ಇದಕ್ಕೂ ಮುನ್ನ ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲೂ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಉದಾಹರಣೆಗಳಿದ್ದವು. ಈ ಸಿರಪ್ಗಳ ತಯಾರಿಕೆಯಲ್ಲಿ ಬಳಸಲಾದ ದ್ರಾವಕಗಳಲ್ಲಿ ಡೈಎಥಿಲಿನ್ ಗ್ಲೈಕಾಲ್ ಮತ್ತು ಎಥಿಲಿನ್ ಗ್ಲೈಕಾಲ್ ಎಂಬ ವಿಷಕಾರಿ ರಾಸಾಯನಿಕಗಳು ಅತಿಯಾದ ಪ್ರಮಾಣದಲ್ಲಿ ಪತ್ತೆಯಾಗಿದ್ದವು. ಇವು ದೇಹ ಸೇರಿದರೆ ಮೂತ್ರಪಿಂಡಗಳನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತವೆ. ಕೇಂದ್ರ ಸರ್ಕಾರದ ಹೊಸ ನಿಯಮದಿಂದ ಔಷಧ ಅಂಗಡಿಗಳ ಮಾಲೀಕರು ಇನ್ನು ಮುಂದೆ ಕಟ್ಟುನಿಟ್ಟಾಗಿ ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ. ನಿಯಮ ಮೀರಿದರೆ ಲೈಸೆನ್ಸ್ ರದ್ದಾಗುವ ಭೀತಿ ಇರುವುದರಿಂದ ಸುರಕ್ಷತೆ ಹೆಚ್ಚುತ್ತದೆ. ಮಕ್ಕಳಿಗೆ ನೀಡುವ ಡೋಸೇಜ್ಗಳಲ್ಲಿ ಆಗುವ ತಪ್ಪುಗಳು ಮತ್ತು ಅದರಿಂದಾಗುವ ಪ್ರಾಣಾಪಾಯಗಳನ್ನು ಗಣನೀಯವಾಗಿ ತಗ್ಗಿಸಲು ನೆರವಾಗಲಿದೆ. ಮಕ್ಕಳಿಗೆ ಅವರ ತೂಕ ಮತ್ತು ವಯಸ್ಸಿಗೆ ತಕ್ಕಂತೆ ಔಷಧ ನೀಡಬೇಕು. ಸ್ವಯಂ ಚಿಕಿತ್ಸೆಯಿಂದ ಡೋಸ್ ಹೆಚ್ಚಾಗಿ ಲಿವರ್ ಅಥವಾ ಕಿಡ್ನಿ ವೈಫಲ್ಯ ಸಂಭವಿಸಿದರೆ ಪರಿಸ್ಥಿತಿ ಸಂಕಷ್ಟಮಯ. ಕೆಮ್ಮು ಕೇವಲ ನೆಗಡಿಯಿಂದ ಬಂದಿದೆಯೋ ಅಥವಾ ನ್ಯುಮೋನಿಯಾ, ಟಿಬಿ, ಅಸ್ತಮಾದಂತಹ ಗಂಭೀರ ಕಾಯಿಲೆಯಿಂದ ಬಂದಿದೆಯೋ ಎಂಬುದು ತಿಳಿಯದೆ, ಕೇವಲ ಸಿರಪ್ ಕುಡಿಯುವುದರಿಂದ ಮೂಲ ಕಾಯಿಲೆ ಉಲ್ಬಣಗೊಳ್ಳುತ್ತದೆ ಎಂಬುದನ್ನು ಮರೆಯುವಂತಿಲ್ಲ. ಕೆಮ್ಮಿನ ಸಿರಪ್ಗಳಲ್ಲಿರುವ ಆಂಟಿಹಿಸ್ಟಮೈನ್ಸ್ ನಂತಹ ಘಟಕಗಳು ಅತಿಯಾದ ತೂಕಡಿಕೆ, ಹೃದಯ ಬಡಿತ ಹೆಚ್ಚಾಗುವುದು ಅಥವಾ ಉಸಿರಾಟದ ತೊಂದರೆಯನ್ನು ಉಂಟುಮಾಡಬಹುದು.