ಜನರ ಜೇಬು ಖಾಲಿ! ಬ್ಲ್ಯಾಕ್​ ಮಾರ್ಕೆಟ್​ನಲ್ಲಿ ಮೂರು ಪಟ್ಟು ಹಣಕ್ಕೆ ಸಿಲಿಂಡರ್​ಗಳು ಸೇಲ್​; ಇಲ್ಲಿದೆ ಅಚ್ಚರಿ ವರದಿ

ದೇಶದಲ್ಲಿ ಗ್ಯಾಸ್​ ಸಿಲಿಂಡರ್​ಗಳ ಅಭಾವ
ದೇಶದಲ್ಲಿ ಗ್ಯಾಸ್​ ಸಿಲಿಂಡರ್​ಗಳ ಅಭಾವ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಯುದ್ಧದಿಂದ ದೇಶದಲ್ಲಿ ತೈಲ ಬಿಕ್ಕಟ್ಟು
  • ಅನಿಲ ಕೊರತೆಯಿಲ್ಲ ಎಂದರೂ ಭಾರತದಲ್ಲಿ ಎಲ್​ಪಿಜಿ ಅಭಾವ
  • ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್​ಗಳ ಕೊರತೆ ಬೆನ್ನಲ್ಲೇ ಬ್ಲ್ಯಾಕ್​ ಮಾರ್ಕೆಟ್​ಗೆ ಡಿಮಾಂಡ್​
ನವದೆಹಲಿ: ಅತ್ತ ಇಸ್ರೇಲ್​-ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಯುದ್ಧ ದಾಳಿಗಳು ನಿಲ್ಲುತ್ತಿಲ್ಲ. ಇತ್ತ, ದೇಶದಲ್ಲಿ ಅನಿಲ​ ಕೊರತೆಯಿಂದ ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್​ಗಳ ಅಭಾವ ಜನರಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ಈ ಗ್ಯಾಸ್​ ಸಿಲಿಂಡರ್​ಗಳು ಸರಿಯಾಗಿ ಸಿಗದ ಹಿನ್ನೆಲೆ ಹೋಟೆಲ್​ ಉದ್ಯಮವನ್ನೇ ನಂಬಿದವರಿಗೆ ಭಾರೀ ಸಂಕಷ್ಟ ಎದುರಾಗಿದೆ. ಇನ್ನು ಗೃಹಬಳಕೆ ಸಿಲಿಂಡರ್​ ಬುಕ್​ ಮಾಡುತ್ತಿರುವ ಜನರಿಗೆ ನಿಗದಿ ಪಡಿಸಿರುವ ಸಮಯಕ್ಕೂ ಪೂರೈಕೆ ಆಗುತ್ತಿಲ್ಲ. ಇದು ಜನಸಾಮಾನ್ಯರನ್ನು ಅಕ್ಷರಶಃ ಕಂಗಾಲಾಗಿಸಿದ್ದು, ಬ್ಲ್ಯಾಕ್​ ಮಾರ್ಕೆಟ್​ನತ್ತ ದೌಡಾಯಿಸುವಂತೆ ಮಾಡಿದೆ.  ​  

ತೈಲ ಬಿಕ್ಕಟ್ಟು ಜನರಿಗೆ ಇಕ್ಕಟ್ಟು

ದೇಶಾದ್ಯಂತ ಪೂರೈಕೆ ಬಿಕ್ಕಟ್ಟು ಸುಮಾರು ಐದನೇ ಒಂದು ಭಾಗದಷ್ಟು ಮನೆಗಳನ್ನು ಬ್ಲ್ಯಾಕ್​ ಮಾರ್ಕೆಟ್​ ಕದ ತಟ್ಟುವಂತೆ ಮಾಡಿದೆ. ಹೊಸದಾಗಿ ಹೆಚ್ಚಳ ಕಂಡ ದರಕ್ಕಿಂತ ಡಬಲ್​ ಅಲ್ಲ ತ್ರಿಬಲ್​ ಹಣಕ್ಕೆ ಗ್ಯಾಸ್​ ಸಿಲಿಂಡರ್​ಗಳು ಮಾರಾಟ ಆಗುತ್ತಿದೆ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಹೊಸ ಸಮೀಕ್ಷೆ ತಿಳಿಸಿದ್ದಾಗಿ 'ಎನ್​ಡಿಟಿವಿ' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈ ವಾರ ಶೇ.68ರಷ್ಟು ಕುಟುಂಬಗಳು ಗ್ಯಾಸ್​ ಸಿಲಿಂಡರ್​ಗಳ ಡೆಲಿವರಿಯಲ್ಲಿ ನಿಗದಿಗಿಂತ ಹೆಚ್ಚು ವಿಳಂಬ ಅನುಭವಿಸಿವೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಇದೇ ಒಂದು ವಾರದ ಹಿಂದೆ ಶೇ.57ರಷ್ಟಿತ್ತು ಎನ್ನಲಾಗಿದೆ. ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್​ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಕಠಿಣ ನಿರ್ಬಂಧ ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣವಾಗಿದೆ. ಇಂಧನ ಆಮದು ಮೇಲೆ ಶೆ.60ರಷ್ಟು ಅವಲಂಬಿತವಾಗಿರುವ ಭಾರತ ಈಗ ತೀವ್ರ ಅನಿಲ ಕೊರತೆಯನ್ನು ಅನುಭವಿಸುತ್ತಿರುವುದು ದುರಂತವೇ ಸರಿ.

ಸಮೀಕ್ಷೆಯ ಪ್ರಕಾರ...

ಅಡುಗೆ ಗ್ಯಾಸ್​ ಸಿಲಿಂಡರ್​ಗಳ ಕೊರತೆಯು ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಸಮೀಕ್ಷೆಯ ಪ್ರಕಾರ, ಶೇ.20ರಷ್ಟು ದೇಶದ ಜನರು ಅಕ್ರಮವಾಗಿ ಎಲ್​ಪಿಜಿ ಮಾರಾಟಗಾರರಿಂದ ಸಿಲಿಂಡರ್‌ಗಳನ್ನು ಖರೀದಿಸಿದ್ದಾಗಿ ತಿಳಿಸಿದ್ದಾರೆ. ಇದು ಒಂದು ವಾರದ ಹಿಂದೆ ಶೇ.14ರಷ್ಟಿತ್ತು. ಈ ಗ್ರಾಹಕರು ಅಧಿಕೃತ ಅಂದರೆ ನಿಗದಿಯಾಗಿರುವ ದರಕ್ಕಿಂತ 300ರಿಂದ 4,000 ರೂ.ವರೆಗೆ ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಇನ್ನೂ ಕೆಲವೆಡೆ, ಪ್ರತಿ ಸಿಲಿಂಡರ್‌ಗೆ 5,000 ರೂ.ಗೂ ಅಧಿಕ ಹಣವನ್ನು ಕೊಟ್ಟಿರುವುದು ಹುಬ್ಬೇರಿಸುವ ಸಂಗತಿ.

ಹಲವೆಡೆ ಹೋಟೆಲ್​ಗಳು ಬಂದ್​!

ವಾಣಿಜ್ಯ ಸಿಲಿಂಡರ್​ಗಳ ಅಭಾವ ಹೋಟೆಲ್ ಉದ್ಯಮಿಗಳಿಗೆ ತಟ್ಟಿದ ಬೆನ್ನಲ್ಲೇ ಬೆಂಗಳೂರು, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ರೆಸ್ಟೋರೆಂಟ್​ ಮತ್ತು ಹೋಟೆಲ್​ಗಳು ಕ್ಲೋಸ್​ ಆಗಿವೆ. ದೊಡ್ಡ ದೊಡ್ಡ ಹೋಟೆಲ್​ ಮಾಲೀಕರು ಮಾತ್ರ ತಮ್ಮ ಮಳಿಗೆಯನ್ನು ಗ್ರಾಹಕರಿಗಾಗಿ ತೆರೆದಿದ್ದು, ಇದೇ ಬ್ಲ್ಯಾಕ್​ ಮಾರ್ಕೆಟ್​ನಲ್ಲಿ ಹೆಚ್ಚಿನ ಹಣ ಕೊಟ್ಟು ಗ್ಯಾಸ್​ ಬಳಕೆ ಮಾಡುತ್ತಿರುವುದು ಗಮನಾರ್ಹ,(ಏಜೆನ್ಸೀಸ್).   ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net