿಕೊಂಡರು.

ಸತತ ಸೋಲಿನ ನಂತರ ಕಮ್‌ಬ್ಯಾಕ್ ಮಾಡಿದ್ದು ಹೇಗೆ?

ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಸೋತರೂ ತಂಡವು ಕುಗ್ಗಲಿಲ್ಲ. ಈ ಬಗ್ಗೆ ವಿವರಿಸಿದ ದಾದಾ, "ಯಾವುದೇ ದೊಡ್ಡ ಟೂರ್ನಿಯಲ್ಲಿ ಎಲ್ಲ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಸೋತಾಗ ಗಾಬರಿ ಬೀಳದಂತೆ ಆಟಗಾರರಿಗೆ ತಿಳಿಸಿದ್ದೆ. 'ಎರಡು ಪಂದ್ಯ ಸೋತ ತಕ್ಷಣ ಜೀವನವೇ ಮುಗಿಯುವುದಿಲ್ಲ, ನಿಮ್ಮ ಮೇಲೆ ನಂಬಿಕೆ ಇರಲಿ' ಎಂದು ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ತಿಳಿಯಾಗಿರಿಸಿದ್ದೆವು. ವೃತ್ತಿಪರ ಆಟಗಾರರಿಗೆ ಅವರ ತಪ್ಪುಗಳನ್ನು ತಿದ್ದಿ ಹೇಳಿದರೆ ಸಾಕು, ಅವರು ಪುಟಿದೇಳುತ್ತಾರೆ," ಎಂದರು.

ಜೋಬರ್ಗ್ ಕಿಂಗ್ಸ್ ವಿರುದ್ಧದ ಆ ಮ್ಯಾಜಿಕ್!

ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 7 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದರೂ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ ಗೆದ್ದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಅದು ನಿಜಕ್ಕೂ ಅವಿಸ್ಮರಣೀಯ. ಆ ಪರಿಸ್ಥಿತಿಯಲ್ಲಿ ಯಾವುದೇ ತಂಡವಾದರೂ ಭಯ ಬೀಳುತ್ತದೆ. ಆದರೆ ನಮ್ಮ ತಂಡ ಶಾಂತವಾಗಿತ್ತು. ಬ್ರೆವಿಸ್ ಮತ್ತು ರುದರ್‌ಫೋರ್ಡ್ ಅವರ ಶತಕದ ಜೊತೆಯಾಟ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿ ಪಂದ್ಯವನ್ನು ತಿರುಗಿಸಿತು," ಎಂದು ಕೊಂಡಾಡಿದರು.

ತಂಡದ 'ಎಕ್ಸ್ ಫ್ಯಾಕ್ಟರ್' (X-Factor)

ತಂಡದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟ ಗಂಗೂಲಿ, "ನಮ್ಮ ತಂಡವು ಯಾರೋ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ. ರಸೆಲ್ ಅಂತಹ ದೊಡ್ಡ ಆಟಗಾರ ಅಷ್ಟಾಗಿ ಮಿಂಚದಿದ್ದರೂ ನಾವು ಗೆಲ್ಲುತ್ತಿದ್ದೇವೆ ಎಂದರೆ, ತಂಡದ ಪ್ರತಿಯೊಬ್ಬ ಆಟಗಾರನೂ ಒಬ್ಬೊಬ್ಬ 'ಮ್ಯಾಚ್ ವಿನ್ನರ್' ಎಂದರ್ಥ. ಈಗಾಗಲೇ ಫೈನಲ್​ ತಲುಪಿರುವ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ ಟ್ರೋಫಿ ಗೆಲ್ಲುವುದೇ ಈಗ ನಮ್ಮ ಮುಂದಿರುವ ಗುರಿ," ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net