ವಂಚಕರು, ಮೋಸಗಾರರು ಎಂಥ ಸ್ಥಳಗಳಲ್ಲೂ ತಮ್ಮ ಕುಕೃತ್ಯಗಳನ್ನು ಎಸಗುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಕೇರಳದ ಪ್ರಸಿದ್ಧ ಧಾರ್ವಿುಕ ಕೇಂದ್ರ ಶಬರಿಮಲೆ ಅಯ್ಯಪ್ಪನ ದೇಗುಲದ ಬಾಗಿಲು ಹಾಗೂ ಮೂರ್ತಿಗೆ ಅಳವಡಿಸಿದ್ದ ಚಿನ್ನವೇ ಕಳ್ಳತನವಾಗಿದ್ದು, ಇದರಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್ನ (ಟಿಡಿಬಿ)ಮಾಜಿ ಅಧಿಕಾರಿಗಳು, ಬೆಂಗಳೂರು ಮೂಲ್ಯದ ಉದ್ಯಮಿ ಷಾಮೀಲಾಗಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್ಐಟಿ) ಹೈಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. 1998-99ರಲ್ಲಿ ಈ ದ್ವಾರವನ್ನು ಉದ್ಯಮಿ ವಿಜಯ್ ಮಲ್ಯ ಅವರ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗಿತ್ತು. ಈ ಚಿನ್ನಕಳವು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಇದು ಆಕಸ್ಮಿಕ ಘಟನೆಯಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಎಸ್ಐಟಿ ಅಭಿಪ್ರಾಯಪಟ್ಟಿದೆ.