ಎಐನಿಂದ ಹೊಸ ಅವಕಾಶಗಳ ಸೃಷ್ಟಿ

Ai
Ai
Published on
ನವದೆಹಲಿಯ ಭಾರತ್ ಮಂಟಪದಲ್ಲಿ ಫೆಬ್ರವರಿ 16ರಿಂದ 20ರವರೆಗೆ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ ನಡೆಯುತ್ತಿದ್ದು, 100 ದೇಶಗಳ ಪ್ರತಿನಿಧಿಗಳು, ಟೆಕ್ ರಂಗದ ದಿಗ್ಗಜರು ಪಾಲ್ಗೊಂಡಿದ್ದಾರೆ. ಈ ಶೃಂಗಸಭೆಯ ಹಿನ್ನೆಲೆಯಲ್ಲಿ, ಎಐ ರಂಗದಲ್ಲಿ ಭಾರತದ ಸಾಧನೆ, ಸರ್ಕಾರ ನೀಡುವ ಉತ್ತೇಜನ ಮತ್ತು ಇದಕ್ಕೆ ಸಂಬಂಧಪಟ್ಟ ನೀತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಎಎನ್​ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.
ಈ ಸಂದರ್ಶನದ ಪ್ರಮುಖ ಸಾರಾಂಶ ಇಲ್ಲಿದೆ.
ಭಾರತವು ಮೊದಲ ಬಾರಿಗೆ ಗ್ಲೋಬಲ್ ಸೌತ್ ವತಿಯಿಂದ ಎಐ ಇಂಪ್ಯಾಕ್ಟ್ ಸಮಿಟ್-2026 ಅನ್ನು ಆಯೋಜಿಸಿದೆ. ಈ ಶೃಂಗಸಭೆಯ ಧ್ಯೇಯವಾಕ್ಯವೇ ‘ಸರ್ವಜನಹಿತಾಯ, ಸರ್ವಜನಸುಖಾಯ’. ಈ ಶೃಂಗಸಭೆಯ ದೃಷ್ಟಿಕೋನವೇನು ಮತ್ತು ಈ ಧ್ಯೇಯವಾಕ್ಯವನ್ನೇ ಏಕೆ ಆರಿಸಿಕೊಳ್ಳಲಾಗಿದೆ?
ಇಂದು ಕೃತಕ ಬುದ್ಧಿಮತ್ತೆಯು (ಎಐ) ಮಹತ್ವದ ಘಟ್ಟದಲ್ಲಿದೆ. ಇದು ಮಾನವ ಸಾಮರ್ಥ್ಯವನ್ನು ಅಭೂತಪೂರ್ವವಾಗಿ ವಿಸ್ತರಿಸಬಲ್ಲದು, ಆದರೆ ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ಅಸ್ತಿತ್ವದಲ್ಲಿರುವ ಸಾಮಾಜಿಕ ಅಡಿಪಾಯಗಳನ್ನೇ ಅಲುಗಾಡಿಸಬಹುದು. ಅದಕ್ಕಾಗಿಯೇ ನಾವು ಈ ಶೃಂಗಸಭೆಯನ್ನು ನಾವೀನ್ಯತೆಗಾಗಿ ಅಷ್ಟೇ ಅಲ್ಲದೆ, ಅರ್ಥಪೂರ್ಣ ಮತ್ತು ಸಮಾನ ಫಲಿತಾಂಶಗಳನ್ನು ನೀಡುವ ‘ಪರಿಣಾಮ’ದ (Impact
) ಸುತ್ತ ರೂಪಿಸಿದ್ದೇವೆ. ನಮ್ಮ ನಾಗರಿಕತೆಯ ತತ್ವಶಾಸ್ತ್ರವಾದ ‘ಸರ್ವಜನಹಿತಾಯ, ಸರ್ವಜನಸುಖಾಯ’ ಎಂಬುದು ಇದರ ಮಾರ್ಗದರ್ಶಿ ಶಕ್ತಿಯಾಗಿದೆ. ತಂತ್ರಜ್ಞಾನದ ಅಂತಿಮ ಗುರಿ ಎಲ್ಲರ ಕಲ್ಯಾಣ ಮತ್ತು ಎಲ್ಲರ ಸುಖ ಆಗಿರಬೇಕು. ತಂತ್ರಜ್ಞಾನ ಇರುವುದೇ ಮಾನವಕುಲದ ಸೇವೆಗಾಗಿಯೇ ಹೊರತು, ಅದನ್ನು ಬದಲಾಯಿಸುವುದಕ್ಕಲ್ಲ.
ತಂತ್ರಜ್ಞಾನವನ್ನು ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಬಳಸುವ ಬಗ್ಗೆ ನೀವು ಯಾವಾಗಲೂ ಮಾತನಾಡುತ್ತೀರಿ. ‘ವಿಕಸಿತ್ ಭಾರತ್-2047’ರ ಗುರಿ ತಲುಪುವಲ್ಲಿ ಎಐ ಪಾತ್ರವನ್ನು ನೀವು ಹೇಗೆ ನೋಡುತ್ತೀರಿ?
2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿ ಇರಿಸಿಕೊಂಡಿದೆ. ಈ ಪಯಣದಲ್ಲಿ ಎಐ ಒಂದು ದೊಡ್ಡ ಅವಕಾಶವನ್ನು ಸೃಷ್ಟಿಸಿದೆ. ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ಇದರಿಂದ ಸಾಧ್ಯವಾಗಲಿದೆ.
ಆರೋಗ್ಯ ಕ್ಷೇತ್ರ: ಕ್ಷಯರೋಗ, ಮಧುಮೇಹ ಸಂಬಂಧಿತ ಕಣ್ಣಿನ ಕಾಯಿಲೆ ಮುಂತಾದವುಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಎಐ ಬಳಕೆಯಾಗುತ್ತಿದೆ.
ಶಿಕ್ಷಣ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ವೈಯಕ್ತಿಕ ಕಲಿಕಾ ವೇದಿಕೆಗಳನ್ನು ಎಐ ಒದಗಿಸುತ್ತಿದೆ.
ಕೃಷಿ ಮತ್ತು ಹೈನುಗಾರಿಕೆ: ಅಮುಲ್ ಸಂಸ್ಥೆಯು 36 ಲಕ್ಷ ಮಹಿಳಾ ರೈತರಿಗೆ ಗುಜರಾತಿ ಭಾಷೆಯಲ್ಲಿ ಪಶು ಆರೋಗ್ಯದ ಬಗ್ಗೆ ಅರಿವು ತುಂಬಲು ಎಐ ಬಳಸುತ್ತಿದೆ. ‘ಭಾರತ್ ವಿಸ್ತಾರ್’ ಉಪಕ್ರಮವು ರೈತರಿಗೆ ಹವಾಮಾನ ಮತ್ತು ಬೆಳೆ ಸಲಹೆ ನೀಡಲು ಎಐ ಅನ್ನು ಸಂಯೋಜಿಸುತ್ತಿದೆ. ಭಾರತವು ಎಐ ಅನ್ನು ಕೇವಲ ತಂತ್ರಜ್ಞಾನವಾಗಿ ನೋಡದೆ, ಹಳ್ಳಿ ಹಳ್ಳಿಗೂ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅವಕಾಶಗಳನ್ನು ತಲುಪಿಸುವ ಸಮರ್ಥ ಸಾಧನವಾಗಿ ಬಳಸುತ್ತಿದೆ.
ನಿಮ್ಮ ನೇತೃತ್ವದಲ್ಲಿ ಭಾರತವು 4ಜಿ-5ಜಿ ಮತ್ತು ಡ್ರೋನ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಆತ್ಮನಿರ್ಭರ ಭಾರತಕ್ಕಾಗಿ ಎಐ ಬಗ್ಗೆ ನಿಮ್ಮ ದೃಷ್ಟಿಕೋನವೇನು?
ನನ್ನ ದೃಷ್ಟಿಕೋನವು ಮೂರು ಸ್ತಂಭಗಳ ಮೇಲೆ ನಿಂತಿದೆ. ಸಾರ್ವಭೌಮತ್ವ, ಒಳಗೊಳ್ಳುವಿಕೆ ಮತ್ತು ನಾವೀನ್ಯ. ಭಾರತವು ವಿಶ್ವದ ಅಗ್ರ ಮೂರು ಎಐ ಸೂಪರ್ ಪವರ್​ಗಳಲ್ಲಿ ಒಂದಾಗಬೇಕು. ನಮ್ಮ ಎಐ ಮಾದರಿಗಳು ಜಗತ್ತಿನಾದ್ಯಂತ ಬಳಕೆಯಾಗಬೇಕು. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಎಐ ಎಂಬುದು ಒಂದು ಅವಕಾಶವಾಗಿ ಕಾಣಬೇಕೇ ಹೊರತು ಬೆದರಿಕೆಯಾಗಿ ಅಲ್ಲ. ಆತ್ಮನಿರ್ಭರ ಭಾರತ ಎಂದರೆ ಡಿಜಿಟಲ್ ಶತಮಾನಕ್ಕಾಗಿ ಭಾರತವೇ ತನ್ನ ಸ್ವಂತ ಕೋಡ್ ಬರೆಯುವುದು.
ಎಐನ ಪೂರ್ವಗ್ರಹ (Bias) ಮತ್ತು ಮಿತಿಗಳ ಬಗ್ಗೆ ನೀವು 2025ರ ಪ್ಯಾರಿಸ್ ಎಐ ಆಕ್ಷನ್ ಸಮಿಟ್​ನಲ್ಲಿ ಒತ್ತಿ ಹೇಳಿದ್ದಿರಿ. ಅಂದಿನಿಂದ ಇಂದಿನವರೆಗೆ ಪರಿಸ್ಥಿತಿ ಬದಲಾಗಿದೆಯೇ? ಭಾರತ ಇದನ್ನು ಹೇಗೆ ಎದುರಿಸುತ್ತಿದೆ?
ಎಐನಲ್ಲಿನ ಪೂರ್ವಗ್ರಹದ ಆತಂಕಗಳು ಇಂದಿಗೂ ಇವೆ. ಎಐ ಅಳವಡಿಕೆ ಹೆಚ್ಚಾದಂತೆ ಅಪಾಯಗಳೂ ಹೆಚ್ಚುತ್ತವೆ. ಎಐ ವ್ಯವಸ್ಥೆಗಳು ಅರಿವಿಲ್ಲದೆಯೇ ಲಿಂಗ, ಭಾಷೆ ಅಥವಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಆಧಾರದ ಮೇಲೆ ತಾರತಮ್ಯ ಎಸಗಬಹುದು. ಭಾರತಕ್ಕೆ ಇದು ದೊಡ್ಡ ಸವಾಲಾಗಿದೆ. ಏಕೆಂದರೆ ಪಾಶ್ಚಿಮಾತ್ಯ ದೇಶಗಳ ದತ್ತಾಂಶದ ಮೇಲೆ ತರಬೇತಿ ಪಡೆದ ಎಐ ಉಪಕರಣಗಳು ಭಾರತದ ಗ್ರಾಮೀಣ ಭಾಗದ ಅಥವಾ ಪ್ರಾದೇಶಿಕ ಭಾಷೆಗಳ ಬಳಕೆದಾರರಿಗೆ ಸರಿಯಾದ ಮಾಹಿತಿ ಅಥವಾ ಫಲಿತಾಂಶ ನೀಡದಿರಬಹುದು. ಇದನ್ನು ಸರಿಪಡಿಸಲು ಭಾರತವು ತನ್ನ ವೈವಿಧ್ಯಮಯ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ದತ್ತಾಂಶಗಳನ್ನು (Datasets) ಸೃಷ್ಟಿಸಲು ಒತ್ತು ನೀಡುತ್ತಿದೆ.
ಭಾರತವು ಇಂಜಿನಿಯರಿಂಗ್ ಪ್ರತಿಭೆಗಳ ಕೇಂದ್ರವಾಗಿದೆ. ಎಐ ಯುಗದಲ್ಲಿ ಇದನ್ನು ಮತ್ತಷ್ಟು ಬಲಪಡಿಸುವುದು ಹೇಗೆ?
ಭಾರತವು ಎಐ ಅನ್ನು ಕೇವಲ ಬಳಸುವ ದೇಶವಾಗದೆ, ಅದನ್ನು ಸೃಷ್ಟಿಸುವ ದೇಶವಾಗಬೇಕು. ನಮ್ಮ ಸ್ಟಾರ್ಟಪ್​ಗಳು ಮತ್ತು ಸಂಶೋಧನಾ ಸಂಸ್ಥೆಗಳು ಆಡಳಿತ ಮತ್ತು ಉತ್ಪಾದನಾ ವಲಯವನ್ನು ಸುಧಾರಿಸುವ ಎಐ ಪರಿಹಾರಗಳನ್ನು ಕಂಡುಹಿಡಿಯಬಲ್ಲವು. 2026-27ರ ಕೇಂದ್ರ ಬಜೆಟ್​ನಲ್ಲಿ ದತ್ತಾಂಶ ಕೇಂದ್ರಗಳು ಮತ್ತು ಕ್ಲೌಡ್ ಮೂಲಸೌಕರ್ಯಗಳಿಗೆ ಹೆಚ್ಚಿನ ಬೆಂಬಲ ನೀಡಲಾಗಿದೆ. ‘ಇಂಡಿಯಾ ಎಐ’ ಚೌಕಟ್ಟಿನಡಿಯಲ್ಲಿ ಸ್ಟಾರ್ಟಪ್​ಗಳಿಗೆ ಅಗತ್ಯ ತಂತ್ರಜ್ಞಾನ ನೆರವು ಒದಗಿಸಲಾಗುತ್ತಿದೆ. ನಾವು ಕೇವಲ ಪ್ರತಿಭೆಗಳನ್ನು ಪೋಷಿಸುತ್ತಿಲ್ಲ, ಬದಲಾಗಿ ಭಾರತವನ್ನು ಎಐ ಕ್ರಾಂತಿಯ ನಾಯಕನನ್ನಾಗಿ ಮಾಡಲು ಬೇಕಾದ ಮೂಲಸೌಕರ್ಯಗಳನ್ನು ನಿರ್ವಿುಸುತ್ತಿದ್ದೇವೆ.
ಎಐ ತಂತ್ರಜ್ಞಾನವು ನಮ್ಮ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಮೇಲೆ ಎಂತಹ ಪರಿಣಾಮ ಬೀರಲಿದೆ? ಐಟಿ ಕ್ಷೇತ್ರವನ್ನು ಉತ್ತೇಜಿಸಲು ಸರ್ಕಾರ ಏನು ಮಾಡುತ್ತಿದೆ?
ಎಐ ತಂತ್ರಜ್ಞಾನವು ಮಾಹಿತಿ-ತಂತ್ರಜ್ಞಾನ ಕ್ಷೇತ್ರವನ್ನು ಬದಲಿಸುತ್ತಿದೆಯೇ ಹೊರತು ಅದಕ್ಕೆ ಹಾನಿ ಮಾಡುವುದಿಲ್ಲ. 2030ರ ವೇಳೆಗೆ ಭಾರತದ ಐಟಿ ಕ್ಷೇತ್ರವು 400 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಸರ್ಕಾರವು ಇಂಡಿಯಾ ಎಐ ಮಿಷನ್ ಮೂಲಕ ಸ್ಟಾರ್ಟಪ್​ಗಳಿಗೆ ಕೈಗೆಟುಕುವ ದರದಲ್ಲಿ ಮೂಲಸೌಕರ್ಯ ಒದಗಿಸುತ್ತಿದೆ. ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಸುಸ್ಥಿರ ನಗರಗಳಿಗಾಗಿ ನಾಲ್ಕು ಸೆಂಟರ್ ಆಫ್ ಎಕ್ಸಲೆನ್ಸ್​ಗಳನ್ನು ಸ್ಥಾಪಿಸಲಾಗಿದೆ. ನಮ್ಮ ಐಟಿ ಕ್ಷೇತ್ರವು ಸೇವೆ ನೀಡುವುದಷ್ಟೇ ಅಲ್ಲದೆ, ಜಾಗತಿಕ ಮಟ್ಟದ ಎಐ ಉತ್ಪನ್ನಗಳನ್ನು ತಯಾರಿಸಬೇಕೆಂಬುದು ನಮ್ಮ ಗುರಿ.
ಎಐ ತಂತ್ರಜ್ಞಾನ ದುರುಪಯೋಗವಾಗುತ್ತಿರುವ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಇದರಿಂದ ರಕ್ಷಿಸಲು ಏನು ಕ್ರಮ ಕೈಗೊಳ್ಳಲಾಗಿದೆ?
ತಂತ್ರಜ್ಞಾನವು ಕೇವಲ ಒಂದು ಸಾಧನ, ಅದನ್ನು ಒಳ್ಳೆಯದಕ್ಕಾಗಿ ಬಳಸುವುದು ನಮ್ಮ ಕೈಯಲ್ಲಿದೆ. ಎಐ ಬಳಕೆಯಲ್ಲಿ ಮಾನವನ ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಸುರಕ್ಷತೆ ಅತ್ಯಗತ್ಯ. ಭಾರತವು 2025ರ ಜನವರಿಯಲ್ಲಿ ‘ಇಂಡಿಯಾ ಎಐ ಸೇಫ್ಟಿ ಇನ್​ಸ್ಟಿಟ್ಯೂಟ್’ ಅನ್ನು ಸ್ಥಾಪಿಸುವ ಮೂಲಕ ಸುರಕ್ಷಿತ ಎಐ ಬಳಕೆಗೆ ಮುಂದಾಗಿದೆ. ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸುವ ಡೀಪ್​ಫೇಕ್​ಗಳು, ಮಕ್ಕಳ ಸುರಕ್ಷತೆ ಮತ್ತು ಸೈಬರ್ ಅಪರಾಧಗಳ ವಿರುದ್ಧ ನಾವು ಕಠಿಣ ನಿಯಮಗಳನ್ನು ರೂಪಿಸಿದ್ದೇವೆ. ಎಐನಿಂದ ಸೃಷ್ಟಿಸಿದ ವಿಷಯಗಳಿಗೆ ವಾಟರ್​ವಾರ್ಕ್ ಕಡ್ಡಾಯಗೊಳಿಸಲಾಗಿದೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯು ಬಳಕೆದಾರರ ಹಕ್ಕುಗಳನ್ನು ರಕ್ಷಿಸುತ್ತದೆ.
ಎಐ ಕೆಲಸಗಳನ್ನು ಕಸಿದುಕೊಳ್ಳಲಿದೆ ಎಂಬ ಭಯ ಯುವಜನತೆಯಲ್ಲಿದೆ. ಇದನ್ನು ಸರ್ಕಾರ ಹೇಗೆ ಎದುರಿಸುತ್ತಿದೆ?
ಭಯಕ್ಕೆ ಸಿದ್ಧತೆಯೇ ಮದ್ದು. ಅದಕ್ಕಾಗಿಯೇ ನಾವು ಜನರನ್ನು ಮರು-ಕೌಶಲಗೊಳಿಸಲು(Re-skilling) ಆದ್ಯತೆ ನೀಡಿದ್ದೇವೆ. ಇತಿಹಾಸವನ್ನು ಗಮನಿಸಿದರೆ, ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಹೊಸ ಮಾದರಿಯ ಉದ್ಯೋಗಗಳು ಸೃಷ್ಟಿಯಾಗಿವೆ. ಎಐ ಎಂಬುದು ಕೆಲಸಗಳನ್ನು ಕಸಿದುಕೊಳ್ಳುವ ಸಾಧನವಲ್ಲ, ಅದು ಕೆಲಸದ ವೇಗ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ. ವೈದ್ಯರು, ಶಿಕ್ಷಕರು ಮತ್ತು ವಕೀಲರು ಹೆಚ್ಚಿನ ಜನರಿಗೆ ಸೇವೆ ನೀಡಲು ಇದು ಸಹಕಾರಿಯಾಗಲಿದೆ. ಸ್ಟಾ್ಯನ್​ಫೋರ್ಡ್ ಗ್ಲೋಬಲ್ ಎಐ ವೈಬ್ರೆನ್ಸಿ ಇಂಡೆಕ್ಸ್- 2025ರಲ್ಲಿ ಭಾರತವು 3ನೇ ಸ್ಥಾನದಲ್ಲಿದೆ, ಇದು ನಮ್ಮ ಯುವಜನತೆಯ ಸಾಮರ್ಥ್ಯವನ್ನು ತೋರಿಸುತ್ತದೆ.

200 ಬಿಲಿಯನ್ ಡಾಲರ್ ಹೂಡಿಕೆ

ಕೃತಕ ಬುದ್ಧಿಮತ್ತೆ (ಎಐ) ಮತ್ತು ದತ್ತಾಂಶ ಮೂಲಸೌಕರ್ಯ ಸಂಬಂಧಿತ ಕ್ಷೇತ್ರಗಳಲ್ಲಿ ಮುಂದಿನ 2 ವರ್ಷಗಳಲ್ಲಿ ಭಾರತ 200 ಬಿಲಿಯನ್ ಡಾಲರ್ (18 ಲಕ್ಷ ಕೋಟಿ ರೂ.) ಗಿಂತ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಮುಕ್ತ, ಕೈಗೆಟುಕುವ ಮತ್ತು ಅಭಿವೃದ್ಧಿ ಕೇಂದ್ರಿತ ಪರಿಹಾರಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತ ವಿಶ್ವಾಸಾರ್ಹ ಎಐ ಪಾಲುದಾರ ಆಗಿ ಕಾಣಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಸ್ಯಾನ್​ಫೋರ್ಡ್ ವಿಶ್ವವಿದ್ಯಾಲಯದ 2025ರ ಜಾಗತಿಕ ಎಐ ಸೂಚ್ಯಂಕದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ದೇಶದಲ್ಲಿ ದತ್ತಾಂಶ ಕೇಂದ್ರಗಳು (ಡೇಟಾ ಸೆಂಟರ್) ಗಳನ್ನು ಸ್ಥಾಪಿಸುವ ಮೂಲಕ ಕ್ಲೌಡ್ ಸೇವೆ ಒದಗಿಸುವ ಕಂಪನಿಗಳಿಗೆ 21 ವರ್ಷಗಳ ಟ್ಯಾಕ್ಸ್ ಹಾಲಿಡೇ ನೀಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇದು ಈ ಕ್ಷೇತಕ್ಕೆ ಉತ್ತೇಜನ ನೀಡುವ ನಿರೀಕ್ಷೆ ಇದೆ. ಈಗಾಗಲೇ 70 ಬಿಲಿಯನ್ ಡಾಲರ್ ಹೂಡಿಕೆಗೆ ಬದ್ಧತೆ ಸಿಕ್ಕಿದ್ದು ಇನ್ನು 90 ಬಿಲಿಯನ್ ಡಾಲರ್ ಹೂಡಿಕೆ ಘೋಷಣೆಯಾಗಿದೆ.
ಟಾಪ್ ಟೆಕ್ಕಿಗಳ ಅನುಪಸ್ಥಿತಿ ವೈಯಕ್ತಿಕ ಆಯ್ಕೆ: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಎನ್​ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಸೇರಿದಂತೆ ಹಲವು ಪ್ರಮುಖ ಟೆಕ್ಕಿಗಳು ಭಾಗವಹಿಸುತ್ತಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಶ್ವಿನಿ ವೈಷ್ಣವ್ ಶೃಂಗಸಭೆಯಲ್ಲಿ ಭಾಗವಹಿಸುವಿಕೆ ವೈಯಕ್ತಿಕ ಆಯ್ಕೆಯಾಗಿದೆ ಎಂದರು.
ಕ್ಷಮೆಯಾಚಿಸಿದ ಸಚಿವರು: ಎಐ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದವರು ಮೊದಲ ದಿನ ಎದುರಿಸಿದ ಸಮಸ್ಯೆಗಳಿಗಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕ್ಷಮೆಯಾಚಿಸಿದ್ದು, ಶೃಂಗಸಭೆಯ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗದಂತೆ ನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಎಐ ಶೃಂಗಸಭೆಯ ಮೊದಲ ದಿನ ಹಾಲ್​ಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು ಮತ್ತು ದೀರ್ಘ ಸರತಿ ಸಾಲುಗಳಲ್ಲಿ ಜನರು ನಿಂತಿದ್ದರು. ಶೃಂಗಕ್ಕೆ ಆಗಮಿಸಿದ್ದವರಿಗೆ ಸೂಕ್ತ ಸೂಚನೆಗಳೂ ಸಿಗದ ಕಾರಣ ಸಮಸ್ಯೆ ಉಲ್ಬಣಿಸಿತ್ತು.

ಬಿಗಿ ಭದ್ರತೆ

ದೆಹಲಿಯ ಭಾರತ್ ಮಂಟಪ್​ನಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026ಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. 4000ಕ್ಕೂ ಹೆಚ್ಚು ಎಐ-ಚಾಲಿತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 15 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net