ಇಂಡಿಯಾ ಒಕ್ಕೂಟದಲ್ಲಿ ಬಿರುಕು: ಜೂನ್ 8ರ ಮಹತ್ವದ ಸಭೆಯಿಂದ ಡಿಎಂಕೆ ಔಟ್! ಕಾಂಗ್ರೆಸ್‌ಗೆ ಸ್ಟಾಲಿನ್ ಶಾಕ್! Rift Between Congress- DMK

ಇಂಡಿಯಾ ಒಕ್ಕೂಟದಲ್ಲಿ ಬಿರುಕು: ಜೂನ್ 8ರ ಮಹತ್ವದ ಸಭೆಯಿಂದ ಡಿಎಂಕೆ ಔಟ್! ಕಾಂಗ್ರೆಸ್‌ಗೆ ಸ್ಟಾಲಿನ್ ಶಾಕ್!
ಇಂಡಿಯಾ ಒಕ್ಕೂಟದಲ್ಲಿ ಬಿರುಕು: ಜೂನ್ 8ರ ಮಹತ್ವದ ಸಭೆಯಿಂದ ಡಿಎಂಕೆ ಔಟ್! ಕಾಂಗ್ರೆಸ್‌ಗೆ ಸ್ಟಾಲಿನ್ ಶಾಕ್!
Published on
ಚೆನ್ನೈ: ದೇಶದಲ್ಲಿ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟವಾದ ‘ಇಂಡಿಯಾ’ (INDIA) ಒಕ್ಕೂಟಕ್ಕೆ ಜೂನ್ 8 ರಂದು ನವದೆಹಲಿಯಲ್ಲಿ ನಡೆಯಲಿರುವ ಮಹತ್ವದ ಸಭೆಯ ಮುನ್ನವೇ ಭಾರಿ ಪೆಟ್ಟು ಬಿದ್ದಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಸೋಲು ಮತ್ತು ನಾಟಕೀಯ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಡಿಎಂಕೆ(Rift Between Congress- DMK) ನಡುವಿನ ಸಂಬಂಧ ಸಂಪೂರ್ಣ ಹಳಸಿದೆ. ಇದರ ನೇರ ಪರಿಣಾಮವಾಗಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಜೂನ್ 8 ರ ಸಭೆಯನ್ನು ಬಹಿಷ್ಕರಿಸಲು ಅಧಿಕೃತವಾಗಿ ನಿರ್ಧರಿಸಿದೆ.
ತಮಿಳುನಾಡು ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ತಮಗೆ ಭಾರಿ ದ್ರೋಹ ಎಸಗಿದೆ ಎಂದು ಡಿಎಂಕೆ ಕಾರ್ಯಕರ್ತರು ಮತ್ತು ನಾಯಕರು ಆಕ್ರೋಶಗೊಂಡಿದ್ದಾರೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಡಿಎಂಕೆ, ಕಾಂಗ್ರೆಸ್ ಪಕ್ಷದ ದ್ರೋಹದಿಂದ ನಮ್ಮ ಕಾರ್ಯಕರ್ತರ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ. ಅವರ ಭಾವನೆಗಳನ್ನು ಗೌರವಿಸಿ, ಕಾಂಗ್ರೆಸ್ ಭಾಗವಹಿಸುತ್ತಿರುವ ಜೂನ್ 8 ರ ದೆಹಲಿ ಸಭೆಯಿಂದ ನಾವು ದೂರ ಉಳಿಯಲಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಮೈತ್ರಿಕೂಟದ ಸಭೆಯಿಂದ ದೂರವಿದ್ದರೂ, ದೇಶದ ಹಿತದೃಷ್ಟಿಯ ಇತರ ಪ್ರಮುಖ ವಿಷಯಗಳ ಪರವಾಗಿ ಧ್ವನಿ ಎತ್ತುವುದನ್ನು ಮುಂದುವರಿಸುವುದಾಗಿ ಡಿಎಂಕೆ ತಿಳಿಸಿದೆ.

ದಿಲ್ಲಿಯಲ್ಲಿ ಜೂನ್ 8 ಕ್ಕೆ ಮಹತ್ವದ ಸಭೆ

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜಂಟಿ ಕಾರ್ಯತಂತ್ರ ರೂಪಿಸಲು ಮತ್ತು ವಿಪಕ್ಷಗಳ ನಡುವೆ ಸಮನ್ವಯತೆಯನ್ನು ಬಲಪಡಿಸಲು ಜೂನ್ 8 ರಂದು ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಸಭೆಯನ್ನು ಕರೆಯಲಾಗಿದೆ. ಸುಮಾರು 15 ಪ್ರಮುಖ ವಿಪಕ್ಷಗಳ ನಾಯಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಒಕ್ಕೂಟದ ಇಬ್ಬರು ಪ್ರಮುಖ ಶಕ್ತಿಗಳಾದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಮತ್ತು ತಮಿಳುನಾಡಿನ ಡಿಎಂಕೆ (DMK) ಭೀಕರ ಸೋಲನ್ನು ಕಂಡು ಅಧಿಕಾರ ಕಳೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿತ್ತು. ಸಭೆಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಡೆದ ಮನೆಯಾಗುತ್ತಿರುವ ವಿರೋಧ ಪಕ್ಷಗಳ ಒಕ್ಕೂಟ!

ಮತ್ತೊಂದೆಡೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಈಗಾಗಲೇ ಇಂಡಿಯಾ ಒಕ್ಕೂಟದಿಂದ ಬಹಿರಂಗವಾಗಿಯೇ ಅಂತರ ಕಾಯ್ದುಕೊಂಡಿದ್ದು, ಜೂನ್ 8 ರ ಸಭೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗ ಡಿಎಂಕೆ ಕೂಡ ಸಭೆಯಿಂದ ಹೊರಗುಳಿಯುತ್ತಿರುವುದು ಮೈತ್ರಿಕೂಟದ ಒಗ್ಗಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ.
ಬಂಗಾಳದಲ್ಲಿ ಸೋತು ಸುಣ್ಣವಾಗಿರುವ ಮಮತಾ ಬ್ಯಾನರ್ಜಿ ಅವರು, ಬಂಗಾಳದಲ್ಲಿ ಟಿಎಂಸಿ ನಾಯಕರ ಮೇಲೆ ನಡೆಯುತ್ತಿರುವ ಆಪಾದಿತ ದಾಳಿಗಳ ವಿರುದ್ಧ ಒಕ್ಕೂಟದ ಬೆಂಬಲ ಕೋರಲು ಸಿದ್ಧರಾಗಿದ್ದಾರೆ. ಆದರೆ, ದಕ್ಷಿಣ ಭಾರತದ ಬಲಿಷ್ಠ ಶಕ್ತಿಯಾಗಿದ್ದ ಡಿಎಂಕೆ ಮೈತ್ರಿಯಿಂದ ದೂರ ಸರಿಯುತ್ತಿರುವುದು ಒಕ್ಕೂಟದ ಭವಿಷ್ಯದ ಮೇಲೆ ಕರಾಳ ಛಾಯೆ ಮೂಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net