_1764265019212.webp?w=480&auto=format%2Ccompress&fit=max)
_1764265019212.webp?w=480&auto=format%2Ccompress&fit=max)
ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಶ್ಲೀಲ ಸಂಗತಿಗಳ ಹಾವಳಿ ಮಿತಿಮೀರಿದೆ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್ ಕೂಡ ಈಗ ಗಂಭೀರವಾಗಿ ಪರಿಗಣಿಸಿದೆ. ‘ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವ ಪೋಸ್ಟ್ಗಳಿಗೆ ಹೊಣೆಗಾರಿಕೆ ಅಗತ್ಯವಿದೆ’ ಎಂದು ಪ್ರತಿಪಾದಿಸಿರುವ ನ್ಯಾಯಾಲಯ ಇವುಗಳನ್ನು ನಿಯಂತ್ರಿಸಲು ಒಂದು ಸ್ವತಂತ್ರ ಸಂಸ್ಥೆ ಅಗತ್ಯವಿಲ್ಲವೇ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ. ಮಾತ್ರವಲ್ಲ, ಈ ಕುರಿತಂತೆ ನಾಲ್ಕು ವಾರಗಳ ಒಳಗೆ ಕರಡು ನಿಯಮ ಸಿದ್ಧಪಡಿಸುವಂತೆ ಸೂಚಿಸಿದೆ.
ಡಿಜಿಟಲ್ ವೇದಿಕೆಗಳಲ್ಲಿನ ಅಶ್ಲೀಲ ಹಾಗೂ ಆಕ್ಷೇಪಾರ್ಹ ಕಂಟೆಂಟ್ಗಳನ್ನು ನಿಯಂತ್ರಿಸುವ ಕುರಿತು ಗುರುವಾರ ನಡೆದ ವಿಚಾರಣೆ ವೇಳೆ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸರ್ಕಾರ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಿ, ನಂತರ ಸಮಸ್ಯೆಗಳ ಅಧ್ಯಯನಕ್ಕಾಗಿ ವಿಷಯ ತಜ್ಞರು ಹಾಗೂ ನ್ಯಾಯಾಂಗ ತಜ್ಞರ ಸಮಿತಿ ರಚಿಸಬೇಕು ಎಂದೂ ಪೀಠ ಹೇಳಿದೆ.
‘ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ವೇದಿಕೆಗಳಲ್ಲಿನ ಬಳಕೆದಾರರು ರಚಿಸಿದ ಕಂಟೆಂಟ್ಗಳ ವಿಷಯ ಅಶ್ಲೀಲತೆಯನ್ನು ಮೀರಿ ವಿಕೃತಿಗೆ ವಿಸ್ತರಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಮೂಲ್ಯವಾದುದು, ಹಾಗಂತ ಅದು ವಿಕೃತಿಗೆ ತಲುಪಬಾರದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಸಂದರ್ಭದಲ್ಲಿ ಹೇಳಿದ್ದು ಸೂಕ್ತವಾಗಿದೆ. ಡಿಜಿಟಲ್ ಕಂಟೆಂಟ್ ರೂಪಿಸುವವರು ಸಾಮಾಜಿಕ ಸ್ವಾಸ್ಥ್ಯವನ್ನು ಕಡೆಗಣಿಸಬಾರದು. ಹಾಸ್ಯದ ಹೆಸರಿನಲ್ಲಿ ವಿಕೃತಿಯನ್ನು ತೋರಿಸುತ್ತ, ಸಮಾಜವನ್ನು ತಪು್ಪದಾರಿಗೆ ಎಳೆಯುವುದು ಅಕ್ಷಮ್ಯ. ‘ಸ್ವಯಂ ನಿಯಂತ್ರಣ’ದ ಲಕ್ಷ್ಮಣರೇಖೆಯನ್ನು ಹಲವು ಡಿಜಿಟಲ್ ವೇದಿಕೆಗಳು ಮೇಲಿಂದ ಮೇಲೆ ಉಲ್ಲಂಘಿಸುತ್ತಲೇ ಇವೆ.
ಸಮಸ್ಯೆಯೆಂದರೆ, ಇಂಥ ಕಂಟೆಂಟ್ಗಳ ಬಗ್ಗೆ ಅದನ್ನು ರೂಪಿಸಿದವರನ್ನು ಹೊಣೆಗಾರರಾಗಿಸಬೇಕೆ, ಅವುಗಳನ್ನು ಬಿತ್ತರಿಸುವ ಡಿಜಿಟಲ್ ವೇದಿಕೆಗಳನ್ನು ಹೊಣೆಗಾರರಾಗಿಸಬೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದಕ್ಕೆ ಮುಖ್ಯ ಕಾರಣ ಒಟಿಟಿಯಂಥ ಡಿಜಿಟಲ್ ಮಾಧ್ಯಮದ ನಿಯಂತ್ರಣದ ಕುರಿತಂತೆ ಕೇಂದ್ರ ಸರ್ಕಾರದ ಬಳಿಯೇ ಸ್ಪಷ್ಟ ನೀತಿ ಇಲ್ಲದಿರುವುದು. ಕರಡು ನಿಯಮಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಸ್ವಾಗತಾರ್ಹ. ಕೇಂದ್ರ ಇದನ್ನು ಗಂಭೀರವಾಗಿ ಪರಿಗಣಿಸಲಿ.
ತಜ್ಞರ ಜತೆ ಸಮಾಲೋಚಿಸಿ, ನಾಗರಿಕರ ಅಭಿಪ್ರಾಯ ಪಡೆದು ಸೂಕ್ತ ಕರಡು ನಿಯಮಗಳನ್ನು ರೂಪಿಸಲಿ. ದೇಶದ್ರೋಹಿ ಹಾಗೂ ಸಮಾಜವಿರೋಧಿ ಸಂದೇಶಗಳನ್ನು ಹರಡುವ ಯೂಟ್ಯೂಬ್ನ ಹಲವು ವಾಹಿನಿಗಳ ಮೇಲೆ ನಿಷೇಧದ ಪ್ರಹಾರ ಮಾಡಿದಂತೆ ಈ ವಿಷಯದಲ್ಲೂ ಕಠಿಣ ಕ್ರಮದ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ, ವಿಕೃತಿಯ ಅಟ್ಟಹಾಸಕ್ಕೆ ಜನರು ಮೂಕಪ್ರೇಕ್ಷಕರಾಗಬೇಕಾಗುತ್ತದೆ. ಅಲ್ಲದೆ, ಕೆಟ್ಟ ಕಂಟೆಂಟ್ಗಳನ್ನು ನಿರ್ವಿುಸುವವರು ತಮ್ಮ ಕೃತ್ಯಗಳನ್ನು ಮುಂದುವರಿಸುತ್ತಲೇ ಹೋಗುತ್ತಾರೆ.
ಅಶ್ಲೀಲ ದೃಶ್ಯಾವಳಿಗಳು, ಡೈಲಾಗ್ಗಳು ಹಾಗೂ ಇತರ ಅಸಂಬದ್ಧ ಸಂಗತಿಗಳಿಂದ ಅಪರಾಧಗಳ ಪ್ರಮಾಣವೂ ಏರುಮುಖವಾಗುತ್ತಿದೆ. ಹದಿಹರೆಯ ವಯಸ್ಸಿನವರ ಮೇಲೆ ಅತಿ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ಮಾತ್ರವಲ್ಲ, ಇಂಥ ಸಂಗತಿಗಳಿಂದ ಮಕ್ಕಳನ್ನು ದೂರವಿಡುವುದು ಹೇಗೆ? ಮಕ್ಕಳ ಮನಸ್ಸಿನ ಆರೋಗ್ಯದ ರಕ್ಷಣೆ ಹೇಗೆ ಎಂಬ ಚಿಂತೆ ಪಾಲಕರಿಗೆ ಕಾಡುತ್ತಿದೆ.