ಬೇನೆಯುಳ್ಳವರ ಸಾಗಾಟಕ್ಕೆ ಬಳಸುವ ಬೇನೆಮಂಚ

cot
cot
Published on
ವಿಚಿತ್ರ ಏನಿಲ್ಲ, ಸರಿಯಾಗಿಯೇ ಇದೆ. ಬೇನೆಯುಳ್ಳವರ ಸಾಗಾಟಕ್ಕೆ ಬಳಕೆಯಾಗುವುದು ಬೇನೆಮಂಚ. ಇದೇ ಪದವನ್ನು ಸೂಚಿಸುತ್ತ 25ಕ್ಕೂ ಹೆಚ್ಚು ಪ್ರವೇಶಿಕೆಗಳು ಬಂದಿವೆ: ಮೀನಾಕ್ಷಿ ಟಕ್ಕಳಕಿ, ಭಾರತಿ ಪ್ರಕಾಶ್, ಶಿವಕುಮಾರ್ ಸಿಂಗಟಗೆರೆ, ಶ್ರೀನಿವಾಸಭಟ್ ಹೊಸನಗರ, ಕಾಡೇಶ ವಿ.ಬಿ., ಚಂಪಾವತಿ ಜೋಶಿ, ಉಮಾ ಪ್ರಭು, ಪರಮೇಶ್ವರ ಶರ್ಮ, ಸುರೇಂದ್ರ ಪೈ, ರಶ್ಮಿ ರಾಜೇಂದ್ರ, ನರೇಂದ್ರನಾಥ ಮೈಸೂರು, ರೇಖಾ ರಾಮಕೃಷ್ಣ, ಭವಾನಿ ಪ್ರಸಾದ್, ಸುಜನಾ ನಿಟ್ಟೂರು ಮುಂತಾದವರು. ಮಾಮೂಲಿ ಮಂಚದಂತಲ್ಲದೆ ಸ್ಟ್ರೆಚರ್​ಗಾದರೆ ಗಾಲಿಗಳಿರುತ್ತವೆ ಎಂಬ ದೃಷ್ಟಿಯಿಂದ, ಬೇನೆಮಂಚದಷ್ಟು ನಿರ್ದಿಷ್ಟ ಅರ್ಥ ಕೊಡಲಾರದಾದರೂ, ‘ಗಾಲಿಮಂಚ’ ಸಹ ಯೋಗ್ಯವೇ. ಸೂಚಿಸಿದವರು: ಎನ್.ಕೆ ಸುಬ್ಬಣ್ಣ, ರಂಗನಾಥ ಟಿ.ಕೆ., ಸೌಭಾಗ್ಯ ಸುಬ್ರಹ್ಮಣ್ಯ, ಪ್ರಭುಪ್ರಸಾದ್ ನಡುತೋಟ, ಸಾನ್ವಿ ರಾವ್, ಮಮತಾ ಕುಂದಾಪುರ ಮತ್ತಿತರರು. ಗಾಲಿಮಂಚ ಎಂದಾಗ ಪುರಂದರದಾಸರ ‘ಶೃಂಗಾರವಾಗಿಹುದು ಶ್ರೀಹರಿಯ ಮಂಚ...’ ಕೀರ್ತನೆಯಲ್ಲಿ ಬರುವ ‘ಗಾಳಿ ನುಂಗುವ ಮಂಚ’ ಸಹ ನೆನಪಾದೀತು. ಸರ್ಪವು ಗಾಳಿಯನ್ನಷ್ಟೇ ಸೇವಿಸಿ ಬದುಕಬಲ್ಲದೆಂದು ಪ್ರತೀತಿ. ಶ್ರೀಹರಿಯು ಪವಡಿಸಿರುವ ಆದಿಶೇಷನನ್ನು ದಾಸರು ಬಣ್ಣಿಸಿದ್ದು ಹಾಗೆ.
ರೋಗಿಯು ಮಲಗಿರುವ ಸ್ಟ್ರೆಚರ್​ಅನ್ನು ಸಹಾಯಕರು ಕೈಗಳಿಂದ ದೂಡಿ ಸಾಗಿಸುತ್ತಾರೆಂಬ ದೃಷ್ಟಿಯಿಂದ ಕೈಮಂಚ ಆಗಬಹುದೆಂದವರು: ಲಕ್ಷ್ಮಣ ಬಿ.ಎನ್., ಶ್ರೀಕಾಂತ ಗೋಡಖಿಂಡಿ, ಕೆ.ಎಲ್ ಕಾರಂತ, ಎನ್.ವಿ. ಶಂಕರ್, ಬಿ.ಆರ್. ಚಂದ್ರಮೌಳಿ, ಅಂಜನಾ ತುಮಕೂರು, ಆರ್.ವಿ. ಮೂರ್ತಿ, ಶಶಿಕಲಾ ಜಿ.ಕೆ., ಸಿದ್ಧರಾಮೇಶ್ವರ ಟಿ., ಉಮೇಶ ಪ್ರಭು, ಅಶೋಕ ಹಂದಿಗೋಳ, ಡಾ. ಎಂ.ಸಿ. ಪಾಟೀಲ, ರಾಮಚಂದ್ರ ಬಡಗಾಬೆಟ್ಟು, ಗೋಪಿನಾಥ ಭರಮಸಾಗರ, ಮಂಜುಳಾ ಪ್ರಭು, ಶೋಭಾ ಪಿ. ಭಟ್ಟ, ಷಡಕ್ಷರಮುನಿ ಸ್ವಾಮೀಜಿ, ಜಿ. ನಾರಾಯಣ ರಾವ್, ಕಂಪಲಾಪುರ ಶ್ರೀನಿವಾಸ್, ಅಂಜಲಿ ಬರ್ವೆ, ಶಂಕರಕುಮಾರ್ ಎಂ.ಎಸ್., ಮಿಸ್ಕಿನ್ ಕುಟುಂಬ ಸದಸ್ಯರು, ಗಗನ ಮತ್ತು ಜ್ಯೋತಿಕಾ ಶಿವಮೊಗ್ಗ ಮುಂತಾದವರು. ಕನ್ನಡವಷ್ಟೇ ಅಲ್ಲದೆ ಬೇರೆ ಭಾರತೀಯ ಭಾಷೆಗಳಲ್ಲೂ ಬಳಸಬಹುದಾದ ‘ಚಕ್ರಮಂಚ’ (ಬಲರಾಮ ಮೈಯ್ಯ), ‘ಚರಮಂಚ’ (ಸಂತೋಷರಾವ್ ಕಡಬ, ಸೀತಾ ವ್ಯಾಸಮುದ್ರಿ, ವೀಣಾ ಹಂಪಿಹೊಳಿ, ಫಕೀರಪ್ಪ ಬೊಮ್ಮನ್ನವರ) ಮತ್ತು ‘ಚರಶಯ್ಯೆ’ (ಬಿ.ಎಸ್. ನಟರಾಜು, ಕೃಷ್ಣ ಬರ್ವೆ, ವಿಜಯಕಲ ಬೆಂಗಳೂರು, ಚಂದ್ರಕಾಂತ ಜೋಶಿ ಕಲ್ಬುರ್ಗಿ) ಸಮಂಜಸವೆನಿಸುವ ಸುಸಂಸ್ಕೃತ ಪದಗಳು.
ಇನ್ನು, Mop ಎಂಬ ಪದವನ್ನು ಕನಾಕಪ ಅಂಕಣದಲ್ಲಿ ಕೇಳಲು ಪ್ರೇರಣೆ ಏನೆಂಬುದನ್ನೂ ಒಬ್ಬ ಓದುಗರಿಂದಲೇ ತಿಳಿದುಕೊಳ್ಳೋಣ. ಹುಬ್ಬಳ್ಳಿಯಿಂದ ಸುದರ್ಶನ ಭಟ್ ಕೆಲದಿನಗಳ ಹಿಂದೊಮ್ಮೆ ಹೀಗೆ ಬರೆದುಕಳುಹಿಸಿದ್ದರು: ‘ನಮ್ಮ ಮನೆಯಲ್ಲಿ ಮೊದಲೆಲ್ಲಾ ಒಂದು ಹಳೆಯ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಆಮೇಲೆ ಅದನ್ನು ಹಿಂಡಿ, ಬಗ್ಗಿ ಅಥವಾ ಕುಳಿತು ನೆಲ ಒರೆಸುವುದು ವಾಡಿಕೆಯಾಗಿತ್ತು. ಒಮ್ಮೆ ಮನೆಗೆ ಬಂದ ಅತಿಥಿಯೊಬ್ಬರು ಈಗ ಪೇಟೆಯಲ್ಲಿ Mop ಅಂತ ನೆಲ ಒರೆಸುವುದು ಸಿಗುತ್ತದೆ, ನಿಂತೇ ನೆಲ ಒರೆಸಬಹುದು, ಬಗ್ಗುವ ಕೆಲಸ ಇಲ್ಲ, ತ್ರಾಸಾಗುವದಿಲ್ಲ, ನಾವು ಅದನ್ನೇ ಉಪಯೋಗಿಸುತ್ತಿದ್ದೇವೆ ಅಂತಂದರು. ನಾನೊಮ್ಮೆ ಆಸ್ಪತ್ರೆಗೆ ಹೋದಾಗ ಅಲ್ಲಿಯೂ ಞಟಟನಿಂದ ನೆಲ ಒರೆಸುವುದನ್ನು ನೋಡಿದ್ದೆ. ಆಮೇಲೆ ಅಂಗಡಿಯಲ್ಲಿ ಅದನ್ನು ಕೈಯಿಂದಲೇ ತೋರಿಸಿ ಖರೀದಿ ಮಾಡಿ ಮನೆಗೆ ತಂದೆ. ನಮಗೆ Mop ಅನ್ನುವುದು ಹೊಸ ಶಬ್ದವಾಗಿತ್ತು. ನನ್ನ ಹೆಂಡತಿ ವಾರಿಜಳಿಗೆ ಇದು ನೆಲ ಒರೆಸುವುದು ಅಂತ ಗೊತ್ತಾಯಿತು. ಅವಳೇನೂ ಹೆಚ್ಚಿಗೆ ಕಲಿತವಳಲ್ಲ. ತಂದದ್ದು ಅನುಕೂಲವಾಯಿತು. ಅದಕ್ಕೆ ಆಕೆ ಇಟ್ಟ ಹೆಸರು ನನಗೆ ಆಶ್ಚರ್ಯವೆನಿಸಿತು. ಅದನ್ನವಳು ‘ಒರೆಸುಗುಟ್ಟ’ ಅಂತ ಹೇಳಬೇಕೇ! ನನಗೆ ನಗು ಬಂತು. ಅವಳಿಗೆ Mop ಅಂತ ತಿಳಿಸಿಯೇ ಇಲ್ಲವಾಗಿತ್ತು. ಏನೋ ನೆಲ ಒರೆಸುವುದನ್ನು ತಂದಿದ್ದಾರೆ ಅಂತ ಅದರ ಉದ್ದನೆಯ ಕೋಲನ್ನು ನೋಡಿ ‘ಒರೆಸುಗುಟ್ಟ’ ಅಂದಿದ್ದಳು. ಬೇಲಿಗೆ ಹಾಕುವ ಕೋಲುಗಳಿಗೆ ‘ಗೂಟ’ ಎನ್ನುತ್ತೇವಷ್ಟೆ? ಅದು ನಮ್ಮ ಆಡುಭಾಷೆಯಲ್ಲಿ ‘ಗುಟ್ಟ’ ಆಗಿದೆ. ನಾನೂ ವಿಚಾರ ಮಾಡಿದೆ. ಈ ಪದ ಸರೀನೇ ಇದೆಯಲ್ಲ!? Mop ಕೆಲಸ ಒರೆಸುವುದು, ಮತ್ತು ನೋಡಲಿಕ್ಕೆ ಅದೊಂದು ಉದ್ದನೆಯ ಕೋಲು ಆಗಿರುವುದು. ಈಗ ನಮ್ಮನೆಯಲ್ಲಿ ‘ಒರೆಸುಗುಟ್ಟ’ ಹೆಸರೇ ಪಕ್ಕಾ ಆಗಿದೆ. ಆದರೆ, ‘ಒರೆಸುಕೋಲು’ ಇನ್ನೂ ಚಂದವೆನಿಸಬಹುದು.
ಹೀಗೆ ಥಟ್ ಅಂತ ಹೊಳೆದ ಪದಗಳೇ ಕೆಲವೊಮ್ಮೆ ಪರಿಣಾಮಕಾರಿಯೂ ದೀರ್ಘಬಾಳಿಕೆಯವೂ ಆಗುತ್ತವೆ. ‘ಒರೆಸುಕೋಲು’ ಅಥವಾ ‘ಒರೆಸುಗೋಲು’ ಇನ್ನೂ ಕೆಲವರ ಆಯ್ಕೆಯೂ ಆಗಿದೆ: ಅಕ್ಷರ ಸುಬ್ರಹ್ಮಣ್ಯ ನೈಭಿ, ಪಿ.ಜೆ.ರಾಘವೇಂದ್ರ, ಸೌಮ್ಯಾ ಜಿ.ಪ್ರಸಾದ್, ವಸುಧಾ ಕಟ್ಟಿ, ಯೋಗೀಶ ಕಾಮತ್, ನಳಿನಿ ಭಟ್ ಸೇರಾಜೆ, ಡಾ.ದಯಾನಂದ ಭಟ್ಟ, ಅಪ್ಪು ಮುತ್ಯ, ವನಿತಾ ಸಿದ್ಧಾಪುರ, ಯಶೋದಾ ಎಂ.ಗೋಪಿ, ಸುಧಾಕರ ನಾಯಕ್, ಗಿರೀಶ ಫಡ್ಕೆ, ಕಮಲಾಕ್ಷಿ ಮೈಸೂರು, ಎ.ವಿ. ಗಿರೀಶ್, ಯು.ಪರಮೇಶ್ವರ ಭಟ್ಟ, ಮಂಜುನಾಥ ಡಿ.ಎಸ್., ವಸಂತಕುಮಾರ್ ಕಲ್ಯಾಣಿ, ಶಶಿಕಲಾ ನರೇಂದ್ರನಾಥ್ ಮುಂತಾದವರು. ಬರೀ ‘ಒರಸುಗ’ ಅಥವಾ ‘ಒರೆಸುಗೆ’ ಎಂದು ಸೂಚಿಸಿ ಹಲವಾರು ಪ್ರವೇಶಿಕೆಗಳು ಬಂದಿವೆ. ಆದರೆ ಇಂಗ್ಲಿಷ್​ನಲ್ಲಿ Mopನ ಅರ್ಥmop bundle of coarse yarn, cloth, etc., fastened to the end of a stick for cleaning or spreading pitch on a ship's decks ಎಂದು ಸುಮಾರು 15ನೆಯ ಶತಮಾನದಿಂದಲೂ ಇರುವುದು. ಆದ್ದರಿಂದ ಉದ್ದನೆಯ ಕೋಲಿನ ಚಿತ್ರಣ ಮೂಡಲೇಬೇಕು. ಈ ನಿಟ್ಟಿನಲ್ಲಿ ‘ಒರೆಸುದೋಟಿ’ (ವಿದ್ಯಾಶಂಕರ ಶರ್ಮ), ‘ಒರೆಸುಕಂಬಿ’ (ಗಂಗಾ ಹೆಗಡೆ), ‘ಒರೆಸುಪೊರಕೆ’ (ನಾಗಮಣಿ ಶಾಂಪೂರ್) ಕೂಡ ಸೂಕ್ತವೆನಿಸುತ್ತವೆ. ‘ಕೋಲರಿವೆ’ (ಪ್ರತಿಭಾ ಮಯ್ಯ, ಸಂಜಯ ಕುಲಕರ್ಣಿ, ಮಿಥುನ್ ಗುಡ್ಡೆತೋಟ) ಸಹ ಕಡೆಗಣಿಸಲಾಗದು.
ಹಳೆಯ ಬಟ್ಟೆಯನ್ನು, ದಪ್ಪನೂಲಿನ ಎಳೆಗಳನ್ನು ಉದ್ದದ ಕೋಲಿನ ತುದಿಗೆ ಕಟ್ಟಿ ಸ್ವಚ್ಛಗೊಳಿಸುವ ಸಾಧನವಾಗಿಸಿದರೆ ಅದಕ್ಕೆ ‘ತೊಡಪ’ ಎಂಬ ಅಚ್ಚಕನ್ನಡ ಶಬ್ದವಿದೆ. ಇದಕ್ಕೆ ಕಸಾಪ ನಿಘಂಟುವಿನಲ್ಲಿ ಕೊಟ್ಟಿರುವ ಅರ್ಥ ತೇವವಾದ ಹಡಗಿನ ಅಟ್ಟವನ್ನು ಅಥವಾ ನೆಲವನ್ನು ಗುಡಿಸಲು ಉಪಯೋಗಿಸುವ, ರಬ್ಬರಿನ ಅಲಗನ್ನು ಉದ್ದವಾದ ಹಿಡಿಗೆ ಅಳವಡಿಸಿ ಮಾಡಿದ ಸಲಕರಣೆ ಎಂದು. ವಿಶೇಷವಾಗಿ ಹಡಗಿನಲ್ಲಿ ಬಳಕೆ ಎಂಬುದನ್ನು ಗಮನಿಸಿದರೆ ಇಂಗ್ಲಿಷ್ ವ್ಯಾಖ್ಯೆಗೆ ಅನುಗುಣವಾಗಿಯೇ ಇದೆ! ಧೂಳು ಒರೆಸುವುದಕ್ಕೆ ಬಳಸುವುದಾದ್ದರಿಂದ ‘ಧೂಳುತೊಡಪ’ ಎಂದವರು ಹನುಮಂತಪ್ಪ ಬಣಕಾರ, ಸಿದ್ದನಗೌಡ ಮುದಿಗೌಡ್ರ, ಯಮನಪ್ಪ ಕೊಟ್ನಿಕಲ್, ಗಿರೀಶ ಕೆ.ಎಸ್., ಗೋಪಾಲಕೃಷ್ಣ ಹೆಮ್ಮಿಗೆ, ಎಂ.ಕೆ. ಬದರಿನಾಥ್ ಮತ್ತು ಜಿ.ಎಚ್. ಸಂಕಪ್ಪ. ‘ದುಂಬುತೊಡಪ’ (ದುಂಬು = ಧೂಳು) ಎಂಬ ಪದ ಸೂಚಿಸಿದವರು: ರಾಧಾಮಣಿ ಶಿವಮೊಗ್ಗ ಮತ್ತು ಕಸ್ತೂರಿ ನಾಯಕ್.
ಕೊನೆಯದಾಗಿ Locker. ತಿಜೋರಿ ಎಂಬ ಪ್ರಚಲಿತ ಪದ ಇರುವಾಗ ಹೊಸದೇಕೆ ಎಂದು ನಯನಕುಮಾರ್ ಕಾಡಹಳ್ಳಿ, ಸಂಧ್ಯಾ ಅಡಿಗ, ಶೀಲಾ ಜಿ.ಪಿ, ಭಾಗ್ಯಶ್ರೀ ಬೆಂಗಳೂರು, ರವೀಂದ್ರ ಇತಾಪೆ, ಎಂ.ಪಿ. ಶ್ರೀಧರ್, ಅನಿತಾ ಭಟ್, ಭಾಗ್ಯಶ್ರೀ ಕುಲಕರ್ಣಿ, ಕಡೂರು ದೇವೇಂದ್ರ, ಸಂಜೀವ ಜೋಶಿ, ಪಂಪಣ್ಣಗೌಡ ಯಾದಗಿರಿ ಮುಂತಾದವರ ಅಭಿಪ್ರಾಯ. ಸ್ವಾರಸ್ಯವೆಂದರೆ ತಿಜೋರಿ ಕನ್ನಡದ್ದೇ ಪದವೆಂಬಂತೆ ರೂಢಿಯಲ್ಲಿದೆಯಾದರೂ ಮೂಲತಃ ಇಂಗ್ಲಿಷ್​ನ ಖ್ಟಛಿಚಠ್ಠ್ಟ ಹಿಂದಿ ಮತ್ತು ಮರಾಠಿಗಳ ಮೂಲಕ ಕನ್ನಡಕ್ಕೆ ಬಂದದ್ದೆನ್ನುತ್ತದೆ ಕಸಾಪ ನಿಘಂಟು. ಅದಕ್ಕಿಂತ ‘ಭದ್ರ ಕಪಾಟು’ ಆಗಬಹುದೆಂದು ಗೌರ ಅಜ್ಜಪ್ಪ, ರಾಜೇಶ್ವರಿ ಶಿವಮೊಗ್ಗ, ಬಿ. ರಾಮಕೃಷ್ಣ ರಾವ್, ಪೊ›. ಮಹಾಬಲೇಶ್ವರ ಹೆಗಡೆ, ನಿರಂಜನಕುಮಾರ್ ಜಿ.ಆರ್., ವಸಂತಲಕ್ಷ್ಮಿ ರಾಮಚಂದ್ರ, ಕುಸುಮ ಡಿ.ಎನ್., ಮಧುಕರ ಸೊಪ್ಪಿನ, ಎಂ.ಕೆ. ರಮೇಶ್, ಸುವರ್ಣಾ ಕೌಲ್ಗೀಕರ್, ರಚಿತಾ ಅಶ್ವಥಪುರ, ಶೋಭಾ ತಿಪಟೂರು ಮುಂತಾದವರ ಆಯ್ಕೆ. ಗುಟ್ಟಾಗಿ ಅನ್ಯರಿಗೆ ತಿಳಿಯದಂತೆ ಹಣ ಒಡವೆ ಮುಂತಾದವನ್ನು ಇಡುವ ಗೂಡಿನಂತಹ ಸ್ಥಳ ಆದ್ದರಿಂದ ‘ಗುಟ್ಟುಗೂಡು’ ಆಗಬಹುದೆನ್ನುವ ವೇದಾ ವಿ.ಪುರೋಹಿತ್ ಸಲಹೆಯೂ ಆಕರ್ಷಕವಾಗಿದೆ. ಪುರಾಣಗಳಲ್ಲಿ ಹಾಸುಹೊಕ್ಕಿರುವ ಅನೇಕ ನಂಬಿಕೆಗಳಲ್ಲಿ ಸರ್ಪವು ನಿಧಿಯನ್ನು ಕಾಯುತ್ತದೆ ಎಂಬುದೂ ಒಂದು. ಯಾರೂ ಭೇದಿಸಲಾಗದ ರಕ್ಷಣಾಕವಚವನ್ನು ‘ಸರ್ಪಗಾವಲು’ ಎಂದು ಕರೆಯುವುದರಲ್ಲಿ ಸರ್ಪಕ್ಕೂ ಭದ್ರತೆಗೂ ಇರುವ ಸಂಬಂಧವನ್ನು ತೋರಿಸುತ್ತದೆ. Treasury ಸಹ ಅತ್ಯಂತ ಭದ್ರತೆಯಿಂದ ಕೂಡಿರುತ್ತಾದ್ದರಿಂದ ಸರ್ಪಗೂಡು ಹೊಂದಿಕೆಯಾಗಬಹುದು ಎನ್ನುತ್ತಾರೆ ಎನ್.ಆರ್. ರಮೇಶ್. ವಾಚ್ಯಾರ್ಥದಿಂದ ಹೆದರಿಕೆ/ಹೇವರಿಕೆ ಎನಿಸಬಹುದಾದರೂ ಧ್ವನ್ಯಾರ್ಥವಾಗಿ ಅವರು ಹೇಳಿರುವುದರಲ್ಲಿ ತಥ್ಯವಿದೆ. ಅದಕ್ಕಿಂತಲೂ ಮುಖ್ಯವಾಗಿ, ಪದ ಕಟ್ಟುವ ಚಟುವಟಿಕೆಯಲ್ಲಿ ಓದುಗರು ಒಬ್ಬರಿಗಿಂತ ಒಬ್ಬರು ಕುಶಾಗ್ರಮತಿಗಳು ಎನ್ನುವುದರಲ್ಲಿ ಸತ್ಯವಿದೆ! ಬೆಂಗಳೂರಿನ ಕುಮರನ್ಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಸಾನ್ವಿ ರಾವ್ ಈ ಸಲ ಭಾಗವಹಿಸಿರುವ ಹೊಸ ಸೇರ್ಪಡೆ. ಶಾಲಾಮಕ್ಕಳು ಕನ್ನಡ ದಿನಪತ್ರಿಕೆ ಓದುತ್ತಾರೆ, ಇಂತಹ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಾರೆ ಎನ್ನುವುದು ಸಂತಸದ ಸಂಗತಿ, ಭರವಸೆಯ ಬೆಳಕು.
ಈ ವಾರದ ಮೂರು ಪದಗಳು:
1. Gimmick: ಯೇನ ಕೇನ ಪ್ರಕಾರೇಣ ಪ್ರಸಿದ್ಧರಾಗಬಯಸುವವರೂ, ಗೆಲ್ಲುವುದ ಕ್ಕೋಸ್ಕರ ರಾಜಕಾರಣಿಗಳೂ, ಮಾಡುವ ತಂತ್ರಗಳಿಗೊಂದು ಪದ ಬೇಕು.
2. Imposition: 50 ಸಲ ಬರಿ, 100 ಸಲ ಬರಿ ಅಂತೆಲ್ಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ವಿಧಿಸುತ್ತಿದ್ದ ಬರಹದ ಕೆಲಸವನ್ನು ಏನನ್ನೋಣ?
3. Start-up: ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಭಾರಿ ಉತ್ತೇಜನ ಪಡೆಯುತ್ತಿರುವ ಉದ್ಯಮವಿಧಾನ. ಇದಕ್ಕೊಂದು ಚಂದದ ಪದ ಕಂಡುಕೊಳ್ಳೋಣ.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್
ಮತ್ತು ಅಂಕಣ ಬರಹಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net