

ನವದೆಹಲಿ: ತಮಿಳುನಾಡಿನ ನೀಲಗಿರಿಯ ಆನೆ ಕಾರಿಡಾರ್ಗಳ ವಿಷಯದಲ್ಲಿ ಸುಪ್ರೀಂ ಕೋರ್ಟ್ ತಳೆದಿರುವ ಕಠಿಣ ನಿಲುವು, ಪ್ರಕೃತಿಯ ಮೇಲಿನ ಮಾನವನ ಅತಿಕ್ರಮಣಕ್ಕೆ ನೀಡಿರುವ ಎಚ್ಚರಿಕೆಯಾಗಿದೆ. ರೆಸಾರ್ಟ್ಗಳಿಗಿಂತ ಆನೆಗಳ ಸಂಚಾರ ಮಾರ್ಗವೇ ಮುಖ್ಯವೆಂದು ನ್ಯಾಯಾಲಯ ಪ್ರತಿಪಾದಿಸಿರುವುದು ಪರಿಸರ ಸಮತೋಲನದ ದೃಷ್ಟಿಯಿಂದ ಐತಿಹಾಸಿಕ. ಅಭಿವೃದ್ಧಿಯ ಹೆಸರಿನಲ್ಲಿ ಮೂಕಪ್ರಾಣಿಗಳ ನೈಸರ್ಗಿಕ ಹಾದಿಯನ್ನು ಬಂದ್ ಮಾಡುವುದು ಕೇವಲ ಸ್ವಾರ್ಥವಲ್ಲ, ಅದು ಇಡೀ ಪರಿಸರ ವ್ಯವಸ್ಥೆಗೆ ಮಾಡುವ ದ್ರೋಹ.
ಪ್ರವಾಸೋದ್ಯಮದ ಲಾಭಕ್ಕಿಂತಲೂ ಜೀವವೈವಿಧ್ಯದ ಉಳಿವು ದೊಡ್ಡದು ಎಂಬುದು ಇಲ್ಲಿ ಸ್ಪಷ್ಟ. ಈ ಪ್ರಕರಣದ ವಿಚಾರಣೆಯನ್ನು ಜನವರಿಗೆ ಮುಂದೂಡಲಾಗಿದ್ದರೂ, ನ್ಯಾಯಾಲಯದ ಪ್ರಾಥಮಿಕ ಒಲವು ಪರಿಸರ ಸಂರಕ್ಷಣೆಯ ಪರವಾಗಿರುವುದು ಭರವಸೆ ಮೂಡಿಸಿದೆ. ಆನೆಗಳಿಗೆ ಸಂಚರಿಸುವ ಹಕ್ಕು ಮೊದಲು ಸಿಗಬೇಕು; ಕಾಂಕ್ರೀಟ್ ಕಾಡುಗಳಿಗಲ್ಲ. ನ್ಯಾಯಾಲಯದ ಈ ‘ಗಜಗಾಂಭೀರ್ಯದ’ ನಿರ್ಧಾರವು ಅತಿಕ್ರಮಣಕಾರರಿಗೆ ತಕ್ಕ ಪಾಠ. ಕೋರ್ಟ್ನ ಈ ನಿಲುವು ಎಲ್ಲ ರಾಜ್ಯಗಳಿಗೆ ಪಾಠವಾಗಬೇಕು. ಏಕೆಂದರೆ, ಈ ಸಮಸ್ಯೆ ತಮಿಳುನಾಡಿಗೆ ಮಾತ್ರ ಸೀಮಿತವಾಗಿಲ್ಲ.
ಆನೆಗಳ ಸಂಚಾರದ ದಾರಿಯನ್ನು ಮನುಷ್ಯ ಅತಿಕ್ರಮಿಸುತ್ತಿರುವುದರಿಂದಲೇ, ಅವು ನಾಡಿಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಆನೆ ಕೂಡ ಮನುಷ್ಯನಂತೆ ಸಂಘಜೀವಿ. ಅವುಗಳ ವಾಸಸ್ಥಾನಕ್ಕೆ ಧಕ್ಕೆ ಮಾಡದಿದ್ದರೆ ಆನೆಗಳು ಕಾಡಿನಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತವೆ ಮತ್ತು ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಥಾಕಥಿತ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಶೋಷಣೆ ಮೀತಿಮೀರಿದ್ದು, ಕಾಡಂಚಿನ ಪ್ರದೇಶಗಳಲ್ಲಿ ರೆಸಾರ್ಟ್, ಹೋಂಸ್ಟೇ ಸೇರಿದಂತೆ ಇನ್ನಿತರ ನಿರ್ಮಾಣ ಕಾರ್ಯಗಳು ತಲೆ ಎತ್ತುತ್ತಿವೆ.
ಇದರಿಂದ ಜನಸಂಚಾರ ಹೆಚ್ಚುತ್ತಿದ್ದು, ಆನೆಗಳು ಸೇರಿದಂತೆ ಇತರ ವನ್ಯಪ್ರಾಣಿಗಳಿಗೂ ತೊಂದರೆಯಾಗುತ್ತಿದೆ. ಅರಣ್ಯ ನಾಶದ ಪ್ರಮಾಣ ಏರಿಕೆಯಾಗಿರುವುದು ಕೂಡ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಒಂದು ವರ್ಷದಲ್ಲಿ ಆನೆಯ ಕುಟುಂಬವೊಂದು ಸಂಚರಿಸಲು 1 ಸಾವಿರ ಚ.ಕಿ.ಮೀ. ಅರಣ್ಯಪ್ರದೇಶ ಅಗತ್ಯ ಎನ್ನುತ್ತಾರೆ ವನ್ಯಜೀವಿ ರಕ್ಷಣಾ ತಜ್ಞರು. ಆದರೆ, ವಿಶಾಲವಾದ ಕಾಡುಗಳ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದು ಮನುಷ್ಯ ತನ್ನ ಆಪತ್ತಿಗೆ ಆಹ್ವಾನ ನೀಡಿದಂತೆ.
ಆನೆ ಕಾರಿಡಾರ್ ಸುತ್ತಮುತ್ತ ಜನವಸತಿ ಪ್ರದೇಶಗಳು ಹೆಚ್ಚುತ್ತಿದ್ದು, ಸ್ಥಳೀಯ ಸರ್ಕಾರಗಳು ಅಲ್ಲಿಯ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಆನೆ ಪಥವನ್ನು ಜನವಸತಿಮುಕ್ತಗೊಳಿಸಬೇಕು. ಕರ್ನಾಟಕ ಕೂಡ ಆನೆಗಳ ಹಲವು ಕಾರಿಡಾರ್ಗಳನ್ನು ಹೊಂದಿದ್ದು, ಗಜರಕ್ಷಣೆ ನಿಟ್ಟಿನಲ್ಲಿ ಸಂವೇದನೆ ಮಿಡಿಯಲಿ, ಕಾಳಜಿ ಹೆಚ್ಚಲಿ ಎಂಬುದೇ ಆಶಯ.