ರಬಾಡ, ಸಿರಾಜ್, ರಶೀದ್ ದಾಳಿಗೆ ಚೆನ್ನೈ ಧ್ವಂಸ! ಗುಜರಾತ್​ ವಿರುದ್ಧ 89 ರನ್‌ಗಳಿಂದ ಸೋತ ಗಾಯಕ್ವಾಡ್ ಪಡೆ! GTvsCSK

ರಬಾಡ, ಸಿರಾಜ್, ರಶೀದ್ ದಾಳಿಗೆ ಚೆನ್ನೈ ಧ್ವಂಸ! ಗುಜರಾತ್​ ವಿರುದ್ಧ 89 ರನ್‌ಗಳಿಂದ ಸೋತ  ಗಾಯಕ್ವಾಡ್ ಪಡೆ!
ರಬಾಡ, ಸಿರಾಜ್, ರಶೀದ್ ದಾಳಿಗೆ ಚೆನ್ನೈ ಧ್ವಂಸ! ಗುಜರಾತ್​ ವಿರುದ್ಧ 89 ರನ್‌ಗಳಿಂದ ಸೋತ ಗಾಯಕ್ವಾಡ್ ಪಡೆ!
Published on
ಅಹಮದಾಬಾದ್: ಐಪಿಎಲ್ 2026 ಸೀಸನ್‌ನ ಅತ್ಯಂತ ಮಹತ್ವದ "ಡು ಆರ್ ಡೈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಗುಜರಾತ್ ಟೈಟನ್ಸ್ (GTvsCSK) ಭೀಕರ ಆಘಾತ ನೀಡಿದೆ. ಗೆಲ್ಲಲೇಬೇಕಾದ ಒತ್ತಡದೊಂದಿಗೆ 230 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ, ಗುಜರಾತ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 13.4 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ 89 ರನ್‌ಗಳ ಬೃಹತ್ ಅಂತರದ ಜಯ ಸಾಧಿಸಿದ ಶುಭಮನ್ ಗಿಲ್ ಪಡೆ, ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.

ಸಿರಾಜ್-ರಶೀದ್ ಸ್ಪಿನ್-ಪೇಸ್ ಜಂಟಿ ದಾಳಿಗೆ ನಲುಗಿದ ಚೆನ್ನೈ!

ಗುಜರಾತ್ ಟೈಟನ್ಸ್ ನೀಡಿದ್ದ 230 ರನ್‌ಗಳ ಹಿಮಾಲಯದಂತಹ ಗುರಿ ತಲುಪಲು ಸಿಎಸ್‌ಕೆ ಆರಂಭದಿಂದಲೇ ಅಬ್ಬರಿಸಲು ಮುಂದಾಯಿತಾದರೂ, ಗುಜರಾತ್‌ನ ಕರಾರುವಾಕ್ ಬೌಲಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಅದಕ್ಕೆ ಅವಕಾಶ ನೀಡಲಿಲ್ಲ. ಮೊಹಮ್ಮದ್ ಸಿರಾಜ್( 3 ವಿಕೆಟ್)​​ ಆರಂಭಿಕ ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಮಧ್ಯದ ಓವರ್‌ಗಳಲ್ಲಿ ಆಫ್ಘನ್ ಸ್ಪಿನ್ ಮಾಂತ್ರಿಕ ರಶೀದ್ ಖಾನ್(3 ವಿಕೆಟ್) ಅವರ ಗೂಗ್ಲಿಗಳಿಗೆ ಉತ್ತರಿಸಲಾಗದೆ ಸಿಎಸ್‌ಕೆ ಬ್ಯಾಟರ್‌ಗಳು ಪೆವಿಲಿಯನ್‌ಗೆ ಕ್ಯೂ ನಿಂತರು.
ಅಂತಿಮವಾಗಿ 14ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕಾಗಿಸೊ ರಬಾಡ(3 ವಿಕೆಟ್) ಎಸೆದ ಕಟ್‌ಬ್ಯಾಕ್ ಬಾಲ್ ಸ್ಪೆನ್ಸರ್ ಜಾನ್ಸನ್ ಅವರ ಬ್ಯಾಟ್‌ನ ತುದಿಗೆ ಸಾಗಿ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕೈ ಸೇರಿತು. ಅಂಪೈರ್ ನಾಟೌಟ್ ನೀಡಿದರೂ, ನಾಯಕ ಶುಭಮನ್ ಗಿಲ್ ಅತ್ಯಂತ ಚಾಣಾಕ್ಷತನದಿಂದ ಡಿಆರ್‌ಎಸ್ ರಿವ್ಯೂ ಪಡೆದು ಚೆನ್ನೈನ ಕೊನೆಯ ವಿಕೆಟ್ ಉರುಳಿಸಿದರು. ಕ್ರೀಡಾಂಗಣದಲ್ಲಿ ಭಾರಿ ಬಾಣಬಿರುಸುಗಳ ಪ್ರದರ್ಶನದೊಂದಿಗೆ ಜಿಟಿ ತಂಡದ ಈ ಮಹಾ ಗೆಲುವನ್ನು ಸಂಭ್ರಮಿಸಲಾಯಿತು.

ಸಾಯಿ ಸುದರ್ಶನ್, ಗಿಲ್ ಮತ್ತು ಬಟ್ಲರ್ ಬ್ಯಾಟಿಂಗ್ ಅಬ್ಬರ!

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್ ಪರ ಆರಂಭಿಕರಾದ ಸಾಯಿ ಸುದರ್ಶನ್ (84) ಮತ್ತು ನಾಯಕ ಶುಭಮನ್ ಗಿಲ್ (64) ಮೊದಲ ವಿಕೆಟ್‌ಗೆ ಕೇವಲ 12.2 ಓವರ್‌ಗಳಲ್ಲಿ 125 ರನ್‌ಗಳ ಸ್ಫೋಟಕ ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದ್ದರು. ಸಾಯಿ ಸುದರ್ಶನ್ ಈ ಇನಿಂಗ್ಸ್ ಮೂಲಕ ವೀರೇಂದ್ರ ಸೆಹ್ವಾಗ್ ಅವರ ಸತತ 5 ಅರ್ಧಶತಕಗಳ ದಾಖಲೆಯನ್ನು ಸರಿಗಟ್ಟಿದರು. ಅಂತಿಮ ಓವರ್‌ಗಳಲ್ಲಿ ಜೋಸ್ ಬಟ್ಲರ್ ಕೇವಲ 27 ಎಸೆತಗಳಲ್ಲಿ ಅಜೇಯ 57 ರನ್ ಚಚ್ಚಿ ತಂಡದ ಮೊತ್ತವನ್ನು 229 ರನ್‌ಗಳ ಗಡಿಗೆ ತಲುಪಿಸಿದ್ದರು.

ಸಿಎಸ್‌ಕೆ ಕೋಟೆಯಲ್ಲಿ ನೀರವ ಮೌನ; ಆರ್‌ಸಿಬಿ ಜೊತೆ ಜಿಟಿ ಟಾಪ್-2 ಫೈಟ್!

ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಆಘಾತಕಾರಿ ಸೋಲಿನೊಂದಿಗೆ ಐಪಿಎಲ್ 2026ರ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಮಾಜಿ ನಾಯಕ ಎಂ.ಎಸ್. ಧೋನಿ ಅವರ ಅಭಿಮಾನಿಗಳಿಗೆ ಈ ಸೋಲು ತೀವ್ರ ನಿರಾಶೆ ಮೂಡಿಸಿದೆ. ಪ್ರಸ್ತುತ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈಗಾಗಲೇ ಟಾಪ್-2 ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಈಗ ಗುಜರಾತ್ ಟೈಟನ್ಸ್ ಕೂಡ 89 ರನ್‌ಗಳ ಈ ಬೃಹತ್ ಜಯದ ರನ್ ರೇಟ್ ನೆರವಿನಿಂದ ಕ್ವಾಲಿಫೈಯರ್-1 ಪಂದ್ಯ ಆಡಲು ಸನ್ನದ್ಧವಾಗಿದೆ. ಆಲ್-ರೌಂಡ್ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net