ಮಾತಿನ ಮೇಲೆ ಹಿಡಿತವಿರಲಿ, ಎಚ್ಚರಿಕೆ! ಸುಪ್ರೀಂ ಅಂಗಳದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಬಿಗ್ ಶಾಕ್! ಸಿಜೆಐ ಕೆಂಡಾಮಂಡಲವಾಗಿದ್ದೇಕೆ? Supreme Warns Uddhav Group

ಮಾತಿನ ಮೇಲೆ ಹಿಡಿತವಿರಲಿ, ಎಚ್ಚರಿಕೆ! ಸುಪ್ರೀಂ ಅಂಗಳದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಬಿಗ್ ಶಾಕ್! ಸಿಜೆಐ ಕೆಂಡಾಮಂಡಲವಾಗಿದ್ದೇಕೆ?
ಮಾತಿನ ಮೇಲೆ ಹಿಡಿತವಿರಲಿ, ಎಚ್ಚರಿಕೆ! ಸುಪ್ರೀಂ ಅಂಗಳದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಬಿಗ್ ಶಾಕ್! ಸಿಜೆಐ ಕೆಂಡಾಮಂಡಲವಾಗಿದ್ದೇಕೆ?
Published on
ನವದೆಹಲಿ: ಮಹಾರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸಿದ ಶಿವಸೇನೆ ಸೀಳು ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್(Supreme Warns Uddhav Group) ಅತ್ಯಂತ ಕಠಿಣ ನಿಲುವು ತಳೆದಿದೆ. ನ್ಯಾಯಾಲಯದ ಪ್ರಕ್ರಿಯೆಗಳ ಬಗ್ಗೆ ಮಾಧ್ಯಮಗಳಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದ ಉದ್ಧವ್ ಠಾಕ್ರೆ ಬಣದ ನಾಯಕರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ನ್ಯಾಯಪೀಠ ಗುಡುಗಿದೆ.

ನ್ಯಾಯಪೀಠದ ಆಕ್ರೋಶಕ್ಕೆ ಕಾರಣವೇನು..?

ಈ ಬಗ್ಗೆ ಶುಕ್ರವಾರ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಉದ್ಧವ್ ಬಣದ ನಾಯಕರು ಮಾಧ್ಯಮಗಳಲ್ಲಿ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು. ಒಂದೆಡೆ ನ್ಯಾಯಾಲಯದಲ್ಲಿ ವಿಚಾರಣೆಯ ದಿನಾಂಕವನ್ನು ಕೇಳುತ್ತೀರಿ, ಇನ್ನೊಂದೆಡೆ ಹೊರಗೆ ಹೋಗಿ ಸುಪ್ರೀಂ ಕೋರ್ಟ್ ವಿಳಂಬ ಮಾಡುತ್ತಿದೆ ಎಂದು ಬೇಜವಾಬ್ದಾರಿಯುತವಾಗಿ ಮಾತನಾಡುತ್ತೀರಿ. ಇಂತಹ ನಡವಳಿಕೆಯನ್ನು ನಾನು ಎಂದಿಗೂ ಸಹಿಸುವುದಿಲ್ಲ. ನಿಮ್ಮ ಮಾತುಗಳ ಬಗ್ಗೆ ಎಚ್ಚರವಿರಲಿ ಎಂದು ನ್ಯಾಯಮೂರ್ತಿಗಳು ವಾರ್ನಿಂಗ್ ನೀಡಿದ್ದಾರೆ.
ಮಾಧ್ಯಮಗಳ ಮೂಲಕ ನ್ಯಾಯಾಲಯದ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ತಿಳಿಸಿದ ಪೀಠವು, ನ್ಯಾಯಾಂಗ ಪ್ರಕ್ರಿಯೆಯು ಹೊರಗಿನ ವಾಕ್ಚಾತುರ್ಯದಿಂದ ಪ್ರಭಾವಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

"ನಾವು ಮೂರು ವರ್ಷಗಳಿಂದ ಕಾಯುತ್ತಿದ್ದೇವೆ"

ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ನಮಗೆ ಯಾವುದೇ ಅಡ್ಡಿಯಿಲ್ಲ, ನ್ಯಾಯಾಲಯವು ಯಾವಾಗ ಸಮಯ ನೀಡುತ್ತದೆಯೋ ಆಗ ನಾವು ವಾದ ಮಂಡಿಸಲು ಸಿದ್ಧರಿದ್ದೇವೆ. ಆದರೆ ಕಳೆದ ಮೂರು ವರ್ಷಗಳಿಂದ ನಾವು ಕಾಯುತ್ತಿರುವುದರಿಂದ ನಮಗೆ ಆತಂಕವಿದೆ ಎಂದು ತುರ್ತು ವಿಚಾರಣೆಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ನಾವು ಸಂಜೆ 4 ಗಂಟೆಯವರೆಗೂ ಇಲ್ಲಿ ಕುಳಿತು ಕೆಲಸ ಮಾಡುತ್ತಿದ್ದೇವೆ. ಯಾರಾದರೂ ನಾವು ಸುಮ್ಮನೆ ಕುಳಿತಿದ್ದೇವೆ ಎಂದು ಭಾವಿಸಿದರೆ ಅದು ತಪ್ಪು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಶಿಂಧೆ ಬಣ ಮತ್ತು ಮುಕುಲ್ ರೋಹಟಗಿ ವಾದ

ಏಕನಾಥ್ ಶಿಂಧೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ನ್ಯಾಯಾಲಯದ ಮೇಲೆ ಎಷ್ಟು ಒತ್ತಡವಿರುತ್ತದೆ ಎಂಬುದು ನಮಗೆ ತಿಳಿದಿದೆ. ನಮ್ಮ ಕಡೆಯಿಂದ ಯಾವುದೇ ಇಂತಹ ಹೇಳಿಕೆಗಳನ್ನು ನೀಡಿಲ್ಲ ಮತ್ತು ಯಾವ ಪಕ್ಷವೂ ನ್ಯಾಯಾಲಯದ ಮೇಲೆ ಒತ್ತಡ ಹೇರಬಾರದು ಎಂದು ಬೆಂಬಲಿಸಿದರು.

ಹಿನ್ನೆಲೆ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು

2022ರ ಜೂನ್‌ನಲ್ಲಿ ಏಕನಾಥ್ ಶಿಂಧೆ ನೇತೃತ್ವದ 39 ಶಾಸಕರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಇದರಿಂದಾಗಿ ಮಹಾವಿಕಾಸ್ ಅಘಾಡಿ ಸರ್ಕಾರ ಪತನಗೊಂಡು ಶಿಂಧೆ ಮುಖ್ಯಮಂತ್ರಿಯಾಗಿದ್ದರು. ಅಂದಿನಿಂದ ಪಕ್ಷದ ಹೆಸರು, ಚಿಹ್ನೆ ಮತ್ತು ಶಾಸಕರ ಅನರ್ಹತೆ ಕುರಿತು ಉಭಯ ಬಣಗಳ ನಡುವೆ ಕಾನೂನು ಸಮರ ನಡೆಯುತ್ತಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಈಗ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ನಿಗದಿಪಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net