Bihar Election | ಆರ್​ಜೆಡಿಗೂ ಕೈ ಕೊಡ್ತಾ ಕಾಂಗ್ರೆಸ್​..? ಮಹಾಮೈತ್ರಿಕೂಟ ಎಡವಿದ್ದೆಲ್ಲಿ..?

Bihar Election | ಬಿಹಾರದ ಚುನಾವಣಾ ಪ್ರಚಾರದಲ್ಲಿ ರಾಹುಲ್​ ಗಾಂಧಿ, ತೇಜಸ್ವಿ ಯಾದವ್​
Bihar Election | ಬಿಹಾರದ ಚುನಾವಣಾ ಪ್ರಚಾರದಲ್ಲಿ ರಾಹುಲ್​ ಗಾಂಧಿ, ತೇಜಸ್ವಿ ಯಾದವ್​
Published on
ಪಟನಾ: ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಆರಂಭಿಕ ಟ್ರೆಂಡ್‌ಗಳು ಆಡಳಿತರೂಢ ಎನ್‌ಡಿಎ ಬಹುಮತ ಪಡೆಯಲಿದೆ ಎನ್ನುವುದನ್ನು ಸೂಚಿಸುತ್ತಿದ್ದು, ಇತ್ತ ಮಹಾಘಟಬಂಧನ್‌ ಕಳಪೆ ಪ್ರದರ್ಶನದ ಮೂಲಕ ನಿರೀಕ್ಷೆಗಳೆಲ್ಲವನ್ನು ಹುಸಿಗೊಳಿಸಿದೆ.
ಬಿಹಾರದ ಮೂಲಕವೇ ತನ್ನ ಮತ ಕಳ್ಳತನ ಯಾತ್ರೆಯ ರಣಕಹಳೆ ಊದಿದ್ದ ಕಾಂಗ್ರೆಸ್​, ರಾಜ್ಯದ ಜನರಿಂದ ಉತ್ತಮ ಸ್ಪಂದನೆ ಪಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಕೈ ಪಕ್ಷ ಕಮಾಲ್​ ಮಾಡಲಿದ್ದು, ಇದು ಮಹಾ ಮೈತ್ರಿಕೂಟದ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವ ಚರ್ಚೆಗಳು ನಡೆದಿದ್ದವು, ಸಿಎಂ ಅಭ್ಯರ್ಥಿಯಾಗಿದ್ದ ಆರ್​ಜೆಡಿಯ ತೇಜಸ್ವಿ ಯಾದವ್​ರನ್ನು ಜನ ಹೊಸ ಭರವಸೆಯಾಗಿ ನೋಡುತ್ತಿದ್ದಾರೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಸದ್ಯ ಬರುತ್ತಿರುವ ಮಾಹಿತಿ ಅದಕ್ಕೆಲ್ಲಾ ವ್ಯತಿರಿಕ್ತವಾಗಿದೆ.
ಚುನಾವಣೆಗೂ ಮುನ್ನ ಮಹಾಘಟಬಂಧನ್​ಗೆ ಹೆಜ್ಜೆಗೊಂದರಂತೆ ಸವಾಲ್​ ಎದುರಾದವು. ಸ್ಥಾನಗಳ ಹಂಚಿಕೆ, ಟಿಕೆಟ್​ ಹಂಚಿಕೆ, ಸಿಎಂ ಅಭ್ಯರ್ಥಿ ಘೋಷಣೆ ಸೇರಿದಂತೆ ಅನೇಕ ವಿಷಯದಲ್ಲಿ ವಿಪಕ್ಷಗಳ ಮೈತ್ರಿಕೂಟ ಹಿಮ್ಮುಖವಾಗಿಯೇ ಚಲಿಸಿತು. ಪ್ರಾರಂಭಿಕ ಅಸಮಧಾನದಿಂದಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಡವಾಗಿ ಪ್ರಚಾರಕ್ಕೆ ಬಂದಿದ್ದು ಎಲ್ಲೋ ಒಂದು ಕಡೆ ಇವರಲ್ಲಿ ಸಮನ್ವಯತೆ ಇಲ್ಲವೇನೋ..?, ಹೀಗಾದರೆ ನಮ್ಮ ಗತಿ ಏನು ಎನ್ನುವುದನ್ನು ಜನರು ಯೋಚಿಸಿದಂತಿದೆ.
ಬಿಹಾರದಲ್ಲಿ ಸುಧೀರ್ಘ ಅಧಿಕಾರ ನಡೆಸಿರುವ ನಿತೀಶ್ವ ಕುಮಾರ್​ ವಿರುದ್ಧದ ಸಹಜವಾಗಿ ಜನರಲ್ಲಿ ಬೇಸರ ಇದ್ದೇ ಇರುತ್ತದೆ, ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆ, ವಲಸೆ ಸೇರಿದಂತೆ ಅನೇಕ ಸವಾಲುಗಳಿದ್ದರು ಇದನ್ನು ಜನರ ಮನಸ್ಸಿನಲ್ಲಿ ಮೂಡುವಂತೆ ಮಾಡಲು ವಿಪಕ್ಷಗಳು ಹಿಂದುಳಿದಿದ್ದು, ಬಿಜೆಪಿ ನಾಯಕರುಗಳ ಅಬ್ಬರದ ಪ್ರಚಾರ, ಜಂಗಲ್​ ರಾಜ್​ ಮರಳುವಿಕೆಯ ಘೋಷಣೆ ಮಹಾಮೈತ್ರಿಕೂಟದ ಹಿನ್ನಡೆಗೆ ಮತ್ತೊಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಈವರೆಗಿನ ಮತ ಎಣಿಕೆಯ ಪ್ರಕಾರ ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಭಾರೀ ಹಿನ್ನಡೆ ಅನುಭವಿಸಿದ್ದು, ಮಹಾಘಟಬಂಧನ್ 243 ಸ್ಥಾನಗಳಲ್ಲಿ 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆರ್‌ಜೆಡಿ 30, ಕಾಂಗ್ರೆಸ್ ಕೇವಲ 4, ಎಡಪಕ್ಷಗಳು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಹಿಂದಿನ ಫಲಿತಾಂಶ..

ಕಳೆದ 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, 19 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಸಿಪಿಐ(ಎಂಎಲ್) (ಲಿಬರೇಷನ್) 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಸುಮಾರು 61 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್​ ಕೇವಲ 4 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.(ಏಜೆನ್ಸೀಸ್​)
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net