_1765649762112.webp?w=480&auto=format%2Ccompress&fit=max)
_1765649762112.webp?w=480&auto=format%2Ccompress&fit=max)
ತಮಿಳುನಾಡಿನ ಮದುರೈ ಬಳಿಯ ತಿರುಪರಾನಕುಂದ್ರಂ ಬೆಟ್ಟದ ಧರ್ಮಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಿಸುವ ವಿಷಯ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಡಿಎಂಕೆ ಈ ಪ್ರಕರಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಆದರೆ, ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ವಿಧಿಸುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಎಲ್ಲ ಬೆಳವಣಿಗೆಗಳ ವಿವರ ಇಲ್ಲಿದೆ.
ತಮಿಳುನಾಡಿನ ಮದುರೈ ಬಳಿಯ ತಿರುಪರಾನಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವ ಸಂಪ್ರದಾಯ (ಕಾರ್ತಿಗೈ ದೀಪಮ್ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ಬೆಟ್ಟದ ಮೇಲಿನ ’ದೀಪತೂಣ್’ (ಕಲ್ಲಿನ ಸ್ತಂಭ)ದಲ್ಲಿ ನಡೆಯುತ್ತದೆ. ಈ ಸ್ಥಳವು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಭಾಗವಾಗಿದ್ದು, ಸಿಕ್ಕಂದರ್ ಬದುಷಾ ದರ್ಗಾದ ಬಳಿಯಲ್ಲಿದೆ. 1926ರವರೆಗೂ ಕಾರ್ತಿಕ ದೀಪೋತ್ಸವದ ಅಚರಣೆ ಜಾರಿಯಲ್ಲಿತ್ತು. ಆದರೆ, ಒಂದು ಕೋಮಿನ ವಿರೋಧದ ಹಿನ್ನೆಲೆಯಲ್ಲಿ ಇದು ನಿಂತುಹೋಯಿತು.
ಕಾರ್ತಿಕ ದೀಪವನ್ನು ಬೆಳಗುವ ಸಂಪ್ರದಾಯ ಪುನರ್ ಆರಂಭಿಸಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದು, ಈ ಕಾರ್ಯಕ್ರಮ ಆಯೋಜನೆಗೆ ಮುಂದಾದದ್ದೇ ವಿವಾದದ ಸ್ವರೂಪ ಪಡೆದುಕೊಂಡಿತು. ಇದೇ ಬೆಟ್ಟದಲ್ಲಿ ದರ್ಗಾ ಇರುವುದರಿಂದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಡೆಸಿದರೆ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.
ಮದುರೈಯಿಂದ 10 ಕಿ.ಮೀ. ಅಂತರದಲ್ಲಿರುವ ಐತಿಹಾಸಿಕ ತಿರುಪರಾನಕುಂದ್ರಂ ಬೆಟ್ಟವು ಮುರುಗನ್ (ಸುಬ್ರಹ್ಮಣ್ಯ ಸ್ವಾಮಿ) ದೇವರಿಗೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದ್ದು, ಈ ದೇವಸ್ಥಾನ ಜಾಗೃತ ಸ್ಥಳವೆಂಬ ಹಿರಿಮೆಯನ್ನು ಹೊಂದಿದೆ. 8ನೇ ಶತಮಾನದಲ್ಲಿ ಪಲ್ಲವರ ಕಾಲದಲ್ಲಿ ಈ ಮಂದಿರ ನಿರ್ವಣವಾಗಿರುವ ಬಗ್ಗೆ ಐತಿಹಾಸಿಕ ದಾಖಲೆಗಳಿವೆ. ತಮಿಳುನಾಡು ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೆ ಕೆಲ ಸಮಾಜವಿರೋಧಿ ಶಕ್ತಿಗಳು ಬೆಟ್ಟದಲ್ಲಿ ಮಾಂಸ ಸೇವನೆ ಮಾಡುತ್ತಿರುವ ಚಿತ್ರಗಳು 2025ರ ಫೆಬ್ರವರಿಯಲ್ಲಿ ವೈರಲ್ ಆದ ಬಳಿಕ, ಬೆಟ್ಟದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಹಿಂದೂ ಭಕ್ತರು ಆಕ್ರೋಶ ವ್ಯಕ್ತಪಡಿಸಿರು.
ಈ ಮಧ್ಯೆ, ಕೆಲವು ಮುಸ್ಲಿಂ ಸಂಘಟನೆಗಳು ಬೆಟ್ಟವನ್ನು ‘ಸಿಕ್ಕಂದರ್ ಮಲೈ’ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದು, ಪರಿಸ್ಥಿತಿ ಉದ್ವಿಗ್ನತೆಗೆ ಕಾರಣವಾಯಿತು. 2025ರ ಅಕ್ಟೋಬರ್ನಲ್ಲಿ ಹೈಕೋರ್ಟ್ ಬೆಟ್ಟದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿದೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ಈ ವಿಷಯವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿವೆ. ಬಿಜೆಪಿ ಕೋಮುಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಡಿಎಂಕೆ ಆಪಾದಿಸಿದರೆ, ಡಿಎಂಕೆ ಸರ್ಕಾರ ಹಿಂದೂ ಜನರ ಹಕ್ಕು ಕಸಿದುಕೊಂಡು, ಅವರ ಭಾವನೆಗಳನ್ನು ಘಾಸಿಗೊಳಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಮಾತ್ರವಲ್ಲ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಡಿಎಂಕೆ ಸರ್ಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ. ಅದರಲ್ಲೂ, ವಿವಾದ ಶಮನಗೊಳ್ಳುವ ಮುಂಚೆಯೇ ಡಿಎಂಕೆ ಸರ್ಕಾರ ನ್ಯಾ. ಸ್ವಾಮಿನಾಥನ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಯತ್ನಿಸುತ್ತಿದ್ದು, ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ.
ಕಾರ್ತಿಕ ದೀಪ ಬೆಳಗಿಸುವ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು, ಬೆಟ್ಟದಲ್ಲಿ ದೀಪ ಬೆಳಗಲು ಡಿಸೆಂಬರ್ 1ರಂದು ಆದೇಶ ನೀಡಿದರು. ಇದರಿಂದ ದರ್ಗಾ ಅಥವಾ ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಧಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ದೇವಸ್ಥಾನದ ಟ್ರಸ್ಟ್ ನ್ಯಾಯಾಲಯದ ಈ ಆದೇಶವನ್ನು ಪಾಲಿಸಲೇ ಇಲ್ಲ. ಹೀಗಾಗಿ, ನ್ಯಾಯಾಂಗ ನಿಂದನೆಯಡಿ ಮತ್ತೊಂದು ಅರ್ಜಿ ಹಾಕಿದಾಗ, ನ್ಯಾಯಾಲಯವು ದೀಪ ಬೆಳಗಿಸಲು 10 ಜನರಿಗೆ ಮಾತ್ರ ಅವಕಾಶ ನೀಡಿತು (ಡಿ.3). ಮತ್ತು ಸೂಕ್ತ ಭದ್ರತೆ ಒದಗಿಸಲು ಆದೇಶಿಸಿತು.
ಕಾರ್ಯಕ್ರಮ ನಡೆಸಲು ಬಿಡಬಾರದು ಎಂಬ ಹಠಮಾರಿ ಧೋರಣೆ ತಳೆದ ಡಿಎಂಕೆ ಸರ್ಕಾರ ನ್ಯಾಯಾಲಯದ ಸೂಚನೆಯನ್ನು ಮತ್ತೊಮ್ಮೆ ಉದ್ದೇಶಪೂರ್ವಕವಾಗಿ ಕಡೆಗಣಿಸಿತು. ಮಾತ್ರವಲ್ಲ, ಜನರ ಜಮಾವಣೆ ನಿಷೇಧಿಸಿ (ಸೆಕ್ಷನ್ 163ರಂತೆ), ಆದೇಶ ಹೊರಡಿಸಿತು. ಹಿಂದೂ ಸಂಘಟನೆಗಳ ಮುಖಂಡರು, ಬಿಜೆಪಿ ನಾಯಕರು ಸಹಿತ 600ಕ್ಕೂ ಹೆಚ್ಚು ಜನರು ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, ಪೊಲೀಸರೊಂದಿಗೆ ಘರ್ಷಣೆ ನಡೆಯಿತು.
ಬೆಳಗಿದ ದೀಪ: ಡಿ.3ರಂದು ಕೋರ್ಟ್ ತೀರ್ಪಿನ ಬಳಿಕ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆಯುತ್ತಿರುವಾಗಲೇ ಕೆಲ ಯುವಕರು ಧರ್ಮಸ್ತಂಭ ಏರಿ, ದೀಪ ಬೆಳಗಿದರು.
ವಿಭಾಗೀಯ ಪೀಠ ಆದೇಶ: ಮದ್ರಾಸ್ ನ್ಯಾಯಾಲಯದ ಮದುರೈ ಪೀಠದ ಇಬ್ಬರು ನ್ಯಾಯಮೂರ್ತಿಗಳು ಡಿಸೆಂಬರ್ 4ರಂದು, ಮೊದಲು ನ್ಯಾ.ಸ್ವಾಮಿನಾಥನ್ ನೀಡಿದ ಆದೇಶವನ್ನು ರದ್ದುಗೊಳಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದ್ದು, ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ. ಈ ಮಧ್ಯೆ ಡಿಎಂಕೆ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳ ಮುಖಂಡರು ಶನಿವಾರ ಉಪವಾಸದ ಮೂಲಕ ಪ್ರತಿಭಟನೆ ದಾಖಲಿಸಿದ್ದಾರೆ.
ತಿರುಪರಾನಕುಂದ್ರಂ ಬೆಟ್ಟದ ಮೇಲಿರುವ ಅರುಳ್ವಿುಗು ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅವಕಾಶ ನೀಡಿ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠದ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಆದೇಶಿಸಿದ್ದರು. ಆದರೆ, ನ್ಯಾ. ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಐನ್ಡಿಐಎ ಮೈತ್ರಿಕೂಟದ ಸಂಸದರು ಮಂಗಳವಾರ ಲೋಕಸಭೆ ಸ್ಪೀಕರ್ಗೆ ನೋಟಿಸ್ ನೀಡಿದ್ದಾರೆ. ಅಲ್ಲದೆ, ತಮಿಳುನಾಡಿನ ಡಿಎಂಕೆ ಸರ್ಕಾರ ಸ್ವಾಮಿನಾಥನ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಯತ್ನಿಸುತ್ತಿದೆ. ಈ ಕ್ರಮವನ್ನು 56 ನಿವೃತ್ತ ನ್ಯಾಯಮೂರ್ತಿಗಳು ಖಂಡಿಸಿದ್ದಾರೆ.
ದೇಶ ಕಾಂಗ್ರೆಸ್ವುುಕ್ತವಾಗುತ್ತಿದ್ದರೂ ಆ ಪಕ್ಷದವರ ವರ್ತನೆ ಬದಲಾಗುತ್ತಿಲ್ಲ. ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ಅವರಿಗೆ ವಿಶ್ವಾಸ ಇಲ್ಲ. ತಮ್ಮ ಪರವಾಗಿ ತೀರ್ಪು ಬಂದರೆ ಮಾತ್ರ ಸಂವಿಧಾನ ಮತ್ತು ನ್ಯಾಯಾಂಗವನ್ನು ಒಪ್ಪುವ ಕಾಂಗ್ರೆಸ್ಸಿಗರು, ತಮ್ಮ ವಿರುದ್ಧ ತೀರ್ಪು ಬಂದರೆ ವ್ಯವಸ್ಥೆ ಸರಿ ಇಲ್ಲವೆಂದು ಕೂಗಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ. ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಲೋಕಸಭೆ ಸ್ಪೀಕರ್ಗೆ ನೋಟಿಸ್ ನೀಡಿವೆ.
ಈ ನೋಟಿಸ್ಗೆ ಕರ್ನಾಟಕದ ಕಾಂಗ್ರೆಸ್ ಸಂಸದರಾದ ಹಾಸನದ ಶ್ರೇಯಸ್ ಪಟೇಲ್, ದಾವಣಗೆರೆಯ ಪ್ರಭಾ ಮಲ್ಲಿಕಾರ್ಜುನ ಹಾಗೂ ರಾಯಚೂರಿನ ಜಿ. ಕುಮಾರನಾಯ್ಕ ಅವರೂ ಸಹಿ ಮಾಡಿದ್ದಾರೆ ಎಂದರು. ತಮ್ಮ ಪರ ತೀರ್ಪು ನೀಡಲಿಲ್ಲವೆಂಬ ಕಾರಣಕ್ಕೆ ನ್ಯಾಯಮೂರ್ತಿಗಳ ವಿರುದ್ಧವೇ ವಾಗ್ದಂಡನೆಗೆ ಮುಂದಾಗಿರುವುದನ್ನು ಗಮನಿಸಿದರೆ ಕಾಂಗ್ರೆಸ್ನವರಿಗೆ ನ್ಯಾಯಾಂಗದ ಮೇಲೆ ಎಷ್ಟು ವಿಶ್ವಾಸವಿದೆ ಎಂಬುದು ಸಾಬೀತಾಗುತ್ತದೆ ಎಂದಿದ್ದಾರೆ.